'ನಾವೆಲ್ಲರೂ ಭಾರತೀಯರೇ'
ನಾವೆಲ್ಲರೂ ಭಾರತೀಯರೇ, ಒಂದೇ ದೇಶದ ಜನ ಎನ್ನುವ ಪ್ರತಿಜ್ಞೆಯನ್ನು ಸ್ವೀಕರಿಸುವ ಸಮಾರಂಭಗಳು ವರ್ಷದಲ್ಲಿ ಅನೇಕ ಭಾರಿ ನಡೆಯುತ್ತವೆ. ಆದರೆ ಆ ಸಮಾರಂಭ ಮುಗಿದ ಮೇಲೆ, ವಾಸ್ತವದಲ್ಲಿ ಎಷ್ಟು ಜನರಲ್ಲಿ ನಿಜವಾಗಲೂ ಅಂತಹ ಭಾವನೆ ಇರುತ್ತದೆ ಎನ್ನುವುದು ಗಂಭೀರವಾದ ಪ್ರಶ್ನೆಯೇ.
ದೆಹಲಿಯಲ್ಲಿ ಅರುಣಾಚಾಲ ಪ್ರದೇಶದ ಯುವಕ, ಕಾಲೇಜು ವಿದ್ಯಾರ್ಥಿ ನಿಗೂ ತಾನಿಯಾಗೆ ಅಲ್ಲಿನ ಕೆಲವು ವರ್ತಕರು, ತೋರಿಸಿದ ಗತಿ ಈಗ ಈ ಪ್ರಶ್ನೆಯನ್ನು ಪ್ರಸ್ತುತ ಪ್ರಶ್ನೆಯನ್ನಾಗಿ ಪರಿವರ್ತಿಸಿದೆ. ಅರುಣಾಚಲ ಪ್ರದೇಶದ ಶಾಸಕರ ಪುತ್ರನಾದ ನಿಗೂ ತಾನಿಯಾ, ಅಂಗಡಿಯೊಂದರಲ್ಲಿ ಯಾವುದೋ ಕಾರಣಕ್ಕೆ ಜಗಳವಾಡಿ, ಕೋಪದ ಭರದಲ್ಲಿ ಒಂದು ಗಾಜನ್ನು ಒಡೆದಿರಬಹುದು. ಅದಕ್ಕೆ ಪರಿಹಾರ ರೂಪದಲ್ಲಿ ಅವನು ಹತ್ತುಸಾವಿರ ರುಪಾಯಿಗಳನ್ನು ಕೊಟ್ಟಿದ್ದೂ ಆಗಿತ್ತು. ಪೊಲೀಸ್ ಸ್ಟೇಷನ್‌ಗೆ ಹೋಗಿದ್ದೂ ಆಗಿತ್ತು. ಮತ್ತೆ ಅವನನ್ನು ಅಂಗಡಿ ಬೀದಿಗೆ ಕರೆದುಕೊಂಡು ಬಂದು ಹಲವು ವರ್ತಕರು ಬಲವಾಗಿ ಚಚ್ಚಿ ಸಾಯಿಸಿದ್ದೂ ಆಯಿತು. ಮುಂದೆ ಕಾಯಿದೆಯಂತೆ ಕ್ರಮ ನಡೆದಿದೆ.
ಇಲ್ಲಿ ಗಮನಿಸಬೇಕಾದ ವಿಚಾರ ಎಂದರೆ ನಿಗೂ ತಾನಿಯಾ ಈಶಾನ್ಯ ಭಾರತದ ವ್ಯಕ್ತಿಯಾಗದೇ ಇದ್ದರೆ (ಅವರನ್ನು ಗುರ್ತಿಸುವುದು ಸುಲಭ) ಅವನಿಗೆ ಸಾಯುವಂತೆ ಹೊಡೆಸಿಕೊಳ್ಳುವ ಗತಿ ಬರುತ್ತಿತ್ತಾ ಎನ್ನುವುದು. ನಾವೆಲ್ಲರೂ ಭಾರತೀಯರೇ ಎನ್ನುವ ಘೋಷಣೆ ನಿಜವಾಗಿಯೂ ಪರಿಣಾಮಕಾರಿಯಾಗಿ ಪಾಲನೆಯಾಗುತ್ತಿದೆಯೇ ಎಂದು ಕೇಳಿದರೆ, ಇಲ್ಲ ಎಂದೇ ಹೇಳಬೇಕಾದ ಸ್ಥಿತಿ ಇದೆ.
ಹಿಂದೊಮ್ಮೆ, ಬೆಂಗಳೂರೂ ಸೇರಿದಂತೆ, ಭಾರತದ ಅನೇಕ ಊರುಗಳಲ್ಲಿ ಕಲಿಯುವುದಕ್ಕೋ ಅಥವಾ ನೌಕರಿಗೋ ನೆಲೆಸಿದ್ದ ಈಶಾನ್ಯ ಭಾರತೀಯರ ಅಭಿಪ್ರಾಯ ಕುರಿತ ಸಮೀಕ್ಷೆ ನಡೆಸಿದಾಗ ಪ್ರಧಾನವಾಗಿ , ಆ ಪ್ರದೇಶದಿಂದ ಬಂದಿರುವ ಸ್ತ್ರೀಯರು ತಾವೆಲ್ಲ ಪ್ರತಿನಿತ್ಯ ಮುಜುಗರದ ಸ್ಥಿತಿಯಲ್ಲೇ ಬದುಕುತ್ತಿದ್ದೀವಿ ಎಂದೇ ಹೇಳಿದ್ದು.
ಪರಿಸ್ಥಿತಿ ಇರುವುದೂ ಹಾಗೆಯೇ. ಆ ಮಹಿಳೆಯರು ಅನೇಕ ಸಂದರ್ಭಗಳಲ್ಲಿ ಪೊಲೀಸ್ ಠಾಣೆಗಳಿಗೆ ಹೋಗಿ ದೂರು ನೀಡಲು ಪ್ರಯತ್ನಿಸಿದಾಗ ಅವರಿಗೆ ಸಿಗುವ ಉಪದೇಶ ನೀವೆಲ್ಲ ಸ್ವಲ್ಪ ನಿಮ್ಮ ಜೀವನ ವಿಧಾನ, ವಸ್ತ್ರ ವಿನ್ಯಾಸವನ್ನು ಬದಲಾಯಿಸಿಕೊಳ್ಳುವುದು ಒಳಿತು ಎನ್ನುವ ಉಚಿತ ಸಲಹೆ ಸಿಕ್ಕಿತೇ ಹೊರತು, ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ದೇಶದ ಜನಸಾಮಾನ್ಯ ವರ್ಗಗಳ ಮನೋಧರ್ಮವನ್ನು ಈ ವಿಷಯದಲ್ಲಿ ಬದಲಾಯಿಸುವಂತಹ ಕಾರ್ಯಕ್ರಮವೇ ಅಗತ್ಯವಾಗಿದೆ. ಈಶಾನ್ಯ ಭಾರತದ ವಿದ್ಯಾರ್ಥಿಗಳಿಗೆಂದೇ ಪ್ರಮುಖ ನಗರಗಳಲ್ಲಿ ವಿಶೇಷ ವಿದ್ಯಾರ್ಥಿ ನಿಲಯಗಳನ್ನೇ ನಿರ್ಮಿಸುವ ಸಲಹೆಯನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ನೀಡಿದ್ದಾರೆ. ಅದು ಕೇಂದ್ರದ ಪರಿಶೀಲನೆಗೆ ಅರ್ಹವಾದ ವಿಚಾರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

