ಪೊಲೀಸರಿಗೆ ಮುಖ್ಯಮಂತ್ರಿ ಎಚ್ಚರಿಕೆ
ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ಮೇಳದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಲ್ಪ ಸಮಯವಾದರೂ ಮತ್ತೆ ವಿರೋಧ ಪಕ್ಷದ ನಾಯಕರಂತೆ ಮಾತಾಡಿದರೇನೋ ಎನ್ನುವ ಮಟ್ಟಿಗೆ ಖಾರವಾಗಿ ಮಾತಾಡಿದ್ದಾರೆ.
ಅವರು ಮಂಗಳವಾರ ಆ ಸಭೆಯಲ್ಲಿ ಪ್ರಸ್ತಾಪಿಸಿದ ವಿಷಯಗಳೆಲ್ಲ ಜನ ಸಾಮಾನ್ಯರಿಗೆ ತಿಳಿಯದೇ ಇರುವುದೇನೂ ಅಲ್ಲ. ಅದು ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಚೆನ್ನಾಗಿಯೇ ಗೊತ್ತು. ಮುಖ್ಯಮಂತ್ರಿಯಾದರೂ ಸಿದ್ದರಾಮಯ್ಯ ಅವರು ಜನರ ಮಧ್ಯೆ ತಮ್ಮ ವರ್ಷಗಳ ಒಡನಾಟವನ್ನು ಮರೆತಿಲ್ಲ. ಅವರ ಕಠೋರ ಎನ್ನಬಹುದಾದ ಭಾಷಣ ಸದ್ಯದ ಸ್ಥಿತಿಯಲ್ಲಿ ಅಗತ್ಯವಾಗಿತ್ತು. ರಾಜ್ಯದ ಅನೇಕ ನಗರಗಳಲ್ಲಿ ಜೂಜು, ವ್ಯಭಿಚಾರ, ಮಟ್ಕಾ, ಒಂದಂಕಿ ಲಾಟರಿಯಂತಹ ಸಮಾಜ ಘಾತಕ ದಂಧೆಗಳು ನಡೆಯುತ್ತಿರುವುದು ನಿಜ. ಬೆಂಗಳೂರೂ ಸೇರಿದಂತೆ, ರಾಜ್ಯದ ಯಾವುದೇ ನಗರದಲ್ಲೇ ಆಗಲಿ, ಪೊಲೀಸರಿಗೆ ತಿಳಿಯದಂತೆ ಇಂತಹ ದಂಧೆಗಳು ನಡೆಯುವುದು ಅಸಾಧ್ಯ. ಹಾಗೇನಾದರೂ ನಡೆದರೆ, ಪೊಲೀಸ್ "ಬೀಟ್" ವ್ಯವಸ್ಥೆಯ ಉಪಯೋಗವಾದರೂ ಏನು?
ಸಿದ್ದರಾಮಯ್ಯ ಅವರು ಬಹಿರಂಗವಾಗಿ ಪ್ರಸ್ತಾಪಿಸಿದ ಒಂದು ಪ್ರಕರಣ ನಿಜಕ್ಕೂ ಗಮನಾರ್ಹ - ಇದು ಪತ್ರಿಕೆಗಳಲ್ಲೂ ವರದಿಯಾಗಿತ್ತು. ಎಚ್.ಎ.ಎಲ್. ಪ್ರದೇಶದಲ್ಲಿ ಕಳ್ಳರಿಂದ ಅಪಾರ ಹಣವನ್ನು ಕಸಿದುಕೊಂಡಿದ್ದ ಒಬ್ಬ ಅಧಿಕಾರಿ ಸಿಕ್ಕಿಬಿದ್ದ ಪ್ರಕರಣ ಅದು. ಆ ಅಧಿಕಾರಿಯನ್ನು ಸಸ್ಪೆಂಡ್ ಮಾಡಿ, ತನಿಖೆ ನಡೆಸುವುದು ಎಂದರೇನರ್ಥ?
ಯಾರಾದರೂ ಬೇರೆಯವರು ಇಂತಹ ಅಪರಾಧಕ್ಕಿಂತ ತೀರ ಕಡಿಮೆ ರೀತಿಯದ್ದು ಎನ್ನುವಂತಹ ಅಪರಾಧ ಮಾಡಿದರೂ, ಪೊಲೀಸರು ಮೊದಲು ಮಾಡುವ ಕೆಲಸ ಎಂದರೆ ಠಾಣೆಯಲ್ಲಿ ಆ ವ್ಯಕ್ತಿಯ ವಿಚಾರಣೆ. ಆದರೆ ಆರೋಪಿ ಪೊಲೀಸ್ ಪಡೆಗೇ ಸೇರಿದ್ದರೆ, ಅವರ ತನಿಖೆ ಮೆದುವಾಗಿ ಆಗಬೇಕೆನ್ನುವ ನಿಯಮ ಎಲ್ಲಿದೆ?
ನಿಜ. ಪೊಲೀಸರ ಮೇಲೆ ನಗರಗಳಲ್ಲಿ ವಿಪರೀತ ಒತ್ತಡಗಳಿವೆ. ಆ ಒತ್ತಡದ ನಡುವೆಯೇ ಅವರು ಅಪರಾಧಗಳ ತನಿಖೆಯನ್ನು ಮಾಡಬೇಕು, ನ್ಯಾಯಾಲಯ ಒಪ್ಪುವಂತಹ ಸಾಕ್ಷ್ಯ ಆಧಾರವನ್ನು ಪತ್ತೆ ಹಚ್ಚಬೇಕು, ಅವರ "ಆಧಿಪತ್ಯಕ್ಕೆ ಒಳಪಟ್ಟ" ಪ್ರದೇಶದಲ್ಲಿ ಶಾಂತಿ ಸುರಕ್ಷಾ ವ್ಯವಸ್ಥೆಯನ್ನು ನೋಡಿಕೊಳ್ಳಬೇಕು. ಇದಕ್ಕೆಲ್ಲ ಬೇಕಾದಷ್ಟು ಸಂಖ್ಯೆಯಲ್ಲಿ ಸಿಬ್ಬಂದಿ ಇಲ್ಲ. ಪ್ರತಿಷ್ಠಿತರು - ಅತಿಪ್ರತಿಷ್ಠಿತರ ಯೋಗ ಕ್ಷೇಮದ ವ್ಯವಸ್ಥೆಯೂ ಆಗಬೇಕು. ಕಷ್ಟದ ಕೆಲಸವೇ. ಹಾಗಂತ ಕೆಟ್ಟ ಕೆಲಸ ಮಾಡುವ ಪೊಲೀಸರ ವಿಚಾರದಲ್ಲಿ ಮೌನವಾಗಿರಬೇಕೆ? ಖಂಡಿತ ಇಲ್ಲ. ಈಗಿನ ಕಾಯಿದೆಯಲ್ಲೇ ತಪ್ಪು ಮಾಡಿದ ಪೊಲೀಸರ ವಿರುದ್ಧ ದೂರು ಕೊಡಲು ಅವಕಾಶವಿದೆ. ಆದರೆ ಸಾರ್ವಜನಿಕರು ಕೊಟ್ಟ ದೂರಿನ ಗತಿ ಏನಾಗುತ್ತದೆ ಎನ್ನುವುದು ನಿಜಕ್ಕೂ ರಹಸ್ಯವೇ. ಅದನ್ನು ಪ್ರಕಟಿಸಲೇ ಬೇಕೆನ್ನುವ ನಿಯಮವಿದ್ದರೆ, ಕಾಯಿದೆ ಪಾಲನೆ ವ್ಯವಸ್ಥೆಯ ನಿಜವಾದ ಅವಸ್ಥೆ ಜನರಿಗೆ ಗೊತ್ತಾಗುತ್ತಿತ್ತು.
ತಪ್ಪು ಮಾಡಿದ ಪೊಲೀಸರ ವಿರುದ್ಧ ದೂರುಗಳು ಬಂದಾಗ, ಅದರ ವಿಚಾರಣೆಯೇ ನಡೆಯುವುದಿಲ್ಲ ಎಂದೇನೂ ಅಲ್ಲ. ನಿಯಮಗಳಂತೆ ವಿಚಾರಣೆ ನಡೆದು "ಕಡಿಮೆ ಶಿಕ್ಷೆ"ಯಾಗುತ್ತಿದೆ ಅಷ್ಟೇ. ಸಿದ್ದರಾಮಯ್ಯ ಅವರು ಪೊಲೀಸ್ ವೈಫಲ್ಯಕ್ಕೆ ಆಯಾ ಪ್ರದೇಶದ ಹಿರಿಯ ಅಧಿಕಾರಿಗಳೇ ಜವಾಬ್ದಾರಿ ಹೊರಬೇಕಾಗುವುದೆಂದು ಎಚ್ಚರಿಕೆ ನೀಡಿರುವುದು ಸರಿಯಾಗಿಯೇ ಇದೆ. ಆದರೆ, ಈಗಿನ ಕೆಟ್ಟ ಪರಿಸ್ಥಿತಿ ಸುಧಾರಣೆಯಾಗುವುದು ಪೊಲೀಸ್ ಕಾರ್ಯಾಚರಣೆಯಲ್ಲಿ ರಾಜಕಾರಣಿಗಳ ಹಾಗೂ ಇತರ ಪ್ರತಿಷ್ಠಿತ ಸಮಾಜದ ನಾಯಕರ ಕೈವಾಡಕ್ಕೆ ಅವಕಾಶವಿಲ್ಲದಂತಹ ವಾತಾವರಣವನ್ನು ನಿರ್ಮಿಸಿದಾಗ ಮಾತ್ರ. ಅದನ್ನು ಸರ್ಕಾರ ಮಾಡಬೇಕು.
ಪೊಲೀಸರು ಸಿವಿಲ್ ವ್ಯಾಜ್ಯಗಳನ್ನೂ ಕ್ರಿಮಿನಲ್ ವ್ಯಾಜ್ಯಗಳಾಗಿ ಪರಿವರ್ತಿಸಿ, ಅಮಾಯಕರನ್ನು ಗೋಳು ಗುಟ್ಟಿಸುವುದು ವ್ಯಾಪಕವಾಗಿದೆ. ಭೂವಿವಾದ ಬಾಡಿಗೆ ಮನೆ ಬಿಡಿಸುವುದು, ಸಾಲದ ವ್ಯವಹಾರಗಳಿಗೂ ಪೊಲೀಸರಿಗೂ ಸಂಬಂಧವಿಲ್ಲದಂತ ವ್ಯವಸ್ಥೆಯನ್ನು ರೂಪಿಸಬೇಕು. ಹಿರಿಯ ಅಧಿಕಾರಿಗಳು ಕಾಲಕಾಲಕ್ಕೆ ತಮ್ಮ ಅಧೀನ ಕಾರ್ಯಾಲಯಗಳ ಪರಿಶೀಲನೆಗೆ ಮುಂದಾಗಬೇಕು. ಅದು ಕೇವಲ ಶಾಸ್ತ್ರದ ಪಾಲನೆಯಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

