ಸಂಪಾದಕೀಯ

ಮೂರನೆಯ ರಂಗದ ಮಾತು

Published On :

ಕಳೆದ ಅಕ್ಟೋಬರ್‌ನ ಮಧ್ಯಭಾಗದಲ್ಲಿ ದೆಹಲಿಯಲ್ಲಿ ಹದಿನಾಲ್ಕು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಭೆ ಸೇರಿ, ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಗತಿಪರ ಕೂಟ ಹಾಗೂ ಬಿಜೆಪಿ ನೇತೃತ್ವದ ರಾಷ್ಟ್ರೀಯ ಜನತಾಂತ್ರಿಕ ಕೂಟಗಳನ್ನು ಏಕಕಾಲದಲ್ಲಿ ಎದುರಿಸುವುದಕ್ಕೆ ಒಂದು ಪ್ರತ್ಯೇಕ ರಾಜಕೀಯ ಶಕ್ತಿಯ ಅವಶ್ಯಕತೆಯನ್ನು ಪ್ರತಿಪಾದಿಸಿದ್ದರು.
ಆದರೆ ಆಗ ಇಂತಹ ಶಕ್ತಿಯನ್ನು ಆತುರದಲ್ಲಿ ರೂಪಿಸಲೇ ಬೇಕಾದ ತುರ್ತು ಅಗತ್ಯವೇನೂ ಇರಲಿಲ್ಲ. ಲೋಕಸಭೆ ಚುನಾವಣೆಗೆ ಏಳೆಂಟು ತಿಂಗಳು ಕಾಯಬೇಕಾಗಿತ್ತು. 2009ರ ಚುನಾವಣೆಯ ಮುನ್ನಾ ದಿನಗಳಲ್ಲಿ ಮೂರನೆಯ ರಂಗದ ರಚನೆಯ ಪ್ರಯತ್ನ ಎದುರಿಸಿದ್ದ ಸಮಸ್ಯೆಗಳ ಹಿನ್ನೆಲೆಯಲ್ಲಿ ಯಾವ ರಾಜಕೀಯ ಪಕ್ಷವೂ ಮೂರನೆಯ ಶಕ್ತಿಯ ಮಾತನ್ನು ಆಡುತ್ತಿರಲಿಲ್ಲ.
ಮೂರನೆಯ ರಂಗದ ರಚನೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸಿರುವ ಮಾಜಿ ಪ್ರಧಾನಿ ದೇವೇಗೌಡರು ಎರಡು ತಿಂಗಳ ಹಿಂದೆ, ಅಂತಹ ರಂಗದ ರಚನೆ ಸಾಧ್ಯವಾಗಲಾರದೇನೋ ಎನ್ನುವ ಅನುಮಾನವನ್ನು ಪ್ರಕಟಿಸಿದ್ದರು. ರಾಜಕೀಯ ಹೊಂದಾಣಿಕೆಯ ಮಾತು ಏನಿದ್ದರೂ ಚುನಾವಣೆಯ ಅನಂತರದ ಪರಿಸ್ಥಿತಿಯನ್ನೇ ಅವಲಂಬಿಸಬೇಕಾಗಬಹುದು ಎಂದೂ ಅವರ ಆಗಿನ ಅಭಿಪ್ರಾಯ.
ಆದರೆ ಆಗ ಅರವಿಂದ ಕೇಜ್ರಿವಾಲ ಹಾಗೂ ಅವರ ಸಂಗಾತಿಗಳ ಆಮ್ ಆದ್ಮಿ ಪಾರ್ಟಿಯ ಬಿರುಗಾಳಿ ಬೀಸುವ ಸೂಚನೆ ಇರಲಿಲ್ಲ. ಈಗ, ದೆಹಲಿಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ "ಸಾಧನೆ" ಬಿಜೆಪಿ - ಕಾಂಗ್ರೆಸ್ ನಾಯಕರ ನಿದ್ದೆ ಕೆಡಿಸಿದೆ. ಪ್ರಧಾನವಾಗಿ ಪೇಟೆ-ಪಟ್ಟಣಗಳಲ್ಲಿನ ವಿದ್ಯಾವಂತ ಸಮುದಾಯದ ಬೆಂಬಲವನ್ನೇ ಹೆಚ್ಚಾಗಿ ನಂಬಿಕೊಂಡಿರುವ ಬಿಜೆಪಿಗೆ ಆಮ್ ಆದ್ಮಿ ಪಾರ್ಟಿ ಸದ್ಯದಲ್ಲಿ ಪ್ರಬಲ ಎದುರಾಳಿಯಂತೆ ಕಂಡುಬರುತ್ತಿರುವುದು ಸಹಜವೇ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕರೂ ಗಾಬರಿಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಮೂರನೆಯ ರಂಗದ ರಚನೆಯ ಪ್ರಯತ್ನಕ್ಕೆ ಚಾಲನೆ ಕೊಡುವ ಅಗತ್ಯ ಹಾಗೂ ಅನಿವಾರ್ಯತೆಯನ್ನು ದೇವೇಗೌಡರು ಮನಗಂಡಂತಿದೆ. ಈ ವಿಚಾರದಲ್ಲಿ ಈಗಾಗಲೇ ಕಮ್ಯುನಿಸ್ಟ್ ನಾಯಕರು ಅಲ್ಲಿ - ಇಲ್ಲಿ ತಮ್ಮ ಅಭಿಪ್ರಾಯವನ್ನು ಪ್ರಕಟಿಸಿದ್ದೂ ಆಗಿದೆ. ಕಮ್ಯುನಿಸ್ಟರು ಈಗ ಆಮ್ ಆದ್ಮಿ ಪಾರ್ಟಿಯನ್ನು ಗಟ್ಟಿಯಾಗಿ ವಿರೋಧಿಸುತ್ತಿಲ್ಲ. ನಾಳೆ ಆ ಪಾರ್ಟಿಯ ನೆರವನ್ನು ಕಮ್ಯುನಿಸ್ಟರು ಕೇಳಬೇಕಾದೀತು ಎನ್ನುವುದರ ಅರಿವು ಅವರಲ್ಲಿ ಮೂಡಿದಂತಿದೆ. ಲೋಕಸಭೆ ಚುನಾವಣೆ ಮುಗಿದ ಅನಂತರ ಹೊಂದಾಣಿಕೆ - ಒಡಂಬಡಿಕೆ ಎನ್ನುವ ಮಾತು ಅರ್ಥಹೀನವಾಗಬಹುದೆನ್ನುವ ಭೀತಿಯೂ ಮೂರನೆಯ ರಂಗದ ರಚನೆಯಲ್ಲಿ ಆಸಕ್ತಿ ಇರುವವರನ್ನು ಕಾಡುತ್ತಿದೆ. ಮೂರನೆಯ ರಂಗದ ರಚನೆಗೆ ಈಗಿರುವ ರಾಜಕೀಯ ಪಕ್ಷಗಳೇ ಮುಂದಾಗಬೇಕು. ಚುನಾವಣೆ ಸಮಯದಲ್ಲಿ ಹುಟ್ಟಿಕೊಳ್ಳಬಹುದಾದ ರಾಜಕೀಯ ಪಕ್ಷಗಳು ವಿಶ್ವಾಸಾರ್ಹವಾಗಿರುವುದಿಲ್ಲ ಎನ್ನುವುದು ಅನುಭವದ ಮಾತು.
ಇದೆಲ್ಲವನ್ನು ಗಮನಿಸಿದ ದೇವೇಗೌಡರು ಇತ್ತೀಚೆಗೆ ದೆಹಲಿಯಲ್ಲಿದ್ದಾಗ, ವಯೋವೃದ್ಧ ಕಮ್ಯುನಿಸ್ಟ್ ನಾಯಕ, ಭಾರತೀಯ ಕಮ್ಯುನಿಸ್ಟ್ ಪಕ್ಷದ ಮಾಜಿ ಕಾರ್ಯದರ್ಶಿ ಎ.ಬಿ. ಬರ್ಧನ್ ಅವರ ಜತೆ ಚರ್ಚಿಸಿದ ನಂತರ ಮೂರನೆಯ ರಂಗದ ರಚನೆಯ ಪ್ರಯತ್ನಕ್ಕೆ ಕಾಲ ಕೂಡಿ ಬಂದಿದೆ ಎನ್ನುವ ತೀರ್ಮಾನಕ್ಕೆ ಬಂದಿರುವಂತಿದೆ.
ಅಕ್ಟೋಬರ್‌ನಲ್ಲಿ ಸಮಾವೇಶಗೊಂಡಿದ್ದ ಪಕ್ಷಗಳ ಪ್ರತಿನಿಧಿಗಳ ಇನ್ನೊಂದು ಸಭೆಗೆ ಇದು ಸಕಾಲ. ಆ ಸಭೆಗೆ, ಎಲ್ಲ ಕಮ್ಯುನಿಸ್ಟ್ ಪಕ್ಷಗಳ, ಅಣ್ಣಾ ಡಿಎಂಕೆ (ಈಗಾಗಲೇ ತಮಿಳುನಾಡಿನಲ್ಲಿ ಜಯಲಲಿತಾ, ಕಮ್ಯುನಿಸ್ಟ್‌ನ ಡಿ. ರಾಜಾ ಅವರು ರಾಜ್ಯಸಭೆಗೆ ಆಯ್ಕೆಯಾಗುವುದಕ್ಕೆ ಸಹಕಾರ ನೀಡಿದ್ದಾರೆ), ಸಮಾಜವಾದಿ ಪಾರ್ಟಿ, ಸಂಯುಕ್ತ ಜನತಾ ದಳ, ಬಿಜು ಜನತಾದಳದಂಥ ಪಕ್ಷಗಳ ಪ್ರತಿನಿಧಿಗಳ ಜತೆ ಅನೌಪಚಾರಿಕವಾಗಿ ಮೂರನೆಯ ರಂಗದ ವಿಚಾರದ ಪ್ರಸ್ತಾಪ ಆಗಿದೆ. ಆದರೆ ಆ ಪಟ್ಟಿಯಲ್ಲಿ ಮಾಯಾವತಿ ನೇತೃತ್ವದ ಬಹುಜನ ಸಮಾಜಪಕ್ಷ ಹಾಗೂ ಆಂಧ್ರದ ತೆಲುಗು ದೇಶಂ ಪಕ್ಷಗಳ ಹೆಸರಿಲ್ಲ. ಅಣ್ಣಾ ಡಿಎಂಕೆ, ಬಿಜು ಜನತಾದಳ, ಸಮಾಜವಾದಿ ಪಾರ್ಟಿ, ಸಂಯುಕ್ತ ಜನತಾದಳಗಳು ಒಂದೇ ವೇದಿಕೆಗೆ ಬಂದರೆ, ನಾಲ್ಕು ದೊಡ್ಡ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಹಾಗೂ ಹಲವು ಕದನಗಳ ಕಲಿಗಳಂತೆ ಹೊರಹೊಮ್ಮಿರುವ ನಾಯಕರು - ಶಕ್ತಿಗಳು, ಬಿಜೆಪಿ - ಕಾಂಗ್ರೆಸ್ ಕೂಟಗಳಿಗೆ ದೊಡ್ಡ ಸವಾಲನ್ನೇ ಒಡ್ಡಬಹುದು. ಕರ್ನಾಟಕದಲ್ಲಿ ದೇವೇಗೌಡರ ವಿಚಾರದಲ್ಲಿ ಈಗ ಆ ಮಾತನ್ನುಹೇಳುವಂತ್ತಿಲ್ಲ. ಮುಂದೆ ಹೇಗೋ ಏನೋ ಯಾರಿಗೆ ಗೊತ್ತು?
ಆದರೆ ಈ ಪಟ್ಟಿಯಲ್ಲಿರುವ ಪಕ್ಷಗಳ ನಾಯಕರೆಲ್ಲರೂ ಸದ್ಯದ ಸ್ಥಿತಿಯನ್ನು ಪ್ರಧಾನಿ ಪೀಠಕ್ಕೆ ಅಭ್ಯರ್ಥಿಗಳಾಗುವ ಆಸೆ ಇರುವವರೇ. ಅದೇ ಒಂದು ದೊಡ್ಡ ಸಮಸ್ಯೆ. ಈ ನಾಯಕರು ಪ್ರಬಲವಾಗಿರುವ ರಾಜ್ಯಗಳಲ್ಲಿ ಆಮ್ ಆದ್ಮಿ ಪಾರ್ಟಿಯ ಪ್ರಭಾವ ಇನ್ನೂ ಕಂಡುಬಂದಿಲ್ಲ ಎನ್ನುವುದೂ ನಿಜ. ಈ ಲೆಕ್ಕಾಚಾರದಲ್ಲಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವರನ್ನು ಕಡೆಗಾಣಿಸುವಂತಿಲ್ಲ.
ಎಷ್ಟಾದರೂ ರಾಜಕೀಯ ಎಂದರೆ, ಸಾಧ್ಯವಿರುವುದನ್ನು ಸಾಧಿಸುವ ಕಲೆ ಎನ್ನುವ ಮಾತಿದೆ. ಈಗ ಮೂರನೆಯ ರಂಗದಲ್ಲಿ ಆಸಕ್ತಿ ಇರುವ ಪಕ್ಷಗಳ ಪಾಲಿಗೆ ಆ ಮಾತೇ ಸ್ಫೂರ್ತಿ. ಕಮ್ಯುನಿಸ್ಟರು, ಮಾತು ಮಾತಿಗೆ ಪರ್ಯಾಯ ಸಿದ್ಧಾಂತ, ಕಾರ್ಯಕ್ರಮಗಳ ಭದ್ರ ಬುನಾದಿ ಇಲ್ಲದ ರಾಜಕೀಯ ವ್ಯವಸ್ಥೆ ಬಹುಕಾಲ ಬದುಕುವುದಿಲ್ಲ ಎಂದು ಹೇಳುತ್ತಿದ್ದಾರೆ. ಅವರ ದೃಷ್ಟಿಯಲ್ಲಿ ಪರ್ಯಾಯ ಸಿದ್ಧಾಂತ, ಕಾರ್ಯಕ್ರಮ ಎಂದರೆ ಇತರರು ಕೆಂಬಾವುಟದ ಸಿದ್ಧಾಂತವನ್ನು ಒಪ್ಪುವುದು ಎಂದೇ ಅರ್ಥ. ಮೂರನೆಯ ರಂಗದಲ್ಲಿ ಸೇರುವ ಸಂಭವನೀಯ ಪಕ್ಷಗಳಲ್ಲಿ ಕನಿಷ್ಠ ಪಕ್ಷ ಮೂರು ಪ್ರಬಲ ಪಕ್ಷಗಳ ಜೀವಾಳ ಸಾಮಾಜಿಕ ನ್ಯಾಯ ವಿತರಣೆಯ ಆಶ್ವಾಸನೆಯೇ.
ಆದರೆ ಈಗ ಮೂರನೆಯ ರಂಗದ ರಚನೆಯಲ್ಲಿ ಆಸಕ್ತಿ ತೋರಿಸಬಹುದಾದ ಕೆಲವು ನಾಯಕರ ನಿಜವಾದ ಉದ್ದೇಶ, ಹೇಗಾದರೂ ಮಾಡಿ, ಭಾರತೀಯ ಜನತಾ ಪಾರ್ಟಿ ಹಾಗೂ ನರೇಂದ್ರ ಮೋದಿ ಅವರು ದೇಶದ ಮೊದಲ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುವುದನ್ನು ತಡೆಯುವುದೇ. ಮೂಲತಃ ಅವರು ಬಿಜೆಪಿ ವಿರೋಧಿಗಳು. ಇಂತಹ ನ್ಯೇತ್ಮಾತ್ಮಕ ಸಿದ್ಧಾಂತದ ಆಧಾರದ ಮೇಲೆ ಭಾರತದಂತಹ ಬಹುಸಂಸ್ಕೃತಿಗಳ ವೈವಿಧ್ಯ ಪೂರ್ಣ ಆಚಾರ-ವಿಚಾರಗಳಲ್ಲಿ ನಂಬಿಕೆ ಇರುವ ನಾಡಿನಲ್ಲಿ ಯಶಸ್ಸು ಗಳಿಸುವುದು ಕಷ್ಟ. ದೇವೇಗೌಡರಂತೂ ಬೆಂಗಳೂರಿನಲ್ಲಿ ಇನ್ನೊಂದು ರಾಷ್ಟ್ರೀಯ ಮಹಾಮೇಳವನ್ನು ಫೆಬ್ರವರಿಯಲ್ಲಿ ನಡೆಸಲು ಸಿದ್ಧಾರಾಗಿದ್ದಾರೆ. ಅವರ ಛಲವನ್ನು ಮೆಚ್ಚಲೇಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.