ಸಂಪಾದಕೀಯ

ಅತ್ಯಾಚಾರದ ಆಘಾತಗಳಿಗೆ ಉತ್ತರವೆಲ್ಲಿ?

Published On :

ಚಲಿಸುವ ಕಾರಿನಲ್ಲಿ ಯುವತಿಯ ಮೇಲೆ ಅತ್ಯಾಚಾರ, ಎರಡು ವರ್ಷದ ಹಸುಳೆಯ ಮೇಲೆ 65 ವರ್ಷದ ವೃದ್ಧನಿಂದ ಅತ್ಯಾಚಾರ, ಮಾವನಿಂದಲೇ ಸೊಸೆಯ ಮೇಲೆ ಅತ್ಯಾಚಾರ, ತಂದೆಯೇ ಮಗಳ ಮೇಲೆ ಅತ್ಯಾಚಾರ, ಸಂಬಂಧಿಯಿಂದಲೇ ಅತ್ಯಾಚಾರ, ಎಲ್ಲೆಲ್ಲೂ ಅತ್ಯಾಚಾರದ ಪಿಡುಗು ತಾಂಡವವಾಡುತ್ತಿದೆ. ಕಾಮುಕರ ಕೆಂಗಣ್ಣಿಗೆ ಮಹಿಳೆಯರು, ಮಕ್ಕಳು ಬಲಿಯಾಗುತ್ತಿದ್ದಾರೆ.
ರಾಜ್ಯದಲ್ಲಿ ಮಹಿಳೆಯರ ಅಸುರಕ್ಷತೆಯ ಬಗ್ಗೆ ಪ್ರಶ್ನಿಸಿದರೆ ಮುಖ್ಯಮಂತ್ರಿಗಳು, ಮಧ್ಯಪ್ರದೇಶದಲ್ಲಿ ನಡೆಯುತ್ತಿಲ್ಲವೇ ಎಂಬ ಉತ್ತರ ನೀಡಿದ್ದು ಆಘಾತಕಾರಿಯಾಗಿದೆ. ಸಮಾಜವನ್ನು ಕಾಯುವ ಸರ್ಕಾರವೇ ಈ ರೀತಿಯ ಸಮರ್ಥನೆ ನೀಡಿದರೆ ಇನ್ನು ಸಾಮಾನ್ಯರ ಗತಿ ಏನು? ರಾಜ್ಯಾದ್ಯಂತ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು ಅದನ್ನು ಖಂಡಿಸಿ ನೂರಾರು ಹೋರಾಟಗಳು, ಪ್ರತಿಭಟನೆಗಳು, ಮುಷ್ಕರಗಳು, ನಡೆಯುತ್ತಿವೆ. ಮಾಧ್ಯಮಗಳು ಅವುಗಳನ್ನು ಬೆಂಬಲಿಸಿ ಸರ್ಕಾರಕ್ಕೆ ತಾವೂ ಮನವಿ ಮಾಡಲೆಂದು ಯತ್ನಿಸಿದರೆ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳೇ ನಿಮಗೆ ಬೇರೆ ಸುದ್ದಿ ಇಲ್ಲವೇ ಎಂದು ಗುಡುಗುವುದು ಎಷ್ಟರ ಮಟ್ಟಿಗೆ ಸರಿ?
ಹುಡುಗಿಯರು ಜೀನ್ಸ್ ಹಾಕಿದರೆ ಪ್ರಚೋದನೆಗೆ ಕಾರಣರಾಗುತ್ತಾರೆ ಎಂದು ಹೇಳುವವರು ಮೊದಲು ನೋಡುವ ದೃಷ್ಟಿ ಬದಲಾಯಿಸಿಕೊಳ್ಳಲಿ. ಟಿ.ವಿ, ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಅತ್ಯಾಚಾರ ಪ್ರಕರಣಗಳಿಗೆ ಒಳಗಾದವರೆಲ್ಲಾ ಏನು ಜೀನ್ಸೇ ಹಾಕಿದ್ದರೇ?
- ಲತಾ ಡಿ.ಸಿ ಮಾಗಡಿ

ಕಳ್ಳರ ಕಥೆ
ಇಬ್ಬರು ಕಳ್ಳರಿದ್ದರು. ಒಬ್ಬನು ಹೋಗಿ ಅಂಗಡಿಯಿಂದ ಮಾಲು ಕದ್ದು ತಕ್ಷಣವೇ ತನ್ನ ಗೆಳೆಯನಿಗೆ ಕೊಟ್ಟನು. ಹೊರಗೆ ಬರುವಾಗ ಇಬ್ಬರೂ ಸಿಕ್ಕಿಬಿದ್ದರು. ಆಗ ಕಳ್ಳಮಾಲನ್ನು ತೆಗೆದುಕೊಂಡವನು 'ನಾನು ಅದನ್ನು ಅಲ್ಲಿಂದ ತೆಗೆದಿಲ್ಲ' ಎಂದನು. ಕದ್ದ ಕಳ್ಳನು 'ನನ್ನ ಹತ್ತಿರ ಯಾವುದೇ ಸಾಮಾನು ಇಲ್ಲ' ಎಂದನು. ಇಬ್ಬರೂ ಪೂರ್ತಿಯಾದ ಸತ್ಯವನ್ನು ಹೇಳದೆ ಅವರ ಮಟ್ಟಿಗೆ ಸತ್ಯವನ್ನು ಹೇಳಿದರು. ಈ ಕಥೆ ನೆನಪಾದುದು ನ್ಯಾಯಮೂರ್ತಿ ಕಾಟ್ಜು ಅವರ ಹೇಳಿಕೆಗೆ ಭಾರದ್ವಾಜರು ಮತ್ತು ಮನಮೋಹನಸಿಂಗ್‌ರು ಉತ್ತರ ಕೊಟ್ಟ ರೀತಿಯನ್ನು ಕೇಳಿದಾಗ.
-ಬಿ.ವಿ. ರಾವ್

ಸಮಾಜ-ಕಾನೂನು ಜತೆಯಾಗಿ ಎದುರಿಸಲಿ
ಎಷ್ಟೋ ಅತ್ಯಾಚಾರಗಳು ನಡೆದರೂ ಹೆಂಗಸರು ಮಾನ ಮರ್ಯಾದೆಗೆ ಅಂಜಿ ಬಾಯಿ ಬಿಡದೆ ಜೀವನಪೂರ್ತಿ ಮಾನಸಿಕ ನೋವನ್ನು ಅನುಭವಿಸುತ್ತಾರೆ. ಅತ್ಯಾಚಾರ ಬಯಲಾದಾಗ ಆರೋಪಿಗಳನ್ನು ಹಿಡಿಯಲು ಪೊಲೀಸರು ಸಹಕರಿಸಬೇಕು. ಅತ್ಯಾಚಾರಕ್ಕೆ ಒಳಗಾದ ಹೆಂಗಸು ಅಥವಾ ಹುಡುಗಿಯನ್ನು ಮಹಿಳಾ ಪೊಲೀಸರೇ ತಪಾಸಣೆ ನಡೆಸಿ ಗುಪ್ತ ವರದಿಯನ್ನು ನ್ಯಾಯಾಧೀಶರಿಗೆ ಒಪ್ಪಿಸಬೇಕು. ಈ ಪ್ರಕರಣಗಳನ್ನು ಎಲ್ಲಾ ಪತ್ರಿಕೆಗಳು ಫೋಟೋ ಸಮೇತ ಪ್ರಸಾರ ಮಾಡಿದರೆ ಶೇ.90ರಷ್ಟು ಈ ರೀತಿಯ ಅಪರಾಧಗಳು ಕಡಿಮೆಯಾಗುತ್ತದೆ. ಈ ಅಪರಾಧಿಗಳನ್ನು ಅವರ ತಂದೆ, ತಾಯಿ, ಬಂಧು ಬಳಗ, ಸ್ನೇಹಿತರು ಬಹಿಷ್ಕಾರದ ಧೋರಣೆಯಲ್ಲಿ ಹೀನಾಯವಾಗಿ ಕಂಡರೆ ಈ ಜನ್ಮವೇ ಸಾಕೆಂಬ ತೀರ್ಮಾನಕ್ಕೆ ಬರಬಹುದು. ಪತ್ರಿಕೆಯಲ್ಲಿ ಮತ್ತು ದೊಡ್ಡ ದೊಡ್ಡ ಫ್ಲೆಕ್ಸ್‌ನಲ್ಲಿ ನಕಾರಾತ್ಮಕ ಪ್ರಚಾರ ಮಾಡಿದರೆ ಇದನ್ನು ನೋಡಿದವರು ಇಂತಹ ಕೆಲಸವನ್ನು ಮಾಡುವುದಿಲ್ಲವೆನ್ನುವುದು ನನ್ನ ಭಾವನೆ. ಅಪರಾಧ ಸಾಬೀತಾದಾಗ ಅತ್ಯುಗ್ರ ಶಿಕ್ಷೆ ಕೊಡಬೇಕಿರುವುದು ಅವಶ್ಯ.
-ವಿ.ಆರ್. ರಾಮಯ್ಯ, ಬೆಂಗಳೂರು


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.