ಇಷ್ಟು ದಿನ ಸುಮ್ಮನಿದ್ದದ್ದೇಕೆ?
ಅಡುಗೆ ಅನಿಲ ವಾರ್ಷಿಕ ಮಿತಿಯನ್ನು 9 ರಿಂದ 12ಕ್ಕೆ ಏರಿಸುವ ಬಗ್ಗೆ ಸಂಪುಟಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಪೆಟ್ರೋಲಿಯಂ ಖಾತೆ ಸಚಿವ ವೀರಪ್ಪ ಮೊಯ್ಲಿ ಹೇಳಿರುವುದು ಜನರಿಗೆ ಸ್ವಲ್ಪ ನಿರಾಳವಾಗಿದೆ. ಈ ಹಿಂದೆ ಅಡುಗೆ ಅನಿಲವನ್ನು 9 ರಿಂದ 12ಕ್ಕೆ ಏರಿಸುವ ಆಲೋಚನೆ ಕೇಂದ್ರ ಸರ್ಕಾರದಲ್ಲಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾಗ ಮೊಯ್ಲಿಯವರು ಅಂತಹ ಯಾವುದೇ ಯೋಚನೆ ಇಲ್ಲ. ತಾವು ಸಹ ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರು. ಈಗ ರಾಹುಲ್ ಗಾಂಧಿಯವರು ವಾರ್ಷಿಕ 12 ಸಿಲಿಂಡರ್‌ಗಳನ್ನು ನೀಡದಿರುವುದಕ್ಕೆ ಆಕ್ಷೇಪ ಮಾಡಿದಾಗ 12 ಸಿಲಿಂಡರ್ ನೀಡುವ ಯೋಚನೆ ಸರ್ಕಾರಕ್ಕೆ ಬಂದಿತು. ಕಳಂಕಿತರನ್ನು ರಕ್ಷಿಸುವುದಕ್ಕೆ ಸುಗ್ರಿವಾಜ್ಞೆಯನ್ನು ಹೊರಡಿಸಲು ಸಜ್ಜಾದಾಗ, ಇಡೀ ದೇಶವೆಲ್ಲಾ ಅದನ್ನು ವಿರೋಧಿಸಿದರೂ ಕೇಂದ್ರ ಸರ್ಕಾರ ಬಗ್ಗಿರಲಿಲ್ಲ. ಆದರೆ ರಾಹುಲ್ ಗಾಂಧಿಯವರು ಅದನ್ನು "ಸಂಪೂರ್ಣ ಅರ್ಥಹೀನ" ಎಂದು ಬಣ್ಣಿಸಿ ಉಗ್ರವಾಗಿ ಟೀಕೆ ಮಾಡಿದಾಗ ಸುಗ್ರೀವಾಜ್ಞೆಗೆ ತಡೆ ಬಿತ್ತು. ಹೇಗೋ ಒಳ್ಳೆಯ ಕೆಲಸವೇ ಆಯಿತು. ಅಂದರೆ ರಾಹುಲ್ ಗಾಂಧಿಯವರು ಹೇಳಿದರೆ ಮಾತ್ರ ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗದಿರುವುದು ಸಾಧ್ಯವಾಗುತ್ತದೆ ಎನ್ನುವಂತಾಯಿತು. ಈಗ ಸಾರ್ವತ್ರಿಕ ಚುನಾವಣೆಯೂ ಹತ್ತಿರದಲ್ಲಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಣ್ಣ ಪುಟ್ಟ ಒಳ್ಳೆಯ ನಿರ್ಧಾರ ಮತ್ತು ಕೆಲಸಗಳನ್ನು ಮಾಡುವ ಉತ್ಸಾಹ ತಾನೇ ತಾನಾಗಿ ಬರುತ್ತದೆ. ಚುನಾವಣೆ ಕಳೆದ ನಂತರ ತೆಗೆದುಕೊಂಡ ನಿರ್ಧಾರಗಳನ್ನಾಗಲಿ ಅಥವಾ ಶುರು ಮಾಡಿದ ಕೆಲಸಗಳನ್ನಾಗಲಿ ರದ್ದು ಮಾಡುವುದು ಎಷ್ಟು ಹೊತ್ತು? ಜನ ಪರ ನಿರ್ಧಾರಗಳನ್ನು ಚುನಾವಣೆ ಕಳೆದ ನಂತರ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಹಿಂತೆಗೆದುಕೊಳ್ಳದಿರಲಿ ಎಂದಷ್ಟೇ ಜನರು ಆಶಿಸಬಹುದು.
- ಕೆ.ವಿ. ಸೀತಾರಾಮಯ್ಯ, ಹಾಸನ
ಭೋಜನಾಸಕ್ತರ ಸಮ್ಮೇಳನ
ಮಡಿಕೇರಿಯಲ್ಲಿ ನಡೆದ ಎಂಬತ್ತನೇಯ ಕನ್ನಡ ಸಾಹಿತ್ಯ ಸಮ್ಮೇಳನವು ಸಾಹಿತ್ಯಾಸಕ್ತರಿಗಿಂತ ಭೋಜನಾಸಕ್ತರ ಸಮ್ಮೇಳನವೆನಿಸುತ್ತಿತ್ತು. ಸಮ್ಮೇಳನದ ಕಾರ್ಯಕ್ರಮಗಳಿಗಿಂತ ಭೋಜನಕ್ಕೆ ಹೆಚ್ಚು ನೂಕು ನುಗ್ಗಲಿತ್ತು. ಸಂಬಳ ಸಹಿತ ರಜೆ ಪಡೆದು ಬಂದ ಸರಕಾರಿ ನೌಕರರು ಕೊಡಗಿನ ರಮಣೀಯ ಸ್ಥಳಗಳ ಪ್ರವಾಸಕ್ಕೆ ಬಂದಿದ್ದರು. ಅದೂ ಸರಕಾರಿ ವೆಚ್ಚದಲ್ಲಿ! ಮಡಿಕೇರಿಯ ಸಮ್ಮೇಳನದ ಅವ್ಯವಸ್ಥೆ ನೋಡಿದಾಗ ಮೂಡಬಿದ್ರೆಯ ಆಳ್ವಾಸ್ ನುಡಿಸಿರಿಯ ಅಚ್ಚುಕಟ್ಟುತನ ಅಡಿಗಡಿಗೆ ನೆನಪಾಗುತಿತ್ತು. ಇನ್ನೊಂದು ವಿಚಿತ್ರವೆಂದರೆ, ಇದು ಕನ್ನಡ ಸಮ್ಮೇಳನವಾದರೂ ಬಹಳಷ್ಟು ಮಹಿಳೆಯರು ತಮ್ಮ ತಮ್ಮೊಳಗೆ ಅಥವಾ ತಮ್ಮ ಮಕ್ಕಳೊಂದಿಗೂ ದಿನ ಪೂರ್ತಿ ಇಂಗ್ಲಿಷಿನಲ್ಲಿ ಮಾತನಾಡುತ್ತಿದ್ದುದನ್ನು ನೋಡಿದಾಗ ಅವರು ಕನ್ನಡ ಸಾಹಿತ್ಯ ಪ್ರೇಮಿಗಳಾ ಎಂದು ಅನುಮಾನ ಮೂಡುತ್ತಿತ್ತು. ಈ ಸಮ್ಮೇಳನದ ಮೆರವಣಿಗೆಯ ವಾಹನದಲ್ಲಿ ಸಮ್ಮೇಳನಾಧ್ಯಕ್ಷ ನಾ. ಡಿಸೋಜಾ ಅವರ ಜೊತೆ ಕೂತಿದ್ದ ಅವರ ಪಾಪದ ಪತ್ನಿಯನ್ನು ಅರ್ಧಕ್ಕೇ ಕೆಳಗಿಳಿಸಿ ಅವಮಾನಿಸಲಾಗಿತ್ತು. ಆಗ ನನಗೆ ನೆನಪಿಗೆ ಬಂದಿದ್ದೆಂದರೆ ನಮ್ಮ ಉಡುಪಿ ಮೂಲದ ಕೇಂದ್ರ ಮಂತ್ರಿಯೋರ್ವರ ಪತ್ನಿ ಹೇಳದೇ ಕೇಳದೇ ಎಲ್ಲ ಕಾರ್ಯಕ್ರಮಗಳಿಗೆ ಅನಧಿಕೃತವಾಗಿ ನುಗ್ಗಿ ತನ್ನ ಗಂಡನ ಬದಿಗೆ ಜಬರ್ದಸ್ತಿನಿಂದ ಕೂತ್ತಿದ್ದು. ಒಂದು ವೇಳೆ ಆಯೋಜಕರೇನಾದರೂ ಈ ಉಡುಪಿಯಮ್ಮನನ್ನು ಸಮಾರಂಭದಿಂದ ಅರ್ಧಕ್ಕೆ ಎಬ್ಬಿಸಿದ್ದರೆ ಎಷ್ಟು ರಂಪಾಟ ಆಗಬಹುದಿತ್ತೋ?
- ಪಿ. ಮಲ್ಲಿಕಾ ಶೆಟ್ಟಿ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

