ಸಂಪಾದಕೀಯ

ಕುಟುಕು ಕಾರ್ಯಾಚರಣೆ ಇನ್ನೊಂದು ಮುಖ

Published On :

ಪತ್ರಕರ್ತರು ಪತ್ತೇದಾರರಂತೆ ಕೆಲಸ ಮಾಡಿ ಆಧುನಿಕ ಸಾಧನಗಳನ್ನು ಬಳಸಿ ಹಲವು ಭ್ರಷ್ಟಾಚಾರದ ಪ್ರಕರಣಗಳನ್ನು ಬಹಿರಂಗಗೊಳಿಸಿದಾಗ ಜನಸಾಮಾನ್ಯ ವರ್ಗಗಳ ಮೆಚ್ಚುಗೆಯನ್ನು ಪಡೆದಿದ್ದು ನಿಜ. ಇಂತಹ ಕಾರ್ಯಾಚರಣೆಯ ಪರಿಣಾಮವಾಗಿ ಹಲವು ಭ್ರಷ್ಟಾಚಾರಿಗಳಿಗೆ ಶಿಕ್ಷೆಯಾಗಿದ್ದೂ ನಿಜ. ಹಿರಿಯ ವಕೀಲ ಆರ್.ಕೆ. ಆನಂದ ಅವರಿಗೆ ಇಂತಹ ಕುಟುಕು ಕಾರ್ಯಾಚರಣೆಯ ಪರಿಣಾಮವಾಗಿ ಶಿಕ್ಷೆಯಾಗಿದೆ.
ಆದರೆ, ಎಲ್ಲ ಕುಟುಕು ಕಾರ್ಯಾಚರಣೆಯ ವಿಧಾನಗಳನ್ನೂ ಕಾಯಿದೆ ಪಾಲನೆಯ ವಿಧಿಬದ್ಧ ಕ್ರಮ ಎಂದು ಪರಿಗಣಿಸುವುದು ಸಾಧ್ಯವಿಲ್ಲ ಎಂದು ಸುಪ್ರೀಮ್ ಕೋರ್ಟ್ ಗುರುವಾರ ಒಂದು ಮಹತ್ವದ ತೀರ್ಪಿನಲ್ಲಿ ತಿಳಿಸಿದೆ. ಇಂತಹ ಕಾರ್ಯಾಚರಣೆಯಲ್ಲಿ ಪತ್ರಕರ್ತರೇ ಆಗಲಿ, ಯಾರೇ ಆಗಲಿ ಸಾರ್ವಜನಿಕ ಹಿತರಕ್ಷಣೆಯ ನೆಪದಲ್ಲಿ ಕಾಯಿದೆಯನ್ನು ಉಲ್ಲಂಘಿಸಿದರೆ, ಅದು ಸಕ್ರಮವಾಗುವುದಿಲ್ಲ ಎಂದೂ ಸುಪ್ರೀಮ್ ತಿಳಿಸಿದೆ.
ಇಲ್ಲಿ ಸುಪ್ರೀಮ್ ಕೋರ್ಟ್‌ನ ಅಭಿಪ್ರಾಯದಲ್ಲಿ ಇಂತಹ ಕಾರ್ಯಾಚರಣೆ ಆರಂಭವಾಗುವುದೇ ಮೋಸದಿಂದ. ಹೀಗಾಗಿ ನೈತಿಕ ಪ್ರಶ್ನೆಯನ್ನು ಕಡೆಗಾಣಿಸುವಂತಿಲ್ಲ. ಒಬ್ಬ ವ್ಯಕ್ತಿಗೆ ಸುಳ್ಳು ಹೇಳಿ ಆಸೆಯನ್ನು ತೋರಿಸಿ, ಆ ವ್ಯಕ್ತಿ ಆಮಿಷಕ್ಕೆ ಬಲಿಯಾದಾಗ ಯಜ್ಞಪಶುವಂತೆ ಅವನನ್ನು ತಪ್ಪಿತಸ್ಥ ಎಂದು ಕರೆಯುವುದು ನ್ಯಾಯವೂ ಅಲ್ಲ ಧರ್ಮವೂ ಅಲ್ಲ.
ಅಂತಹ ವ್ಯಕ್ತಿಗೆ ಆಸೆಯನ್ನು ತೋರಿಸದೇ ಇದ್ದರೆ, ಅವರು ಆ ಅಪರಾಧವನ್ನು (ಭ್ರಷ್ಟಾಚಾರ) ಮಾಡುತ್ತಿದ್ದರೋ, ಇಲ್ಲವೋ ಎನ್ನುವುದನ್ನು ಹೇಗೆ ಹೇಳುವುದು? ನ್ಯಾಯಪೀಠದ ಗಂಭೀರವಾದ ಪ್ರಶ್ನೆ ಇದು.
ಇಂತಹ ಸನ್ನಿವೇಶದಲ್ಲಿ ಕುಟುಕು ಕಾರ್ಯಾಚರಣೆಗೆ ಮುಂದಾದವರ ಕ್ರಿಮಿನಲ್ ಉದ್ದೇಶ ಹಾಗೂ ವರ್ತನೆ, ಸಾರ್ವಜನಿಕ ಹಿತರಕ್ಷಣೆಯ ದೃಷ್ಟಿಯಿಂದ ತಪ್ಪಲ್ಲ ಎನ್ನುವ ನಿಲವನ್ನೂ ಸುಪ್ರೀಮ್ ಕೋರ್ಟ್‌ನ ಪೀಠ ಒಪ್ಪಿಲ್ಲ.
ಈ ಪ್ರಕರಣ ಸುಪ್ರೀಮ್ ಕೋರ್ಟಿನ ಪೀಠದ ಮುಂದೆ ಬಂದಿದ್ದು, ಎರಡು ಪ್ರಕರಣಗಳಲ್ಲಿ ಕುಟುಕು ಕಾರ್ಯಾಚರಣೆಯನ್ನು ನಡೆಸಿದ್ದ ವ್ಯಕ್ತಿಗಳ ವಿರುದ್ಧ ಹೂಡಿದ್ದ ಮೊಕದ್ದಮೆಯನ್ನು ರದ್ದುಪಡಿಸಬೇಕು ಎನ್ನುವ ಅರ್ಜಿಯ ಮೂಲಕ. ಆ ಅರ್ಜಿಯನ್ನು ನ್ಯಾಯಾಲಯದ ಪೀಠ ಒಪ್ಪಿಲ್ಲ. ಕುಟುಕು ಕಾರ್ಯಾಚರಣೆಯನ್ನು ನಡೆಸಿದವರು ಈಗ ಅವರ ವಿರುದ್ಧದ ಆರೋಪಗಳ ವಿಚಾರಣೆಯನ್ನು ಎದುರಿಸಲೇ ಬೇಕು.
ಈ ತೀರ್ಪಿನಲ್ಲಿ ಸ್ಪಷ್ಟವಾಗಿ ಮೂಡಿ ಬಂದಿರುವ ವಿಚಾರ ಎಂದರೆ, ಸಾರ್ವಜನಿಕ ಹಿತ ರಕ್ಷಣೆಗೆ ಅಥವಾ ಕಾಯಿದೆ ಪಾಲನೆಗೆ, ಕಾಯಿದೆಯನ್ನು ಉಲ್ಲಂಘಿಸಿ ಕ್ರಮ ಕೈಗೊಳ್ಳುವ ಅಧಿಕಾರ ಯಾರಿಗೂ ಇಲ್ಲ ಎನ್ನುವುದು. ಇಲ್ಲಿ ಪತ್ರಕರ್ತರಿಗೆ ವಿಶೇಷವಾದ ಹಕ್ಕೇನೂ ಇಲ್ಲ.
ಅಪರಾಧಗಳ ತನಿಖೆಗಾಗಿಯೇ ನೇಮಕಗೊಂಡಿರುವ ಸಂಸ್ಥೆಗಳು ಕಾಯಿದೆಯಂತೆ ಅಧಿಕಾರ ಪಡೆದ ಅಧಿಕಾರಿಗಳು (ಪೊಲೀಸ್, ಲೋಕಾಯುಕ್ತ) ತಮ್ಮ ಅಧಿಕಾರವನ್ನು ಕಾಯಿದೆಯ ಚೌಕಟ್ಟಿನಲ್ಲಿ ಚಲಾಯಿಸಬಹುದು. ಅವರದ್ದು ಅಧಿಕೃತ ತನಿಖೆ.
ಕೆಲವು ಸಂದರ್ಭಗಳಲ್ಲಿ ಅಧಿಕಾರ ಇಲ್ಲದವರೂ ಬೇರೆ ಬೇರೆ ಹೆಸರುಗಳನ್ನು ಹೇಳಿ, "ವೇಷಧಾರಿಗಳಾಗಿ" ಕುಟುಕು ಕಾರ್ಯಾಚರಣೆ ನಡೆಸಿ, ಸಂಗ್ರಹಿಸಿದ ಮಾಹಿತಿಯನ್ನು ಸಂಬಂಧಪಟ್ಟ ವ್ಯಕ್ತಿಗಳನ್ನು ಬ್ಲಾಕ್‌ಮೇಲ್ ತಂತ್ರಗಳನ್ನು ಬಳಸಿ ಹೆದರಿಸಿರುವ ಘಟನೆಗಳೂ ಬೇರೆ ಬೇರೆ ಸಂದರ್ಭಗಳಲ್ಲಿ ವರದಿಯಾಗಿವೆ. ಆ ಪ್ರಕರಣಗಳಿಗೂ ಈಗಿನ ಸುಪ್ರೀಮ್ ಕೋರ್ಟ್ ತೀರ್ಪಿಗೂ ಏನೇನೂ ಸಂಬಂಧವಿಲ್ಲ.
ಕುಟುಕು ಕಾರ್ಯಾಚರಣೆಯ ವಿವರಗಳಿಗೆ ಸಂಬಂಧಿಸಿದಂತೆ, ನ್ಯಾಯಪೀಠ ಪ್ರಸ್ತಾಪಿಸಿರುವ ನೈತಿಕ ಮೌಲ್ಯಗಳ ಹಾಗೂ ವ್ಯಕ್ತಿಗಳ ಖಾಸಗಿ ಜೀವನದ ಹಕ್ಕುಗಳ ರಕ್ಷಣೆಯ ಪ್ರಶ್ನೆ ಗಂಭೀರವಾದದ್ದು. ಪ್ರಾಯಶಃ ಇಂತಹ ಸೂಕ್ಷ್ಮ ವಿಚಾರದಲ್ಲಿ ಉನ್ನತ ಮಟ್ಟದ ಸಾರ್ವಜನಿಕ ವೇದಿಕೆಗಳಲ್ಲಿ ಚರ್ಚೆ ನಡೆಯಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.