ಸಂಪಾದಕೀಯ

ಭಗವಾನ್ ಉವಾಚ

Published On :

ಏಪ್ರಿಲ್ 26ರ ಕನ್ನಡ ಪ್ರಭದ ಮೈಸೂರು ಆವೃತ್ತಿಯ ಮೂರನೇ ಪುಟದಲ್ಲೊಂದು ವರದಿಯಿತ್ತು. 'ಮೀಸಲು ವ್ಯವಸ್ಥೆಯಡಿ ದಿವಾನರಾದ ಸರ್ ಎಂ ವಿ' ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಸುದ್ದಿ ಗಮನ ಸೆಳೆಯಿತು. ಮೈಸೂರಿನ ಮಾನಸಗಂಗೋತ್ರಿ ಸಮಾಜ ಅಧ್ಯಯನ ವಿಭಾಗದಲ್ಲಿ ಶುಕ್ರವಾರ ನಡೆದ ಡಾ.ಅಂಬೇಡ್ಕರ್ ಜಯಂತಿಯಲ್ಲಿ ಪ್ರೊ.ಕೆ.ಎಸ್. ಭಗವಾನ್ ಅವರು ದಲಿತರು, ಹಿಂದುಳಿದ ವರ್ಗ ಮತ್ತು ಮಹಿಳೆಯರಿಗೆ ಡಾ.ಅಂಬೇಡ್ಕರ್ ಅವರ ಕೊಡುಗೆ ಕುರಿತು ಉಪನ್ಯಾಸ ನೀಡಿದರು ಎಂದು ವರದಿಯೇನೋ ಆಗಿತ್ತು. ಆದರೆ ಈ ವಿಷಯವಾಗಿ ಭಗವಾನರು ಮಾತನಾಡಿಯೇ ಇಲ್ಲ. ಭಗವಾನರಿಗೆ ಆ ಕಾರ್ಯಕ್ರಮದ ಅರಿವೇ ಇರಲಿಲ್ಲವೆಂದು ಅನ್ನಿಸಿತು. ಕಾರಣ ಆ ವೇದಿಕೆಯನ್ನು ಭಗವಾನರು ಸರ್.ಎಂ. ವಿಶ್ವೇಶ್ವರಯ್ಯನವರನ್ನು ಟೀಕಿಸುವುದಕ್ಕಾಗಿಯೇ ಬಳಸಿಕೊಂಡರು.
ಅಲ್ಲದೆ ಬ್ರಾಹ್ಮಣರು ಜಾತಿ ಧರ್ಮದ ಹೆಸರಿನಲ್ಲಿ ಜನರನ್ನು ಅಜ್ಞಾನದ ಕತ್ತಲಲ್ಲಿ ಇರಿಸಿದ್ದಾರೆ ಎಂದೂ ಬಡಬಡಿಸಿದರು. ಬಹುಶಃ ಇವರೂ ಕೂಡ ಅಜ್ಞಾನದ ಕತ್ತಲಲ್ಲೇ ದಿನಕಳೆಯುತ್ತಿರಬಹುದು! ಯಾವುದೇ ವೇದಿಕೆಯಿರಲಿ, ಯಾವುದೇ ಕಾರ್ಯಕ್ರಮವಿರಲಿ ಈ ಭಗವಾನರು ಬಡಬಡಿಸುವುದು ಹೀಗೆಯೇ. ಇವರಿಗೆ ಸ್ವಜಾತಿ ಮೋಹ, ಪರಜಾತಿ ದ್ವೇಷ! ಭಗವಾನರು ತಮ್ಮ ಸೊಸೆಯ ಮೇಲೆ ಕೌಟುಂಬಿಕ ದೌರ್ಜನ್ಯವೆಸಗಿ ಅವರನ್ನು ಮನೆಯಿಂದ ಹೊರಹಾಕಿದ್ದರೆಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಅವರು ಕೌಟುಂಬಿಕ ದೌರ್ಜನ್ಯವೆಸಗಿ ಮಹಿಳೆಗೆ ಕಿರುಕುಳ ಕೊಟ್ಟರೆಂದ ಮಾತ್ರಕ್ಕೆ ಪ್ರೊಫೆಸರರುಗಳೆಲ್ಲಾ ದೌರ್ಜನ್ಯವೆಸಗುತ್ತಾರೆನ್ನಲಾಗದು. ಭಗವಾನರ ಜಾತಿಯವರೆಲ್ಲಾ ಕೌಟುಂಬಿಕ ದೌರ್ಜನ್ಯದ ಆರೋಪಿತರು ಎನ್ನವುದೂ ಮೂರ್ಖತನ. ಭಗವಾನರು ಬ್ರಾಹ್ಮಣರ ವಿಚಾರವಾಗಿ ಆಡಿರುವ ಮಾತೂ ಮೂರ್ಖತನದ ಪರಮಾವಧಿ.
ದಲಿತರ ವಿರುದ್ಧ ದೌರ್ಜನ್ಯಗಳು ನಿಂತಿಲ್ಲ ನಿಜ. ಜಾತಿನಿಂದನೆ ಪ್ರಕರಣಗಳು ದಾಖಲಾಗುತ್ತಲೇ ಇರುತ್ತವೆ. ಭಗವಾನರಲ್ಲೊಂದು ವಿನಂತಿ. ಈ ದಲಿತರ ಮೇಲೆ ನಡೆವ ದೌರ್ಜನ್ಯ, ಹಲ್ಲೆ, ಜಾತಿನಿಂದನೆ ಇತ್ಯಾದಿ ಪ್ರಕರಣಗಳಲ್ಲಿ ಆರೋಪಿಗಳು ಯಾವ ಜಾತಿಗೆ ಸೇರಿದವರು ಎಂದು ತಾವೊಂದು ಅಧ್ಯಯನ ಕೈಗೊಳ್ಳಿ. ಬ್ರಾಹ್ಮಣರ ವಿರುದ್ಧ ಇಂತಹ ಎಷ್ಟು ಪ್ರಕರಣಗಳು ದಾಖಲಾಗಿವೆ ಎಂದು ಬಹಿರಂಗಗೊಳಿಸಿ ಅದನ್ನು ಬೇರೆ ಜಾತಿಯ ಆರೋಪಿಗಳ ಸಂಖ್ಯೆಯೊಂದಿಗೆ ಹೋಲಿಸಿ. ಜಾತಿಯನ್ನೇ ಆಧಾರವಾಗಿರಿಸಿಕೊಂಡು ಭಗವಾನ್ ಬ್ರಾಹ್ಮಣರನ್ನು ಬಯ್ಯುವುದಾದರೆ, ಅದರ ವಿಶ್ಲೇಷಣೆಯೂ ಜಾತಿ ಆಧಾರದಲ್ಲೇ ಆಗಬೇಕಲ್ಲವೇ? ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳಲ್ಲಿ ಆರೋಪಿಗಳ ಸ್ಥಾನದಲ್ಲಿ ಹೆಚ್ಚಾಗಿರುವವರು ಭಗವಾನರ ಜಾತಿಯವರೇ ಹೊರತು ಬ್ರಾಹ್ಮಣರಲ್ಲ ಎಂಬುದು ನನ್ನ ಸವಾಲು. ಜಾತಿಯೊಂದರ ಮೇಲೆಯೇ ಎಲ್ಲಾ ಆಕ್ರೋಶಗಳನ್ನೂ ತಿರುಗಿಸಿ ತಮ್ಮ ಬಂಡವಾಳ ಮುಚ್ಚಿಟ್ಟುಕೊಳ್ಳುವ ಭಗವಾನ್ ಅವರ ಹುನ್ನಾರ ಇಲ್ಲಿಯೇ ಬಯಲಾಗುತ್ತದೆ.
ಯಾವುದೇ ವ್ಯಕ್ತಿ ಅಪರಾಧವೆಸಗಿದರೆ ಆತನ ವಿರುದ್ಧ ಕಾನೂನುಕ್ರಮ ಕೈಗೊಂಡು ಶಿಕ್ಷೆ ವಿಧಿಸಲಿ. ಭಗವಾನ್‌ರವರಿಗೆ ಅವರದೇ 'ಭಾಷೆ'ಯಲ್ಲಿ ತಿಳಿಹೇಳುವುದಕ್ಕಾಗಿ ಮೇಲಿನ ಉದಾಹರಣೆ ಬಳಸಬೇಕಾಯಿತು.ಅಪರಾಧವೆಸಗಿದವರ ಜಾತಿಯನ್ನು ಹೀಯಾಳಿಸುವುದು ಕ್ರೌರ್ಯವೇ ಸರಿ. ಹಲವರ ತಪ್ಪಿಗೆ ಅವರ ಜಾತಿಯನ್ನು ದೂಷಿಸುವುದು ಸರಿಯಲ್ಲ. ಭಗವಾನರ ಮಾತು ಕೇಳುವಾಗ ಕತೆಯೊಂದು ನೆನಪಾಯ್ತು. ವಿದ್ಯಾರ್ಥಿಯೊಬ್ಬ ಪರೀಕ್ಷೆಗೆ ತಯಾರಾಗುತ್ತಿದ್ದ. ತೆಂಗಿನಮರದ ವಿಷಯವಾಗಿ ಆತ ಓದಿ ತಯಾರಾಗಿದ್ದ. ದುರಾದೃಷ್ಟವಷಾತ್ ಆ ಪರೀಕ್ಷೆಯಲ್ಲಿ ತೆಂಗಿನ ಮರದ ಬದಲು ಎಮ್ಮೆಯ ವಿಷಯ ಕೇಳಿದ್ದರು. ಆತನಿಗೆ ಎಮ್ಮೆಯ ಬಗ್ಗೆ ಗೊತ್ತಿರದಿದ್ದರೂ ಪರೀಕ್ಷೆಯಲ್ಲಿ ಬರೆದ-ಎಮ್ಮೆ  ಹಾಲು ನೀಡುತ್ತದೆ. ಎಮ್ಮೆ ತಪ್ಪಿಸಿಕೊಂಡು ಹೋಗದಂತೆ ತೆಂಗಿನ ಮರಕ್ಕೆ ಕಟ್ಟಿಹಾಕುತ್ತಾರೆ. ತೆಂಗಿನಮರ ಕಲ್ಪವೃಕ್ಷ. ಅದರ ಎಲ್ಲ ಉತ್ಪನ್ನಗಳೂ ಉಪಯುಕ್ತವಾದುದು ತೆಂಗಿನಮರ.... ಹೀಗೆ ಸಾಗಿತ್ತು ಆತನ ಬರವಣಿಗೆ. ಎಮ್ಮೆಯ ಬಗ್ಗೆ ಏನನ್ನೂ ತಿಳಿಯದ ಆತ ಎಮ್ಮೆಯನ್ನು ತೆಂಗಿನಮರಕ್ಕೆ ಕಟ್ಟಿಹಾಕಿ ಕೊರೆದಂತೆಯೇ, ಡಾ.ಅಂಬೇಡ್ಕರ್ ಅವರ ಬಗ್ಗೆ ತಿಳಿಯದ ಭಗವಾನರು ವೇದಿಕೆಯನ್ನು ವಿಶ್ವೇಶ್ವರಯ್ಯ ಹಾಗೂ ಅವರ ಜಾತಿಯ ನಿಂದನೆಗಾಗಿ ಬಳಸಿಕೊಂಡಿದ್ದಾರೆ. ಇನ್ನು ಮುಂದಾದರೂ ಕಾರ್ಯಕ್ರಮದ ಸಂಘಟಕರು  ವಿಷಯದ ಅರಿವಿರುವ ಜ್ಞಾನಿಗಳನ್ನು ಕರೆದು ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಲಿ.
-ಪಿ.ಜೆ.ರಾಘವೇಂದ್ರ, ಮೈಸೂರು

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.