ಸಂಪಾದಕೀಯ

ಆಧುನಿಕತೆಯ ಅಬ್ಬರದ ಜತೆ ಕನ್ನಡದ ಮಿಂಚು

Published On :

ಕನ್ನಡ ನಾಡಿನ ವಿಶಿಷ್ಟ ಸಂಸ್ಕೃತಿಯ ಪ್ರಧಾನ ಲಕ್ಷಣ ಸಮನ್ವಯದ ಸಾಧನೆ. ಕೊಡಗು ಹಾಗೂ ಅದರ ಮುಖ್ಯ ಸ್ಥಳ ಮಡಿಕೇರಿ ಈ ಸಾಧನೆಗೆ ಜ್ವಲಂತ ಉದಾಹರಣೆ. ಇಂತಹ ನೆಲದಲ್ಲಿ, ಮಂಗಳವಾರ ಆರಂಭವಾದ ಜಾತ್ರೆಯ ಸ್ವರೂಪದ 80ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉತ್ಸಾಹ ಚಿಮ್ಮುತ್ತಿದ್ದ ವಾತಾವರಣದಲ್ಲಿ, ಸಾಂಸ್ಕೃತಿಕ ವಲಯ ಹಾಗೂ ರಾಜಕಾರಣದ ಮುಖಂಡರ ಭಾಷಣಗಳಲ್ಲಿ ಮೊಳಗಿದ್ದು ಆಧುನಿಕತೆಯ ಅಬ್ಬರದ ಜತೆಯಲ್ಲೇ ಕನ್ನಡದ ಡಿಂಡಿಮದ ನಾದ.
ನಿಜ. ಭಾವನಾ ಪ್ರಧಾನವಾದ ಘೋಷಣೆಗಳು ಸಾಹಿತ್ಯ ಸಮ್ಮೇಳನಗಳಲ್ಲಿ ಮೊಳಗುವ ಕಾಲ ಅಲ್ಲ ಇದು. ಏಕೀಕರಣ ಆಗಿದೆ, ಕರ್ನಾಟಕದ ಹೆಸರೂ ಬಂದಿದೆ. ನಾಡು- ನುಡಿಯ ಬೆಳವಣಿಗೆಗೆ ನೆರವು ನೀಡಲು ಬದ್ಧವಾದ ಸರ್ಕಾರವಿರುವಾಗ ಜನರನ್ನು ಹೊಡೆದು ಎಬ್ಬಿಸಬೇಕಾದ ಪರಿಸ್ಥಿತಿ ಇಲ್ಲ. ಆದರೆ ಆಡಳಿತ, ಸಾಹಿತ್ಯ, ಶಿಕ್ಷಣ, ಜನಜೀವನದ ಎಲ್ಲ ವಿಭಾಗಗಳಲ್ಲೂ ಸಾಕಷ್ಟು ಒಳ್ಳೆಯ ರೀತಿಯ ಪ್ರಗತಿಯಾಗಿದ್ದರೂ, ಎಲ್ಲ ಕಡೆ ಕೇಡುಗಳೇ ಹೆಚ್ಚಾಗಿವೆಯೇನೋ ಎನ್ನುವ ಸಂದೇಹ ಮೂಡುವ ಪರಿಸ್ಥಿತಿಯೂ ಇದೆ.
ಮಲೆನಾಡ ಗರ್ಭದಿಂದಲೇ ಬಂದಿರುವ ಸಮ್ಮೇಳನಾಧ್ಯಕ್ಷ ನಾ.ಡಿಸೋಜಾ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇಬ್ಬರ ಭಾಷಣಗಳಲ್ಲೂ ಮೂಡಿ ಬಂದಿದ್ದು ನಾಡು- ನುಡಿಯ ಉದ್ಧಾರ ಹಾಗೂ ಪ್ರಗತಿ ಸರಿಯಾದ ಮೌಲ್ಯಗಳ ಹಾದಿಯಲ್ಲೇ ಸಾಗಬೇಕೆನ್ನುವ ಸಂದೇಶವೇ. ಸಿದ್ದರಾಮಯ್ಯ ಅವರ ಕಳಕಳಿಯ ಮನವಿ: ಸಮಾಜ ಸುಧಾರಣೆಯ ಕೆಲಸವನ್ನು ರಾಜಕಾರಣಿಗಳ ಕೆಲಸವೆಂದು ಭಾವಿಸಿ, ಸಾಹಿತಿಗಳು ಕೇವಲ ಪ್ರೇಕ್ಷಕರಾಗಬಾರದು. ನಾವೆಲ್ಲರೂ ಸೇರಿ ಮಾಡಬೇಕಾದ ಕೆಲಸ ಅದು. ಸಾಹಿತ್ಯ, ಸಂಸ್ಕೃತಿಯ ಕೆಲಸಕ್ಕೆ ಸರ್ಕಾರ ನೆರವು ನೀಡಲು ಸದಾ ಸಿದ್ಧ ಎಂದಿರುವ ಸಿದ್ದರಾಮಯ್ಯ, ಅದರ ಬಳಕೆ ಸರಿಯಾಗಿ ಆಗುವಂತೆ ನೋಡಿಕೊಳ್ಳುವುದು ಸಾಹಿತಿಗಳ ಕೆಲಸ ಎಂದಿರುವುದು ಸಾಮಾಯಿಕ ಮಾತು.
ಕನ್ನಡ ಸಾಹಿತ್ಯ ಸಮ್ಮೇಳನದ ಜಾತ್ರೆಯ ಕಾಲದಲ್ಲಿ ಇಡೀ ನಾಡಿನಲ್ಲಿ ಕನ್ನಡದ ವಾತಾವರಣದ ಸಂಚಲನ ಮೂಡುವುದನ್ನು ಪ್ರಸ್ತಾಪಿಸಿದ ನಾ. ಡಿಸೋಜಾ ಭಾಷಣದ ಆರಂಭದಲ್ಲೇ ಪುಸ್ತಕದ ಜಾಗವನ್ನು ಕಂಪ್ಯೂಟರ್ ಆಕ್ರಮಿಸಿಕೊಳ್ಳುತ್ತಿರುವ ಸನ್ನಿವೇಶವನ್ನು ಚಿತ್ರಿಸಿ, ಮಾಹಿತಿ, ತಂತ್ರಜ್ಞಾನದಿಂದ "ಜ್ಞಾನವಂತರು" ಬೆಳೆಯುತ್ತಿದ್ದಾರೆ. ಆದರೆ ವಿವೇಕವೂ ಬೆಳೆಯಬೇಕಾದಷ್ಟು ಬೆಳೆದಿಲ್ಲ ಎನ್ನುವ ಮಾತಿನಿಂದ ಇಂದಿನ ಸ್ಥಿತಿಯ ಮಾತ್ರೆ ರೂಪದ ವರದಿಯನ್ನೇ ಮುಂದಿಟ್ಟಿರುವುದು ಒಂದು ಒಳ್ಳೆಯ ವಿಚಾರವೇ. ಎಫ್‌ಎಂ ರೇಡಿಯೋ ಕನ್ನಡ ಭಾಷೆಯನ್ನೇ ಕುಲಗೆಡಿಸಿದರೆ, ಸೆಲ್‌ಫೋನ್‌ಗಳು ಕನ್ನಡದ ಅಂಕಿಗಳೇ ಮರೆತು ಹೋಗುವಂತೆ ಮಾಡಿರುವುದನ್ನೂ ಅವರು ಪ್ರಸ್ತಾಪಿಸಿ ಅನ್ನದ ಪ್ರಶ್ನೆಯ ಮುಂದೆ ಕನ್ನಡ ಹಿಂದೆ ಸರಿದು, ಇಂಗ್ಲಿಷ್ ಮುಂದೆ ಎನ್ನುವ ಸ್ಥಿತಿ ಇದೆ. ಕನ್ನಡಕ್ಕೆ ಸರ್ಕಾರ ಏನು ಮಾಡಿದೆ ಎಂದು ಕೇಳುವವರೆಲ್ಲ, ತಾವೇನು ಮಾಡಿದ್ದು ಅಥವಾ ಮಾಡಬೇಕೆಂದಿರುವುದು ಎನ್ನುವುದನ್ನು ಗಮನಿಸಬೇಕು ಎಂದಿದ್ದಾರೆ. ಕೇಳಲೇಬೇಕಾದ ಪ್ರಶ್ನೆ ಅದು. ಈಗಲೂ ಕನ್ನಡ ನಾಡಿನಲ್ಲಿ ಕನ್ನಡ ಕಾವಲು ಸಮಿತಿಯ ಅಗತ್ಯವಿರುವುದು, ಕನ್ನಡ ಬಳಸಿ ಫಲಕಗಳ ಪ್ರದರ್ಶನ ನಾಚಿಕೆಗೇಡಲ್ಲವೇ?
ಕನ್ನಡ ಭಾಷೆ, ಕರ್ನಾಟಕಕ್ಕೆ ಅವಮಾನವಾದರೆ, ಸರ್ಕಾರ- ಜನ ಸಿಡಿದೇಳಬೇಕು, ಎನ್ನುವ ಸೂತ್ರ ನೀಡಿದ ಸಮ್ಮೇಳನಾಧ್ಯಕ್ಷರು, ಭಾಷಣದ ಇತರ ಕಡೆಗಳಲ್ಲಿ ರಾಜಕಾರಣಿ- ಜನಸೇವಕ ಪುಡಾರಿಯಾಗಬಹುದಾದ ಸಮಾಜ, ರೈತರ ಯಾತನಾಮಯ ಪರಿಸ್ಥಿತಿ, ಪರಿಸರದ ನಾಶದ ಪರಿಣಾಮಗಳಂತಹ, ಜನಸಾಮಾನ್ಯರ ಮನಸ್ಸನ್ನು ಕಾಡಿರುವ ಸಮಸ್ಯೆಗಳ ಪ್ರಸ್ತಾಪ ಮಾಡಿದ್ದೂ ಸೂಕ್ತವೇ.
ನಾಡಿನ ಬೌದ್ಧಿಕ ಸಮಾಜದ ಮಹಾ ಮೇಳದಲ್ಲಿ ಪ್ರಕೃತಿಯನ್ನು ಉಳಿಸಿ ಜನರೂ ಉಳಿಯಬೇಕಾದ ನೀತಿ ನಿರೂಪಣೆ, ಸಮ್ಮೇಳನ ನಡೆಯುತ್ತಿರುವ ಕೊಡಗು ಪ್ರದೇಶಕ್ಕೆ ಹೊಂದಿಕೊಂಡಿತ್ತು. ನಾಡಿನ ಜನತೆಗೆ ಅನ್ನ ಭಾಗ್ಯ, ಸೈಕಲ್ ಭಾಗ್ಯಗಳಂತಹ ಯೋಜನೆಗಳಿಂದ ಆತ್ಮಾಭಿಮಾನದ ಕೊರತೆ ಎದ್ದುಕಾಣುತ್ತಿದೆ ಎನ್ನುವ ಸಮ್ಮೇಳನಾಧ್ಯಕ್ಷರ ಮಾತು ವಾದ- ವಿವಾದಕ್ಕೆ ಎಡೆ ಮಾಡಿಕೊಡಬಹುದೇನೋ. ಅವರು ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದು, ಹೆಣ್ಣನ್ನು ನೋಡುವ ಸಮಗ್ರ ದೃಷ್ಟಿಯ ಬದಲಾವಣೆಗೆ ಕರೆ ನೀಡಿದ್ದು ವಂದನಾರ್ಹ.
ಈಗಲೂ ಅಲ್ಲಿ ಇಲ್ಲಿ ಒಡಕಿನ ಮಾತು ಕೇಳಿ ಬರುತ್ತಿರುವುದು, ಮುಂಬೈ, ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮದ್ರಾಸ್ ಕರ್ನಾಟಕದ ವಿಭಾಗಗಳು ಆಡಳಿತಾತ್ಮಕವಾಗಿ ಜೀವಂತವಾಗಿರುವುದು ನಾ ಡಿಸೋಜಾ ಅವರ ಮನಸ್ಸನ್ನು ಕದಡಿರುವಂತಿದೆ. ಅದೇ ರೀತಿ ಅಂಧಶ್ರದ್ಧೆ, ಮೂಢ ನಂಬಿಕೆಯ ವಿಚಾರ. ವಿಶ್ವವಿದ್ಯಾಲಯಗಳಲ್ಲಿನ ಹದಗೆಟ್ಟ ಪರಿಸ್ಥಿತಿ. ನಿಜ. ಇವೆಲ್ಲದರ ಸುಧಾರಣೆ ಸರ್ಕಾರದ ಜವಾಬ್ದಾರಿ ಅಷ್ಟೇ ಅಲ್ಲ, ಇವೆಲ್ಲದರಲ್ಲೂ ಜನರ ಪಾಲೂ ಇರಲೇಬೇಕು. ಆದ್ದರಿಂದ ಜನರೂ ಎಚ್ಚೆತ್ತುಕೊಳ್ಳಲೇಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಷಣ, ಸಮ್ಮೇಳನಾಧ್ಯಕ್ಷರ ಭಾಷಣಕ್ಕೆ ಪೂರಕವಾದ ರೂಪದಲ್ಲೇ ಇದ್ದಿದ್ದು ನಿಜಕ್ಕೂ ವಿಶೇಷವಾದ ಬೆಳವಣಿಗೆ. ಸಿದ್ದರಾಮಯ್ಯ ಅವರು ಕನ್ನಡದ ಕೆಲಸಕ್ಕೆ ನೆರವು ನೀಡುವ ವಿಚಾರದಲ್ಲಿ ಸರ್ಕಾರ ಹಿಂದೆ ಬೀಳುವುದಿಲ್ಲ ಎನ್ನುವ ವಾಗ್ದಾನವನ್ನು ನೀಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವದ ಆಚರಣೆಗೆ ನಾಡಿನ ಎಲ್ಲಕಡೆ ಸೂಕ್ತ ಕಾರ್ಯಕ್ರಮವನ್ನು ರೂಪಿಸಲು ಸರ್ಕಾರದ ಬದ್ಧತೆಯನ್ನು ಪ್ರಕಟಿಸಿದ್ದು ನಿಜವಾಗಲೂ ಮೆಚ್ಚುವಂತಹದ್ದೇ.
ಆ ಪ್ರಕಟಣೆ ನಿಜವಾಗಬೇಕಾಗಿದ್ದರೆ, ಸಾಹಿತ್ಯ ಪರಿಷತ್ತಿನ ಸಹಕಾರವೂ ಬೇಕೇ ಬೇಕು. ಸಹಕಾರ ನೀಡುವಲ್ಲಿ ಪರಿಷತ್ತು ಹಿಂಜರಿಯಬಾರದು. ಎಲ್ಲರೂ ಸೇರಿ ಕನ್ನಡದ ತೇರನ್ನು ಎಳೆಯಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.