ಸಂಪಾದಕೀಯ

ಜಲಾಂತರ್ಗಾಮಿ ದುರಂತ: ತನಿಖೆ ನಿಲ್ಲಬಾರದು

Published On :

ಐಎನ್‌ಎಸ್ 'ಸಿಂಧೂರತ್ನ'ದಲ್ಲಿ ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ ಭಾರತೀಯ ನೌಕಾಪಡೆಯ ಮುಖ್ಯಸ್ಥ, ನೇರ ನಡೆಯ ಪ್ರಾಮಾಣಿಕ ವ್ಯಕ್ತಿ ಎಂದೇ ಹೆಸರಾದ ಅಡ್ಮಿರಲ್ ಡಿ.ಕೆ.ಜೋಶಿ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದ್ದು ವೈಯಕ್ತಿಕ ನೆಲೆಯಲ್ಲಿ ಸರಿಯಾದ ನಿರ್ಧಾರವೇ ಆಗಿದೆ. ಆದರೆ ಅಚ್ಚರಿಯ ಸಂಗತಿಯೆಂದರೆ ಸರ್ಕಾರವು ಅವರ ರಾಜಿನಾಮೆಯನ್ನು ತರಾತುರಿಯಲ್ಲಿ ಅಂಗೀಕರಿಸಿದ್ದು. ಸೇನಾಪಡೆಯಲ್ಲಿ ಇದೊಂದು ಅಪರೂಪದ ಪ್ರಸಂಗ. 1959ರಷ್ಟು ಹಿಂದೆ ಜನರಲ್ ಕೆ.ಎಸ್.ತಿಮ್ಮಯ್ಯ ಕೂಡ ರಾಜೀನಾಮೆ ನೀಡಿದ್ದರು. ಆದರೆ ಅದು ಅಂಗೀಕಾರ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನೋಡಿದಾಗ ಅಡ್ಮಿರಲ್ ಜೋಶಿಯವರ ಕ್ರಮ ಅಭೂತಪೂರ್ವ ಎಂದೇ ಹೇಳಬೇಕು.
ಭಾರತೀಯ ನೌಕಾಪಡೆಗೆ ಜಲಾಂತರ್ಗಾಮಿಗಳನ್ನು ರಶಿಯಾದಿಂದಲೇ ತರಿಸಿಕೊಳ್ಳಲಾಗುತ್ತಿದೆ. ಜಲಾಂತರ್ಗಾಮಿಗಳು ನೌಕಾಪಡೆಯ ಬಲವನ್ನು ವರ್ಧಿಸಲು ಅಗತ್ಯವಾಗಿ ಬೇಕು. ಜಲಾಂತರ್ಗಾಮಿಗಳ ಅವಘಡ ಇದೇ ಮೊಲದ ಬಾರಿ ಏನಲ್ಲ. ಈ ಹಿಂದೆಯೂ ಸಂಭವಿಸಿದೆ. ಹಿಂದೊಮ್ಮೆ ನಡೆದ ದುರಂತದಲ್ಲಿ ರಶಿಯಾದ 17 ಸೈನಿಕರೇ ಬಲಿಯಾಗಿದ್ದರು.
ಸೇನಾಪಡೆಯ ಶಸ್ತ್ರಾಸ್ತ್ರ ಖರೀದಿ ಒಪ್ಪಂದಗಳು ದೊಡ್ಡ ಹಗರಣಗಳನ್ನೇ ಉಂಟುಮಾಡಿವೆ. ನೌಕಾಪಡೆಯ ಹಿಂದಿನ ಅಡ್ಮಿರಲ್ ಮೇಲೆ ಸಂಶಯದ ಕರಿನೆರಳು ಬಿದ್ದಿದೆ. ತನಿಖಾ ಸಂಸ್ಥೆಗಳು ಅವರನ್ನು ತನಿಖೆಗೂ ಒಳಪಡಿಸಿವೆ.
ಸೇನಾಪಡೆಗಳ ಸಾಮರ್ಥ್ಯವನ್ನು ಸದಾಸನ್ನದ್ಧ ಸ್ಥಿತಿಯಲ್ಲಿ ಇಡಬೇಕಾದದ್ದು ಅದರ ನೇತೃತ್ವ ವಹಿಸಿದವರ ಹೊಣೆ. ನೌಕಾಪಡೆಯ ಆಧುನೀಕರಣಕ್ಕೆ ಹಲವಾರು ಪ್ರಸ್ತಾಪಗಳನ್ನು ಸಲ್ಲಿಸಲಾಗಿತ್ತು. ಆದರೆ ಅವು ಕಾರ್ಯರೂಪಕ್ಕೆ ಬರುವಲ್ಲಿ ಆಗಿರುವ ವಿಳಂಬದಿಂದ ಹತಾಶೆಗೊಂಡು ಅಡ್ಮಿರಲ್ ಜೋಶಿ ರಾಜೀನಾಮೆ ನೀಡಿರುವ ಸಾಧ್ಯತೆಯೂ ಇದೆ. ಏಳು ತಿಂಗಳ ಅವಧಿಯಲ್ಲಿ ನೌಕಾಪಡೆಯಲ್ಲಿ ಸುಮಾರು ಹತ್ತು ಅವಘಡಗಳು ನಡೆದಿರುವುದು ಬೆಳಕಿಗೆ ಬಂದಿವೆ.
ಅಡ್ಮಿರಲ್ ಜೋಶಿಯವರ ರಾಜೀನಾಮೆಯಿಂದ ಅವಘಡದ ಸಂಬಂಧದಲ್ಲಿ ನಡೆಯುವ ತನಿಖೆಯು ನಿಲ್ಲಬಾರದು. ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿರುವುದು ಅವರ ವೈಯಕ್ತಿಕ ಘನತೆಯನ್ನು ಎತ್ತಿತೋರಿಸುತ್ತದೆ. ಅವರಿಗೆ ಇನ್ನೂ ಹದಿನೈದು ತಿಂಗಳು ಸೇವಾವಧಿ ಇದ್ದದ್ದು ಗಮನಾರ್ಹವಾದ ಅಂಶ.  ಭೂಸೇನೆಯ ಹಿಂದಿನ ಮುಖ್ಯಸ್ಥರು ಜನ್ಮದಿನದ ದಾಖಲೆಯ ಗೊಂದಲದಿಂದಾಗಿ ಅಧಿಕಾರದಲ್ಲಿ ಮುಂದುವರಿಯಲು ಸುಪ್ರೀಂಕೋರ್ಟಿನ ಮೆಟ್ಟಿಲನ್ನೂ ಏರಿದ್ದರು. 2005-06ರಲ್ಲಿ ಅಂದಿನ ಅಡ್ಮಿರಲ್ ಅರುಣ್ ಪ್ರಕಾಶ್ ಅವರು ರಹಸ್ಯ ಸೋರಿಕೆ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದರು. ಆದರೆ ಆಗ ರಕ್ಷಣಾ ಸಚಿವರಾಗಿದ್ದ ಪ್ರಣಬ್ ಮುಖರ್ಜಿಯವರು ಅದನ್ನು ಸ್ವೀಕರಿಸಿರಲಿಲ್ಲ. ಹಿಂದೆ ರೇಲ್ವೆ ಅಪಘಾತ ಸಂಭವಿಸಿದ್ದಾಗ ರೇಲ್ವೆ ಸಚಿವರಾಗಿದ್ದ ಲಾಲ್‌ಬಹಾದ್ದೂರ ಶಾಸ್ತ್ರಿಯವರು ರಾಜೀನಾಮೆ ನೀಡಿದ್ದರು. ಇಂಥ ಕೆಲವು ಅಪರೂಪದ ಪ್ರಸಂಗಗಳು ಇವೆ. ರಾಜೀನಾಮೆಯಂಥ ನಿರ್ಧಾರಗಳನ್ನು ವೈಯಕ್ತಿಕ ನೆಲೆಯಲ್ಲಿ ಪರಿಗಣಿಸಬೇಕು. ಅಡ್ಮಿರಲ್ ಜೋಶಿಯವರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಂಡಿದ್ದಾರೆ. ಹೊಣೆಹೊರಲು ಹಿಂಜರಿಯುವ ರಾಜಕಾರಣಿಗಳ ಪಡೆಯ ನಡುವೆ ಜೋಶಿಯವರ ನಡೆ ಉಳಿದವರ ಆತ್ಮಸಾಕ್ಷಿಗೆ ದೊಡ್ಡ ಪ್ರಶ್ನೆಯಾಗಿದೆ.
ಇಲ್ಲಿ ಎಲ್ಲಕ್ಕಿಂತ ದೇಶದ ಭದ್ರತೆಯ ಪ್ರಶ್ನೆ ಅಡಗಿದೆ. ರಶಿಯಾ ನಿರ್ಮಿತ ಜಲಾಂತರ್ಗಾಮಿಗಳು ಸುರಕ್ಷತೆಯಲ್ಲಿ ಎಷ್ಟರಮಟ್ಟಿಗೆ ನಂಬರ್ ಒನ್ ಎಂಬುದು ಸಂಬಂಧಪಟ್ಟವರು ಉತ್ತರಿಸಬೇಕಾದ ಪ್ರಶ್ನೆ. ಅಲ್ಲದೆ ಇವುಗಳ ನಿರ್ವಹಣೆಯಲ್ಲಿ ಆಗಿರುವ ದೋಷದ ಬಗ್ಗೆಯೂ ತನಿಖೆ ನಡೆಯಬೇಕು. ಇಂಥ ಹಿನ್ನಡೆಗಳು ಜಲಾಂತರ್ಗಾಮಿಗಳೂ ಸೇರಿದಂತೆ ದೇಶೀಯವಾಗಿ ಅಗತ್ಯ ರಕ್ಷಣಾ ಉಪಕರಣಗಳನ್ನು ಸಿದ್ಧಪಡಿಸುವ ಕ್ರಮಕ್ಕೆ ಮುನ್ನುಡಿಯನ್ನು ಬರೆಯುವಂತಾಗಲಿ. ರಕ್ಷಣಾ ಅಗತ್ಯಗಳ ಪರಾವಲಂಬನೆ ಕೊನೆಯಾಗಲಿ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.