ಸಂಪಾದಕೀಯ

ಆಟೋ ಗ್ಯಾಸ್ ಏರಿಕೆ ಅಸಹನೀಯ ಪರಿಣಾಮ

Published On :

ಆಟೋಗ್ಯಾಸ್ ಬೆಲೆಯಲ್ಲಿ ಲೀಟರ್‌ಗೆ ಹನ್ನೊಂದು ರುಪಾಯಿಗೂ ಹೆಚ್ಚಿನ ಪ್ರಮಾಣದ ಏರಿಕೆ, ಮಧ್ಯಮ ವರ್ಗದ ಮೇಲೆ ಅಸಹನೀಯವಾದ ಕೆಟ್ಟ ಪರಿಣಾಮವನ್ನು ಬೀರುವುದು ಖಚಿತ. ನಿಜ. ಅಂತಾರಾಷ್ಟ್ರೀಯ ಪೇಟೆಯಲ್ಲಿ ಕಚ್ಚಾ ತೈಲದ ಬೆಲೆಯ ಏರಿಕೆಯ ಜತೆ ಹೊಂದಾಣಿಕೆ ಮಾಡಿಕೊಳ್ಳುವ ರೀತಿಯಲ್ಲಿ ತೈಲ ಕಂಪನಿಗಳು ತಮ್ಮ ಮಾರಾಟದ ಬೆಲೆಯನ್ನು ಹೆಚ್ಚಿಸುವ ಪ್ರವೃತ್ತಿ, ಕಳೆದ ವರ್ಷದಿಂದಲೂ ಜಾರಿಯಲ್ಲಿದೆ. ಪ್ರತಿ ತಿಂಗಳೂ ದರಗಳ ವಿಮರ್ಶೆಯಾಗುತ್ತಿದೆ.
ಆದರೆ, ಆ ಬೆಲೆಯ ಏರಿಕೆಯ ಪ್ರಮಾಣವನ್ನು ಪ್ರತಿ ತಿಂಗಳಿಗೆ ಐವತ್ತು ಪೈಸೆಗೆ ಸೀಮಿತಗೊಳಿಸಲಾಗಿತ್ತು. ವರ್ಷದಲ್ಲಿ ಆರು ರುಪಾಯಿ ದರದ ಹೆಚ್ಚಳವನ್ನು ಜನ ಕಷ್ಟ ಪಟ್ಟುಕೊಂಡೇ ಸಹಿಸಿದ್ದರು. ತೈಲ ಮಂತ್ರಿ ವೀರಪ್ಪ ಮೊಯಿಲಿ ಅವರು ಒಂದು ಹಂತದಲ್ಲಿ ತಿಂಗಳಿಗೆ ಐವತ್ತು ಪೈಸೆ ದರದ ಏರಿಕೆಯ ಜತೆಯಲ್ಲಿ ಒಮ್ಮೆ ಐದಾರು ರುಪಾಯಿಗಳ ಏರಿಕೆಯ ಸಲಹೆ ಮಾಡಿದಾಗ ಇಡೀ ದೇಶದಲ್ಲಿ ಪ್ರತಿಭಟನೆ ಕಂಡುಬಂದಿತ್ತು. ಇತ್ತೀಚೆಗೆ ರಾಜ್ಯದಲ್ಲಿ ಆಟೋ ರಿಕ್ಷಾಗಳ ಪ್ರಯಾಣ ದರದಲ್ಲಿ ಶೇಕಡಾ 20ರವರೆಗೂ ಹೆಚ್ಚಳವಾಗಿದ್ದು, ಆ ಪೆಟ್ಟಿನಿಂದ ಜನ ಸುಧಾರಿಸಿಕೊಳ್ಳುವುದಕ್ಕೆ ಮೊದಲೇ ಈಗ ಮತ್ತೆ ಹೆಚ್ಚು ಕಡಿಮೆ ಅದೇ ಪ್ರಮಾಣದಲ್ಲಿ ದರಗಳ ಹೆಚ್ಚಳದ ಭಾರವನ್ನು ಹೊರುವುದೆಂದರೆ, ಪ್ರಯಾಣಿಕರ ಬೆನ್ನೆಲುಬನ್ನೇ ಮುರಿದಂತೆ.
ಈ ಹೊಸ ದರವನ್ನು ಅನಧಿಕೃತವಾಗಿ ಆಟೋರಿಕ್ಷಾ ಚಾಲಕರು ಬೆಂಗಳೂರಿನಲ್ಲಿ ಗುರುವಾರದಿಂದಲೇ ಜಾರಿಗೆ ತಂದು ಬಿಟ್ಟಿದ್ದಾರೆ. ಅಧಿಕೃತವಾಗಿ, ಸರ್ಕಾರ, ವೈಜ್ಞಾನಿಕವಾಗಿ "ಗ್ಯಾಸ್‌" ಬೆಲೆಯ ಏರಿಕೆಯ ಪರಿಣಾಮವನ್ನು ಕಿಲೋಮೀಟರ್ ಲೆಕ್ಕಕ್ಕೆ ಪರಿವರ್ತಿಸಿ, ಹೊಸ ದರವನ್ನು ನಿಗದಿಪಡಿಸುವುದಕ್ಕೆ ಮುಂಚೆಯೇ ಒಂದು ರೀತಿಯಲ್ಲಿ "ಅರಣ್ಯದ ನ್ಯಾಯ" ಬೆಂಗಳೂರಿನಲ್ಲಿ ಜಾರಿಗೆ ತಂದಂತೆಯೇ ಆಗಿದೆ.
ಇಲ್ಲಿ ತೈಲ ಬೆಲೆ ಏರಿದಂತೆ, ರಾಜ್ಯ ಸರ್ಕಾರ ತನ್ನ ತೆರಿಗೆಯ ಪಾಲೂ ಹೊಸ ಬೆಲೆಯ ಏರಿಕೆಯ ಆಧಾರದ ಮೇಲೆ ಶೇಕಡಾವಾರು ತಾನೇ ತಾನಾಗಿ ಹೆಚ್ಚುವ ರೀತಿಯಲ್ಲಿ ತೆರಿಗೆ ನೀತಿಯನ್ನು ರೂಪಿಸಿದೆ. ಅದರ ಪರಿಣಾಮವನ್ನು ಗ್ರಾಹಕರೇ ಹೊರಬೇಕು. ಈ ಪಾಟಿ ತೈಲ ಹಾಗೂ ತೈಲೋತ್ಪನ್ನಗಳ ಬೆಲೆಗಳನ್ನು ಏರುವುದಕ್ಕೆ ಬಿಟ್ಟು, ಅದರ ಜತೆಯಲ್ಲೇ ಸರ್ಕಾರವೂ ಅಧಿಕ ಆದಾಯವನ್ನು ಗಳಿಸಿ, ಅದನ್ನು ವೆಚ್ಚ ಮಾಡುವುದರಿಂದ ಆರ್ಥಿಕ ವ್ಯವಸ್ಥೆಯಲ್ಲಿ ಹಣದ ಅತಿಪ್ರಸರಣದ ವೇಗವನ್ನು (ಇನ್‌ಫ್ಲೇಷನ್ ದರ) ಕಡಿಮೆ ಮಾಡುವುದಾದರೂ ಹೇಗೆ?
ಈ ವಿಚಾರದಲ್ಲಿ ಆಟೋರಿಕ್ಷಾ ಪ್ರಯಾಣಿಕರು, ಸಬ್ಸಿಡಿ ರಹಿತ ಎಲ್‌ಪಿಜಿ ಬಳಕೆದಾರರು ಅಸಹಾಯಕ ತಬ್ಬಲಿಗಳೇ.   ಈಗಿನ ಬೆಲೆ ಏರಿಕೆ ತತ್‌ಕ್ಷಣದಲ್ಲಿ ಮಧ್ಯಮ ವರ್ಗಕ್ಕೆ ಆಘಾತವನ್ನು ಉಂಟು ಮಾಡಿದ್ದರೂ ಆರ್ಥಿಕ ವ್ಯವಸ್ಥೆಯ ಮೇಲೆ ಇದರ ಅಂತಿಮ ಪರಿಣಾಮ ಅಪಾಯಕಾರಿ ರೀತಿಯಲ್ಲೇ ಆಗಬಹುದು.
ಆಟೋರಿಕ್ಷಾ ಚಾಲಕರೂ ಈಗ ಯೋಜನಾ ಆಯೋಗದ ಲೆಕ್ಕದಲ್ಲಿ ಮಧ್ಯಮ ವರ್ಗದಲ್ಲೇ ಬರುವುದರಿಂದ ಅವರೂ ಕಷ್ಟಕ್ಕೆ ಈಡಾಗುತ್ತಾರೆ ಎನ್ನುವುದೂ ನಿಜ. ಸರ್ಕಾರ ದರದ ಏರಿಕೆಯ ವಿಚಾರದಲ್ಲಿ ನಿರ್ಧಾರವನ್ನು ಸಾವಧಾನವಾಗಿ ಪ್ರಕಟಿಸಬಹುದು. ಆದರೆ ಆಟೋ ಚಾಲಕರು, ಅದರಲ್ಲೂ ಬಾಡಿಗೆಗೆ ಆಟೋರಿಕ್ಷಾ ಓಡಿಸುವವರು ಹೆಚ್ಚಿನ ತೊಂದರೆಯನ್ನು ಅನುಭವಿಸಲೇ ಬೇಕಾಗಬಹುದು. ಇಂತಹ ಸಮಯದಲ್ಲಿ ಸರ್ಕಾರದ ಮೌನ ಸರಿಯಲ್ಲ. ಜನರಿಗೆ ಸಾಧ್ಯವಿರುವಷ್ಟೂ ಬೇಗ ಪರಿಹಾರವನ್ನು ಒದಗಿಸಲೇಬೇಕು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.