ಹೊಸ ಲೋಕಾಯುಕ್ತ ವ್ಯವಸ್ಥೆ ಜನಾಭಿಪ್ರಾಯ ಸಂಗ್ರಹಿಸಿ
ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ, ಜನರ ಪರವಾಗಿ ಸರ್ಕಾರ ರೂಪಿಸಿದ ಸಾಧನ ಲೋಕಪಾಲ- ಲೋಕಾಯುಕ್ತ ವ್ಯವಸ್ಥೆ. ಅದಕ್ಕೆ ಮುಂಚೆಯೂ, 1960ರ ದಶಕದಲ್ಲೇ ಜಾಗೃತಿ ಆಯೋಗ, ಆಯುಕ್ತರ ವ್ಯವಸ್ಥೆ ಜಾರಿಗೆ ಬಂದಿತ್ತು. ಈ ವ್ಯವಸ್ಥೆಯಲ್ಲಿ ಏಕರೂಪತೆ ಇರಲಿಲ್ಲ.
ಕರ್ನಾಟಕದಲ್ಲಿ ಲೋಕಾಯುಕ್ತ ವ್ಯವಸ್ಥೆಯನ್ನು ಜಾರಿಗೆ ತರಲು ದೇವರಾಜ ಅರಸು ಅವರು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ರಾಜ್ಯದ ಲೋಕಾಯುಕ್ತ ಶಾಸನವನ್ನು ರಚಿಸುವುದರಲ್ಲಿ ಯಶಸ್ವಿಯಾಗಿದ್ದು ಜನತಾ ಪಕ್ಷದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು.
ಆ ವೇಳೆಗಾಗಲೇ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಲೋಕಾಯುಕ್ತ- ಉಪ ಲೋಕಾಯುಕ್ತ ವ್ಯವಸ್ಥೆ ಇದ್ದರೂ, ನಿಜವಾದ ತನಿಖೆಯ ಅಧಿಕಾರ ಸರ್ಕಾರದ ಕೈಯಲ್ಲೇ ಇದ್ದಿದ್ದರಿಂದ ಆ ವ್ಯವಸ್ಥೆಯಲ್ಲೂ ಜನರಿಗೆ ಭರವಸೆ ಮೂಡಲಿಲ್ಲ. ಆದರೂ ಅದೇ ವ್ಯವಸ್ಥೆಯ ಮೂಲಕವೇ ಕರ್ನಾಟಕದಲ್ಲಿ ಹಲವಾರು ಪ್ರಸಿದ್ಧ ಪ್ರಕರಣಗಳ ಇತಿಹಾಸವೂ ನಿರ್ಮಾಣವಾಗಿದೆ.
1984ರ ಕಾಯಿದೆಯಂತೆಯೇ ಭ್ರಷ್ಟ ಹಿರಿಯ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಮೇಲೆ ತನಿಖೆ ನಡೆಸಿ, ಆರೋಪಗಳನ್ನು ಹೊರಿಸಿ ದಾವಾ ಹೂಡಲು ಲೋಕಾಯುಕ್ತರಿಗೆ, ಸರ್ಕಾರದ ಪರವಾನಗಿ ಬೇಕಾಗಿತ್ತು. ಈ ಒಂದು ವಿಧಿಯೇ ಇದುವರೆಗೆ ಲೋಕಾಯುಕ್ತ ವ್ಯವಸ್ಥೆಯಿಂದ ಹೆಚ್ಚು ಫಲ ಸಿಗಲು ಅಡ್ಡಿಯಾಗಿದ್ದು.
ಇಲ್ಲಿ ಕಂಡುಬಂದಿದ್ದ, ಈಗಲೂ ಕಂಡುಬಂದಿರುವ ಮುಖ್ಯವಾದ ಸಮಸ್ಯೆ ಎಂದರೆ ಭ್ರಷ್ಟ ಅಧಿಕಾರಿಗಳು- ರಾಜಕಾರಣಿಗಳ ನಡುವಣ ಅಪವಿತ್ರ ಸಂಬಂಧ. ಅನೇಕ ಸಂದರ್ಭಗಳಲ್ಲಿ ಈ ಸಂಬಂಧವನ್ನು ಭಾರತೀಯ ಸಾಕ್ಷ್ಯ ಸಂಹಿತೆಯ ಚೌಕಟ್ಟಿನ ಒಳಗೆ ಋಜುವಾತು ಮಾಡುವುದು ಅಸಾಧ್ಯವೆನ್ನುವುದು ಸಾಬೀತಾದ ಮೇಲೆ, ಆರೋಪ ಹೊರಿಸುವ, ತನಿಖೆ ನಡೆಸುವ ಹಾಗೂ ಶಿಕ್ಷೆಗೆ ಶಿಫಾರ್ಸು ಮಾಡುವ ಅಧಿಕಾರ ಒಂದೇ ಸಂಸ್ಥೆಯಲ್ಲಿ ಕೇಂದ್ರೀಕೃತವಾದರೆ ನ್ಯಾಯ ದಾನದಲ್ಲೂ ಲೋಪ-ದೋಷಗಳು ಸೇರಿಕೊಳ್ಳುವ ಭೀತಿಯೂ ಇತ್ತು.
ಆದರೂ ರಾಜ್ಯದಲ್ಲಿನ ಲೋಕಾಯುಕ್ತ ವ್ಯವಸ್ಥೆ ತನ್ನ ಇತಿಮಿತಿಯ ಚೌಕಟ್ಟಿನಲ್ಲೇ ಸಾಧ್ಯವಿರುವಷ್ಟು ಮಟ್ಟಿಗೂ ತೃಪ್ತಿಕರವಾಗಿ ಕೆಲಸ ಮಾಡಿದ್ದೂ ನಿಜ. ಈ ಸಮಯದಲ್ಲೇ ಕೇಂದ್ರದಲ್ಲಿ ಬ್ರಹ್ಮಾಂಡ ಸ್ವರೂಪದ ಭ್ರಷ್ಟಾಚಾರದ ಆರೋಪಗಳ ತನಿಖೆ, ಕರ್ನಾಟಕ- ಆಂಧ್ರ ಪ್ರದೇಶ, ಗೋವಾಗಳಲ್ಲಿ ಅಕ್ರಮ ಗಣಿಗಾರಿಕೆಯ ಪ್ರಕರಣಗಳ ತನಿಖೆ ಹಿಡಿದ ದಾರಿಯ ಹಿನ್ನೆಲೆಯಲ್ಲಿ ಅಣ್ಣಾ ಹಜಾರೆ ನೇತೃತ್ವದಲ್ಲಿ ಜನಲೋಕಪಾಲ ವ್ಯವಸ್ಥೆಗಾಗಿ ನಡೆದ ಸಂಘರ್ಷ ಫಲ ನೀಡಿದ್ದು.
ಸ್ವತಂತ್ರ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಒಂದು ಶಾಸನವನ್ನು ರಚಿಸುವ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರದ ಆರು ಹಿರಿಯ ಮಂತ್ರಿಗಳು, ಹೋರಾಟಗಾರರ ಪ್ರತಿನಿಧಿಗಳ ಜತೆ ಎದುರು-ಬದುರಾಗಿ ಕೂತು ವಿಚಾರ ವಿನಿಮಯ ನಡೆಸಿದ ಪ್ರಕ್ರಿಯೆ ನಡೆದಿದ್ದು ಆಗಲೇ. ಅದು ಸಂಪೂರ್ಣ ಯಶಸ್ವಿ ಎನ್ನುವಂತಿಲ್ಲ.
ಆದರೂ ಸಂಸತ್ತು ಅಂಗೀಕರಿಸಿದ ಲೋಕಪಾಲ- ಲೋಕಾಯುಕ್ತ ವಿಧೇಯಕದಲ್ಲಿನ ನಿಯಮಗಳ ಆಧಾರದ ಮೇಲೆ ರಾಜ್ಯಗಳು ತಮ್ಮ ಲೋಕಾಯುಕ್ತ ಕಾಯಿದೆಗಳ ಬದಲಾವಣೆಗೆ ಅಥವಾ ಹೊಸ ಕಾಯಿದೆಗಳ ರಚನೆಗೆ ಮುಂದಾಗಿವೆ. ಅದರಲ್ಲಿ ಕರ್ನಾಟಕ ಸರ್ಕಾರ ಮುಂದಿನ ಸಾಲಿನಲ್ಲೇ ಇದೆ.
ರಾಜ್ಯ ಸಚಿವ ಸಂಪುಟ ಹೊಸದೊಂದು ಲೋಕಾಯುಕ್ತ ವಿಧೇಯಕವನ್ನು ಒಪ್ಪಿದೆ. ಸಾಧ್ಯವಾದರೆ ಅದನ್ನು ಈಗಿನ ವಿಧಾನ ಮಂಡಲದ ಅಧಿವೇಶನದಲ್ಲೇ ಚರ್ಚೆಗೆ ಒಳಪಡಿಸುವ ಉದ್ದೇಶ ಸರ್ಕಾರದ್ದು. ನೂತನ ವಿಧೇಯಕದಲ್ಲಿ ಮುಖ್ಯಮಂತ್ರಿ, ಮಂತ್ರಿಗಳನ್ನು ನೇರವಾಗಿ ಕಾಯಿದೆಯ ವ್ಯಾಪ್ತಿಯಲ್ಲಿ ಸೇರಿಸುವುದು, ಆರೋಪಗಳ ತನಿಖೆಗೆ ಒಂದು ಪ್ರತ್ಯೇಕ ಜಾಗೃತಿ ಆಯೋಗ ಹಾಗೂ ಆಯುಕ್ತರ ವ್ಯವಸ್ಥೆ, ಪ್ರಕರಣ ವಿಚಾರಣೆಗೆ ದಾಖಲಾಗುವ ಮುನ್ನವೇ ಪೂರ್ವಭಾವಿ ತನಿಖಾ ವ್ಯವಸ್ಥೆ ಹಾಗೂ ಲೋಕಾಯುಕ್ತರಿಗೆ ಕೆಲವು ವಿಶೇಷ ಅಧಿಕಾರವನ್ನು ಕೊಡುವ ಅಂಶಗಳೂ ಅಡಕವಾಗಿವೆ.
ಭ್ರಷ್ಟಾಚಾರ ವಿರೋಧಿ ಹೋರಾಟದ ಉತ್ಸಾಹದ ಭರದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ಕೆಲಸ ಮಾಡುವ ಹಿರಿಯ ಅಧಿಕಾರಿಗಳ ನಿರ್ಧಾರಗಳನ್ನು ಹೆಜ್ಜೆ ಹೆಜ್ಜೆಗೂ ವಿಮರ್ಶೆಗೆ ಒಳಪಡಿಸುವಂತಹ ನಿಯಮಗಳಿದ್ದರೆ, ಯಾವ ಅಧಿಕಾರಿಯೂ ನಿರ್ಧಾರದ ಅಧಿಕಾರವನ್ನು ಚಲಾಯಿಸುವುದಿಲ್ಲ ಎನ್ನುವ ಭೀತಿಯೂ ಈಗಾಗಲೇ ವ್ಯಕ್ತವಾಗಿದೆ.
ಸಂಸತ್ತಿನಲ್ಲೇ ಕೆಲವು ಅನುಭವಸ್ಥ- ಹಿರಿಯ ಸದಸ್ಯರು ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರಿಗಳು ಜವಾಬ್ದಾರಿಯಿಂದ ನುಸುಳಿಕೊಳ್ಳುವ ಪ್ರವೃತ್ತಿ ಹೆಚ್ಚಲಿದೆ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ. ಅದನ್ನು ಸುಲಭವಾಗಿ ಕಡೆಗಣಿಸುವಂತಿಲ್ಲ. ದಕ್ಷ ಆಡಳಿತ ವ್ಯವಸ್ಥೆಯಲ್ಲಿ ಪ್ರಾಮಾಣಿಕವಾಗಿ ಅಧಿಕಾರವನ್ನು ಚಲಾಯಿಸುವ ಅಧಿಕಾರಿಗಳು, ಮಂತ್ರಿಗಳ ವಿರುದ್ಧ ಹಗರಣಗಳ ಆರೋಪ ಹೊರಿಸುವುದು ಅಸಾಧ್ಯವಾಗುವಂತಹ ವ್ಯವಸ್ಥೆಯೂ ಇರಲೇಬೇಕು. ಉದ್ದೇಶಿತ ವಿಧೇಯಕದಲ್ಲಿ ಆ ಅಂಶವನ್ನು ಆರೋಪದ ತನಿಖಾ ಹಂತದಲ್ಲೇ ಅಳವಡಿಸಲಾಗಿದೆ.
ಹೊಸ ವಿಧೇಯಕದಲ್ಲಿ ಒಂಬತ್ತು ಸದಸ್ಯರ ಕಾವಲು ಸಮಿತಿಯ ರಚನೆಯ ಸಲಹೆಯೂ ಇದೆ. ಕರಡು ವಿಧೇಯಕವನ್ನು ಪರಿಶೀಲಿಸಿರುವ ಕೆಲವು ತಜ್ಞರು, ಹಲವು ವಿಧಿಗಳನ್ನು ಕುರಿತು ಭಿನ್ನಾಭಿಪ್ರಾಯಗಳನ್ನು ಪ್ರಕಟಸಿದ್ದಾರೆ.
ಇಂತಹ ವಿಧೇಯಕವನ್ನು ಆತುರದಲ್ಲಿ ಅಂಗೀಕರಿಸುವುದಕ್ಕಿಂತ, ವಿಧಾನ ಮಂಡಲದಲ್ಲಿ ಚರ್ಚೆ ನಡೆದ ಅನಂತರ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೂ ಅವಕಾಶ ಒದಗಿಸುವುದು ಒಳ್ಳೆಯದು. ಚುನಾವಣೆಯ ವಾತಾವರಣದಲ್ಲಿ ಇಂತಹ ಕಾಯಿದೆಯ ರಚನೆ ಒಳ್ಳೆಯದಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

