ತಾಯಿ ಕುರಿತ ನಿಮ್ಮ ಲೇಖನವೇ ಸಾಕು

ಬ್ರಿಟಿಷರ ಕಾಲದಲ್ಲಿ ಒಬ್ಬ ದಕ್ಷ ಐ.ಸಿ.ಎಸ್. ಅಧಿಕಾರಿಯಿದ್ದರು. ಅವರ ಹೆಸರು ಹೆಚ್.ವಿ.ಆರ್.ಐಯ್ಯಂಗಾರ್...
Updated on: 

ಬ್ರಿಟಿಷರ ಕಾಲದಲ್ಲಿ ಒಬ್ಬ ದಕ್ಷ ಐ.ಸಿ.ಎಸ್. ಅಧಿಕಾರಿಯಿದ್ದರು. ಅವರ ಹೆಸರು ಹೆಚ್.ವಿ.ಆರ್.ಐಯ್ಯಂಗಾರ್. ಹೊಳೆನರಸೀಪುರದವರು. ಅವರು ಸೆಂಟ್ರಲ್ ಕಾಲೇಜಿನಲ್ಲಿ ನಿಟ್ಟೂರು ಶ್ರೀನಿವಾಸ ರಾಯರ ಸಹಪಾಠಿಗಳಾಗಿದ್ದರು. ರಾಜ್ಯಾಂಗ ರಚನಾ ಸಮಿತಿಯ ಕಾರ್ಯದರ್ಶಿಯಾಗಿ, ಸ್ವಾತಂತ್ರ್ಯಾನಂತರ ವಲ್ಲಭಬಾಯಿ ಪಟೇಲರಿಗೆ ಗೃಹ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷರಾಗಿ, ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿ ಸಹ ಸೇವೆ ಸಲ್ಲಿಸಿದರು. ಅವರು ಪದ್ಮವಿಭೂಷಣ ಪ್ರಶಸ್ತಿ ವಿಜೇತರೂ ಆಗಿದ್ದರು. ಅದೇ ರೀತಿ ಅವರು ಒಳ್ಳೆಯ ಲೇಖಕರೆಂದೂ ಪ್ರಸಿದ್ಧರಾಗಿದ್ದರು. ಒಂದು ದಿನ ಅವರಿಗೆ ಕಂಚಿ ಕಾಮಕೋಟಿ ಪೀಠಾಧಿಪತಿಗಳಾಗಿದ್ದ ಶ್ರೀ ಚಂದ್ರಶೇಖರ ಸರಸ್ವತಿಯವರಿಂದ ಭೇಟಿ ಮಾಡಲು ಬರಬೇಕೆಂಬ ಕರೆ ಬಂತು. ಆ ಸಮಯದಲ್ಲಿ ಸ್ವಾಮಿಗಳನ್ನು ದರ್ಶ ನಮಾಡಲು ಜನ ಹರಸಾಹಸ ಪಡಬೇಕಾಗಿತ್ತು. ಆದರೆ ಅನಾಯಾಸವಾಗಿ ಅವರ ದರ್ಶನ ಲಾಭ ದೊರೆತಿದ್ದು ಅಯ್ಯಂಗಾರರಿಗೆ ಆನಂದ ತಂದಿತಾದರೂ ಸ್ವಾಮೀಜಿಯವರು ತಿಳಿಸಿದ ದಿನದಂದು ಅವರನ್ನು ಭೇಟಿ ಮಾಡಲಾಗಲಿಲ್ಲ.  ಎರಡನೆಯ ಬಾರಿ ಆಹ್ವಾನ ಬಂದರೂ ಭೇಟಿ ಮಾಡಲಾಗಲಿಲ್ಲ. ಮೂರನೆಯ ಬಾರಿ ಮತ್ತೆ ಕರೆಬಂದಾಗ ಅಯ್ಯಂಗಾರರು ಸ್ವಾಮೀಜಿಯ ದರ್ಶನಕ್ಕಾಗಿ ಹೋದರು. ತಮ್ಮನ್ನು ಏಕೆ ಭೇಟಿ ಮಾಡಲು ಸ್ವಾಮಿಗಳು ಇಚ್ಛಿಸಿದ್ದಾರೆ ಎಂದು ತಿಳಿಯುವ ಕುತೂಹಲವೂ ಅವರಿಗಿತ್ತು. ಸ್ವಾಮಿಗಳು ಅಯ್ಯಂಗಾರರನ್ನು ಪ್ರೀತಿಯಿಂದಲೇ ಸ್ವಾಗತಿಸಿ, ಶಾಲುಹೊದಿಸಿ ಗೌರವಿಸಿ ಹೇಳಿದರು, "ನೀವು ತಾಯಿಯ ಬಗ್ಗೆ ಬರೆದ ಲೇಖನವೊಂದನ್ನು ಓದಿ ತುಂಬಾ ಸಂತೋಷವಾಯಿತು. ಅದನ್ನು ಹಂಚಿಕೊಳ್ಳಲೆಂದೇ ನಿಮ್ಮನ್ನು ಕರೆಸಿದೆ" ಎಂದು ಮನಸಾರೆ ಆಶೀರ್ವದಿಸಿದರು. ಅಯ್ಯಂಗಾರರು ನಿಯತಕಾಲಿಕ ಒಂದಕ್ಕೆ ದೀಪಾವಳಿ ವಿಶೇಷ ಸಂಚಿಕೆಗೆ ಬರೆದ ಒಂದು ಲೇಖನದಲ್ಲಿ ತಮ್ಮ ತಾಯಿ ಬಾಲ್ಯ ಜೀವನವನ್ನು ವೈಭವದಲ್ಲಿ ಕಳೆದು, ವಿವಾಹದ ನಂತರ ಬಡತನದ ಮತ್ತು ಕಷ್ಟದ ಜೀವನ ಅನುಭವಿಸಿದರೂ ದೇವರ ಬಗೆಗಿನ ತಮ್ಮ ಅಚಲವಾದ ನಂಬಿಕೆ ಕೊನೆಯವರೆಗೂ ಉಳಿಸಿಕೊಂಡು ಬಂದ ಬಗೆಯನ್ನು ಲೇಖನದಲ್ಲಿ ನಮೂದಿಸಿದ್ದರು. ಇದು ಸ್ವಾಮೀಜಿಯವರನ್ನು ಆಕರ್ಷಿಸಿತ್ತು. ಹಿಂದೂ ಧರ್ಮದ ಸಾರದ ಬಗ್ಗೆ ಸ್ವಾಮೀಜಿಯವರು ಪ್ರಸ್ತಾಪಿಸಿದಾಗ, ತಾವು ಅಷ್ಟೇನೂ ಧಾರ್ಮಿಕ ಮನೋಭಾವದವರಲ್ಲವೆಂದು ಪ್ರಾಮಾಣಿಕವಾಗಿ ಅಯ್ಯಂಗಾರರು ನುಡಿದರು. ಅದಕ್ಕೆ ಸ್ವಾಮಿಗಳು ಹೇಳಿದರು, "ನೀವು ನಿಮ್ಮ ತಾಯಿಯ ಬಗ್ಗೆ ಬರೆದ ಲೇಖನವು, ನೀವು ಹಿಂದೂ ಧರ್ಮದ ಸಾರವನ್ನು ಅರಿತಿದ್ದೀರೆನ್ನುವುದನ್ನು ತೋರಿಸುತ್ತದೆ" ಎಂದು ಶ್ಲಾಘಿಸಿದರು.

- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com