ಶಾಸಕರಿಗೆ ವಿಶೇಷ ರಕ್ಷಣೆ ಇಲ್ಲ
ಕ್ರಿಮಿನಲ್ ಆರೋಪಗಳ ತನಿಖೆಯ ವಿಚಾರದಲ್ಲಿ, ಶಾಸಕರಿಗೆ ಸಾರ್ವಜನಿಕರಿಗೆ ಇಲ್ಲದೇ ಇರುವ ರಕ್ಷಣೆಯೂ ಇಲ್ಲ ಎನ್ನುವ ವಿಚಾರಕ್ಕೆ ಸಾಕಷ್ಟು ಪ್ರಚಾರ ಸಿಕ್ಕಿದ್ದರೂ ಆ ಪ್ರಶ್ನೆ ಮತ್ತೆ ಮತ್ತೆ ಪ್ರಸ್ತಾಪವಾಗುತ್ತಿರುವುದಕ್ಕೆ ಕಾರಣ ಶಾಸಕರು, ಅಂತಹ ರಕ್ಷಣೆ ತಮಗಿದೆ ಎಂದು ಭಾವಿಸಿರುವುದು.
ಕಾಯಿದೆಯ ವಿಚಾರದಲ್ಲಿ ಸಾಕಷ್ಟು ಪಾಂಡಿತ್ಯ, ಹಾಗೂ ಸಂಸದೀಯ ಸದನಗಳ ಸದಸ್ಯರ ಹಕ್ಕುಗಳು, ರಕ್ಷಣೆ ಕುರಿತಂತೆ ಅನುಭವ ಆಧರಿತ ಜ್ಞಾನ ಪಡೆದಿರುವ ವಿಧಾನ ಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು, ಶಾಸಕರ ವಿರುದ್ಧದ ಕ್ರಿಮಿನಲ್ ಆರೋಪದ ತನಿಖೆಗೆ ಸಂಬಂಧಿಸಿದಂತೆ ಕಾಯಿದೆ ಪಾಲನೆ ಅಧಿಕಾರಿಗಳಿಗೆ ಅನುಮತಿ ಕೊಡುವ ಅಥವಾ ನಿರಾಕರಿಸುವ ಅಧಿಕಾರ ತಮಗಿಲ್ಲ ಎಂದು ಸ್ಪಷ್ಟಪಡಿಸಿರುವುದು ಸೂಕ್ತವಾಗಿದೆ.
ಸಂಸದರನ್ನು, ಶಾಸಕರನ್ನು ಯಾವುದೇ ಕಾರಣಕ್ಕೇ ಆದರೂ ಪೊಲೀಸರು ಬಂಧಿಸಿದಾಗ, ಆ ಮಾಹಿತಿಯನ್ನು ಸ್ಪೀಕರ್ ಅಥವಾ ಸಭಾಧ್ಯಕ್ಷರಿಗೆ ತಿಳಿಸಬೇಕೆನ್ನುವ ನಿಯಮ ಇದೆ. ಆದರೆ ಅದು ಮಾಹಿತಿಗಷ್ಟೇ ಸಂಬಂಧಿಸಿದ್ದು, ತನಿಖೆಗಲ್ಲ.
ಈ ವಿಚಾರ ಕಾಗೋಡು ತಿಮ್ಮಪ್ಪ ಅವರ ಅವಗಾಹನೆಗೆ ಬಂದು, ಅವರು ತಮ್ಮ ಅಭಿಪ್ರಾಯವನ್ನು ಪ್ರಕಟಿಸುವ ಅವಕಾಶ ದೊರೆತಿದ್ದು ವಿಧಾನ ಸಭೆಯ ಕಾರ್ಯಕಲಾಪಕ್ಕೆ ಸಂಬಂಧಿಸಿದ ಯಾವ ವಿಚಾರದಲ್ಲೂ ಅಲ್ಲ. ಅದು ಒಂದು ಖಾಸಗಿ ದೂರಿನ ಸಲ್ಲಿಕೆಯ ಸಂಬಂಧದಲ್ಲಿ ತಿಮ್ಮಪ್ಪ ತಮ್ಮ ಅಭಿಪ್ರಾಯವನ್ನು ಪ್ರಕಟಿಸಿದ ಪ್ರಕರಣ. ಶಿವಮೊಗ್ಗದ ವಕೀಲ ವಿನೋದ್ ಅವರು ವಿಧಾನಸಭೆ ಸ್ಪೀಕರ್ ತಿಮ್ಮಪ್ಪ ಅವರಿಗೆ ಪತ್ರ ಬರೆದು ಮಾಜಿ ಮುಖ್ಯಮಂತ್ರಿ (ಈಗಿನ ಲೋಕಸಭೆ ಸದಸ್ಯ) ಯಡಿಯೂರಪ್ಪ ಅವರು ಹಿಂದೆ ಉಪಮುಖ್ಯಮಂತ್ರಿಯಾಗಿದ್ದಾಗ ಎಸಗಿದ ಒಂದು ಭ್ರಷ್ಟಾಚಾರದ ಪ್ರಕರಣದಲ್ಲಿ "ಅವರ ವಿರುದ್ಧ ಕ್ರಮ ಜರುಗಿಸಲು" ಸ್ಪೀಕರ್ ಅನುಮತಿ ಕೇಳಿದ್ದರು. ಆ ಪತ್ರಕ್ಕೆ ಉತ್ತರದ ರೂಪದಲ್ಲಿ ತಿಮ್ಮಪ್ಪ ಅವರು ತಮ್ಮ ಅನುಮತಿಯ ಅಗತ್ಯವೇ ಇಲ್ಲದಿರುವುದರಿಂದ ತಮಗೂ ಆ ಪ್ರಕರಣಕ್ಕೂ ಸಂಬಂಧವಿಲ್ಲವೆಂದು ಹೇಳಿದ್ದಾರೆ.
ಈ ಮಾತನ್ನು ತಿಮ್ಮಪ್ಪ ಅವರು ತಮ್ಮ ಗಮನಕ್ಕೆ ತರಲಾದ ಒಂದು ಪ್ರಕರಣದಲ್ಲಿ ಹೇಳಿದ್ದರೂ ಅದು ಇಂತಹ ಎಲ್ಲ ಪ್ರಕರಣಗಳಿಗೂ ಅನ್ವಯವಾಗುವುದೂ ಸಾಧ್ಯ. ಈ ವಿಚಾರದಲ್ಲಿ ಸಾರ್ವಜನಿಕರಿಗೆ ಇಲ್ಲದೇ ಇರುವ ರಕ್ಷಣೆ ಶಾಸಕರಿಗೇನೂ ಇಲ್ಲ. ದೂರು ಬಂದರೆ, ಪೊಲೀಸರು ಕಾಯಿದೆಯ ಚೌಕಟ್ಟಿನ ಒಳಗೆ ಅಗತ್ಯವಾದ ಕ್ರಮ ಕೈಗೊಳ್ಳುವ ಅಧಿಕಾರವನ್ನು ಪಡೆದಿರುತ್ತಾರೆ.
ಕ್ರಿಮಿನಲ್ ಪ್ರಕರಣಗಳಲ್ಲಿ ಅನುಮತಿ ನೀಡುವ - ನಿರಾಕರಿಸುವ ಪ್ರಶ್ನೆ ಉದ್ಭವವಾಗುವುದು ಸರ್ಕಾರಿ ಅಧಿಕಾರಿಗಳ ವಿಚಾರದಲ್ಲಿ ಮಾತ್ರ. ಅಲ್ಲಿ ಅಧಿಕಾರಿಗಳನ್ನು ನೇಮಿಸುವವರೇ ಆರೋಪದ ತನಿಖೆಗೆ ಅನುಮತಿ ನೀಡುವ - ನಿರಾಕರಿಸುವ ಅಧಿಕಾರ ಪಡೆದಿರುತ್ತಾರೆ. ನಿಯಮದಂತೆ ಮಂತ್ರಿಗಳನ್ನು ನೇಮಿಸುವುದು ರಾಜ್ಯಪಾಲರು, ಮಂತ್ರಿಗಳ ವಿರುದ್ಧ ಕಾಯಿದೆಯ ಕ್ರಮಕ್ಕೆ ರಾಜ್ಯಪಾಲರ ಅನುಮತಿ ಬೇಕು. ಆದರೆ ಶಾಸಕರನ್ನು ಯಾರೂ ನೇಮಿಸುವುದಿಲ್ಲ. ಶಾಸಕರು ಜನರಿಂದ ಚುನಾಯಿತರಾಗಿ, ತಮ್ಮ ಹಕ್ಕಿನಿಂದ ಶಾಸಕರಾಗಿರುತ್ತಾರೆ. ಅವರ ವಿಚಾರದಲ್ಲಿ ಕ್ರಿಮಿನಲ್ ಆರೋಪದ ತನಿಖೆಯ ಕ್ರಮಕ್ಕೆ ಯಾರ ಅನುಮತಿಯೂ ಬೇಕಾಗಿಲ್ಲ. ಆದರೆ ವಕೀಲ ವಿನೋದ್ ನ್ಯಾಯಾಲಯಗಳಿಗೆ ಕೊಂಡೊಯ್ದಿದ್ದ ಎರಡು ಪ್ರಕರಣಗಳಲ್ಲಿ ನ್ಯಾಯಾಧೀಶರು ಶಾಸಕರ ವಿರುದ್ಧದ ಕ್ರಮಕ್ಕೆ ಸ್ಪೀಕರ್ ಅನುಮತಿ ಬೇಕು ಎಂದು ಹೇಳಿ ವಿಚಾರಣೆ ನಡೆಸಲು ನಿರಾಕರಿಸಿದ್ದರು. ಆ ವಿಚಾರದಲ್ಲಿ ವಕೀಲ ವಿನೋದ್ ಹೈಕೋರ್ಟಿನಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದಾರೆ. ಅದರ ವಿಚಾರಣೆ ಇನ್ನೂ ಆಗಬೇಕಾಗಿದೆ.
ಹೈಕೋರ್ಟ್ನ ವಿಚಾರಣೆಯ ಕಾಲದಲ್ಲಿ ಸ್ಪೀಕರ್ ತಿಮ್ಮಪ್ಪ ಅವರ ಅಭಿಪ್ರಾಯವೂ ಪ್ರಸ್ತಾಪಕ್ಕೆ ಬರಬಹುದು. ಈಗ ಮತ್ತೊಮ್ಮೆ ಕ್ರಿಮಿನಲ್ ಆರೋಪಗಳ ತನಿಖೆಯ ವಿಚಾರದಲ್ಲಿ ನ್ಯಾಯಾಂಗದ ನಿಲವು ಸ್ಪಷ್ಟವಾಗಬೇಕಾಗಿದೆ. ಸಾಮಾನ್ಯ ಜ್ಞಾನ, ಅನುಭವದಿಂದ ಹೇಳಬಹುದಾದರೆ, ಶಾಸಕರಿಗೆ ವಿಶೇಷ ರಕ್ಷಣೆಯ ಯಾವ ಅಗತ್ಯವೂ ಇಲ್ಲ.
ಕರ್ನಾಟಕದಲ್ಲಿ ಶಾಸಕರ ವಿರುದ್ಧ ಕ್ರಿಮಿನಲ್ ಆರೋಪಗಳು ಪ್ರಕಟವಾಗಿರುವುದು ಹೊಸದೇನೂ ಅಲ್ಲ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಇಬ್ಬರು ಶಾಸಕರು ಈಗ ಜೈಲಿನಲ್ಲಿದ್ದಾರೆ. ಶಾಸಕರಾಗಿ, ಮಾಜಿ ಮಂತ್ರಿಯಾಗಿ ಜೈಲಿನಲ್ಲಿರುವ ವ್ಯಕ್ತಿ ಈಗ ಹೈದರಾಬಾದ್ನಲ್ಲಿ ಒಬ್ಬ ಸಾಮಾನ್ಯ ವಿಚಾರಣಾಧೀನ ಖೈದಿ. ಅತ್ಯಾಚಾರದ ಪ್ರಕರಣದ ಆರೋಪ ಹೊತ್ತ ಒಬ್ಬರು ಜಾಮೀನಿನ ಮೇಲೆ ಹೊರಗಿದ್ದಾರೆ.
ಕೇಂದ್ರ ಸರ್ಕಾರದ ಮಾಜಿ ಮಂತ್ರಿಗಳೂ, ಸಂಸತ್ ಸದಸ್ಯರೂ ಟೆಲಿಕಾಮ್ ಹಗರಣದ ಪ್ರಕರಣದಲ್ಲಿ ಜೈಲು ಸೇರಿದ್ದರು. ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ನ್ಯಾಯದಾನದ ಪಾವಿತ್ರ್ಯದ ದೃಷ್ಟಿಯಿಂದ ಈ ಪ್ರಕರಣಗಳೆಲ್ಲ ಆದಷ್ಟು ಬೇಗ ಇತ್ಯರ್ಥವಾಗಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

