ಸಂಪಾದಕೀಯ

ಗೋಡೆ ಒಡೆಯುವ ಕಾಯಕ ಮಂತ್ರಿಗಳಿಗೆ ಬೇಡ

Published On :

ಕರ್ನಾಟಕದ ಹೆಮ್ಮೆಯ ಪಾರಂಪರಿಕ ಕಟ್ಟಡಗಳಲ್ಲಿ ಒಂದಾಗಿರುವ ವಿಧಾನಸೌಧದ ಒಳ ಅಥವಾ ಹೊರ ರಚನೆಯಲ್ಲಿ, ಸರ್ಕಾರಗಳು, ಮಂತ್ರಿಗಳು ಬದಲಾದಂತೆಲ್ಲಾ ಗೋಡೆಗಳನ್ನು ಕೆಡುವುವ ಅಥವ ಕಟ್ಟುವ ಕೆಲಸಗಳಿಗೆ ಅವಕಾಶವನ್ನು ಕೊಡುತ್ತಾ ಹೋದರೆ ಮುಂದೊಂದು ದಿನ, ಸಂದ ದುರಂತಕ್ಕಾಗಿ ನಾವು ಮರುಗುತ್ತಾ ಕೂರಬೇಕಾಗುತ್ತದೆ. ಹಾಸಿಗೆ ಇರುವಷ್ಟೇ ಕಾಲು ಚಾಚಬೇಕು ಎಂಬ ಗಾದೆಯ ಮಾತಿನ ಮರ್ಮವನ್ನು ತಮಗೆ ನೀಡಲಾಗಿರುವ ಕೊಠಡಿಗಳ ಬಳಕೆಯ ವಿಚಾರದಲ್ಲಿಯೂ ಅನ್ವಯಿಸಿಕೊಳ್ಳಬೇಕು ಎಂಬ ಅರಿವು ಸಮಾಜ ಕಲ್ಯಾಣ ಸಚಿವರಿಗೆ ಇದ್ದಿದ್ದರೆ ಅವರು ಹೀಗೆ 'ಆಡಳಿತಕ್ಕಾಗಿ ವಿಧಾನ ಸೌಧದ ಗೋಡೆ ಒಡೆಯುವೆ' ಎಂದು ಹೇಳುತ್ತಿರಲಿಲ್ಲ. ಅವರಿಗೆ ನೀಡಿರುವ ಕೊಠಡಿಯಲ್ಲಿ ಕುಳಿತುಕೊಳ್ಳಲು ಆಗದಷ್ಟು ಜನರು ಅವರನ್ನು ಭೆಟ್ಟಿಯಾಗಲು ಬರುವುದು ಹೌದಾಗಿದ್ದರೆ, ಎಲ್ಲರನ್ನೂ ಏಕಕಾಲದಲ್ಲಿ ಒಳಗೆ ಕರೆಸಿಕೊಳ್ಳಬೇಕು ಎಂಬ ಯಾವುದೇ ನಿಯಮವಿಲ್ಲ.
ಅನುಕೂಲಕ್ಕೆ ತಕ್ಕಂತೆ ಅಗತ್ಯವಿರುವಷ್ಟೇ ಜನರನ್ನು ಒಳಗೆ ಬಿಟ್ಟುಕೊಳ್ಳಬಹುದು. ಪ್ರತಿಯೊಬ್ಬ ಸಚಿವರೂ ತಮ್ಮ ಕೊಠಡಿಯನ್ನು ಬಿಟ್ಟು ಬೇರೆಲ್ಲಿಯೂ ಸಂದರ್ಶಕರನ್ನು ಭೆಟ್ಟಿಯಾಗಬಾರದು ಎಂಬ ಯಾವುದೇ ಕಾನೂನು ಅಥವಾ  ನಿಯಮ ಕೂಡಾ ಇಲ್ಲದಿರುವಾಗ, ಎಂದಾದರೂ ತಮ್ಮ ಕೋಣೆ ತುಂಬಿ ತುಳುಕುವಷ್ಟು ಜನರನ್ನು ಒಮ್ಮೆಗೇ ಕಾಣಬೇಕಾಗಿದ್ದರೆ, ಅವರೆಲ್ಲರನ್ನೂ ವಿಧಾನ ಸೌಧದ ಮತ್ತೊಂದು ವಿಶಾಲವಾದ ತಾಣದಲ್ಲಿ ಕೂರಿಸಿ ಮಾತಾಡಿಸಿ ಕಳಿಸಿಕೊಡಬಹುದು. ವಿಧಾನ ಸೌಧವು ಯಾವುದೇ ಒಬ್ಬ ಸಚಿವರ ಖಾಸಗೀ ಆಸ್ತಿಯಲ್ಲ.
ಇದು ಕರ್ನಾಟಕದ ಸಮಸ್ತ ಪ್ರಜೆಗಳ ಆಸ್ತಿ. ಇದು ಹಾಳಾಗದಂತೆ ನೋಡಿಕೊಳ್ಳಬೇಕಾದುದು ಎಲ್ಲರ ಕರ್ತವ್ಯವೂ ಹೌದು. ಉದ್ದೇಶವು ಏನೇ ಆಗಿದ್ದರೂ, ವಿಧಾನ ಸೌಧದ ಗೋಡೆ ಒಡೆಯುತ್ತೇವೆ,  ವಿಧಾನ ಸೌಧ ಕೆಡುವುತ್ತೇವೆ ಮುಂತಾದ ದುರಹಂಕಾರದ,  ಕಿಡಿಗೇಡಿತನದ ಮಾತುಗಳು ಯಾರಿಂದಲೇ ಬಂದರೂ ಅಕ್ಷಮ್ಯವೇ.
-ಬೊ. ನಾ. ಕೃಷ್ಣಮೂರ್ತಿ, ಸಾಗರ
ಪ್ರಾರಂಭಿಕ ರೀಡಿಂಗ್
ವಿದ್ಯುತ್ ಸ್ಥಾವರಗಳಿಗೆ ಸೇವೆ ಸಂಪರ್ಕ ಕಲ್ಪಿಸಿದಾಗ ಮಾಪಕ ಬೋರ್ಡ್‌ನಲ್ಲಿ ಅದಕ್ಕೆ ಸಂಬಂಧಪಟ್ಟ ವಿವರಗಳನ್ನು ಬರೆದಿರುತ್ತಾರೆ. ಆದರೆ ಪ್ರಾರಂಭಿಕ ರೀಡಿಂಗ್ ಮಾತ್ರ ಇರುವುದಿಲ್ಲ. ಮೊದಲ ಬಾರಿಗೆ ಸೇವೆ ಕಲ್ಪಿಸಿದಾಗ, ಅದರಲ್ಲೂ ಫ್ಲಾಟ್ ಅಥವಾ ಅಪಾರ್ಟ್‌ಮೆಂಟ್‌ಗಳಲ್ಲಿ ಸಂಪರ್ಕ ಸೇವೆ ಕಲ್ಪಿಸಿದಾಗಿ ಪ್ರಾರಂಭಿಕ ರೀಡಿಂಗ್ ಬರೆದಿರುವುದಿಲ್ಲ. ಪ್ರಾರಂಭಿಕ ರೀಡಿಂಗ್ ಅತಿ ಮುಖ್ಯ. ಅದನ್ನು ಸ್ಥಾವರದ ಮಾಪಕ ಬೋರ್ಡ್ ಮೇಲೆ ನಮೂದಿಸಬೇಕು.
ಪ್ರಾರಂಭಿಕ ರೀಡಿಂಗ್ಸ್ ಸಂಪರ್ಕ ಕಲ್ಪಿಸಿದ ದಿನದಂದು ಬರೆದುಕೊಳ್ಳುವುದಕ್ಕೆ ಎಲ್ಲಾ ಗ್ರಾಹಕರೂ ವಿದ್ಯಾವಂತರಾಗಿರುವುದಿಲ್ಲ.  ವಿದ್ಯಾವಂತರಾಗಿದ್ದರೂ ಅನೇಕ ಬಾರಿ ಅದನ್ನು ಬರೆದುಕೊಳ್ಳವವ ಅಗತ್ಯ ಮನಸ್ಸಿಗೆ ಬಂದಿರುವುದಿಲ್ಲ. ಮೊದಲ ಬಾರಿ ನೀಡಿದ ಬಿಲ್ ತಪ್ಪಾದಾಗ ಪ್ರಾರಂಭಿಕ ರೀಡಿಂಗ್ ಅತ್ಯಾವಶ್ಯಕವಾಗಿ ಬೇಕಾಗಿರುತ್ತದೆ.  ವಿದ್ಯುತ್ ಬಿಲ್ ತಪ್ಪಾದಾಗ ಇದನ್ನು ಗ್ರಾಹಕರೇ ಸಂಬಂಧಪಟ್ಟ ವಿಷಯ ನಿರ್ವಾಹಕರಿಗೆ ತಂದು ತೋರಿದಲ್ಲಿ ಕಚೇರಿ ಸಿಬ್ಬಂದಿಗಳಿಗೂ ದಾಖಲಾತಿಗಳನ್ನು ನೋಡುವುದರಲ್ಲಿ ಸಮಯವನ್ನು ಕಳೆಯಬೇಕಿಲ್ಲ ಮತ್ತು ಗ್ರಾಹಕರಿಗೂ ಸಮಯ ಹಾಳಾಗುವುದಿಲ್ಲ.  ಇದನ್ನು ಗಮನದಲ್ಲಿಟ್ಟುಕೊಂಡು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಿದಲ್ಲಿ ಗ್ರಾಹಕರಿಗೆ ತುಂಬಾ ಅನುಕೂಲವಾಗುವುದು.
- ಕೆ.ವಿ. ಸೀತಾರಾಮಯ್ಯ, ಹಾಸನ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.