ಸಂಪಾದಕೀಯ

ಸಾಲ ಮನ್ನಾಎಷ್ಟು ಸರಿ?

Published On :

ರೈತರು ಹಾಗೂ ಇತರ ಕೆಲವು ಜನ ವರ್ಗಗಳಿಗೆ, ಸರ್ಕಾರದ ಯೋಜನೆಗಳ ಅಡಿಯಲ್ಲಿ ಕೊಟ್ಟ ಸಾಲ ಇತ್ತೀಚಿನ ದಿನಗಳಲ್ಲಿ ಪೂರ್ತಿಯಾಗಿ ವಸೂಲಾದ ವರ್ಷಗಳೇ ಕಡಿಮೆ. ಇಲ್ಲವೇ ಇಲ್ಲ ಎನ್ನಬಹುದು.
ಪ್ರತಿ ಬಾರಿ ರೈತರ ಸಾಲ ಮನ್ನಾ ಮಾಡಿದಾಗಲೂ ಸರ್ಕಾರದ ಪ್ರತಿನಿಧಿಗಳು ಇದೇ ಕೊನೆಯ ಬಾರಿ, ಮುಂದೆ ಇದನ್ನೇ ಒಂದು ಸಂಪ್ರದಾಯದಂತೆ ಭಾವಿಸಬಾರದು ಎನ್ನುವ ಹಿತವಚನವನ್ನು ಹೇಳುವುದೂ ಸಂಪ್ರದಾಯವೇ ಆಗಿಬಿಟ್ಟಿದೆ. ಇತ್ತೀಚಿನ ವರ್ಷಗಳಲ್ಲಿ, ಚಿದಂಬರಮ್ ಅವರು ವಿತ್ತ ಸಚಿವರಾಗಿದ್ದ ಅವಧಿಯಲ್ಲೇ ಸುಮಾರು ಎಪ್ಪತ್ತು ಸಾವಿರ ಕೋಟಿ ರುಪಾಯಿಗಳ ಸಾಲ ಮನ್ನಾ ಆಗಿತ್ತು. ಆ ಸಮಯದಲ್ಲೇ ಆರ್ಥಿಕ ನೀತಿಯ ಪಂಡಿತರು, ಆಡಳಿತಗಾರರು, ಯೋಜನಾ ಬದ್ಧ ಪ್ರಗತಿಯ ಹಾದಿಯಲ್ಲಿ ವಿಶ್ವಾಸವಿರುವವರು ಇಂತಹ ಸಾಲ ಮನ್ನಾ ನೀತಿ ಅಭ್ಯುದಯದ ಮಾರ್ಗದಲ್ಲಿ ಒಂದು ದೊಡ್ಡ ಅಡಚಣೆ ಎಂದಿದ್ದರು. ಸರ್ಕಾರ ಆ ಮಾತನ್ನು ತಿರಸ್ಕರಿಸಲಿಲ್ಲ. ಆದರೆ ಅನಿವಾರ್ಯತೆಯಿಂದಾಗಿ ಸಾಲ ಮನ್ನಾ ಅಗತ್ಯವಾಯಿತು ಎನ್ನುವ ವಾದವನ್ನು ಮುಂದಿಟ್ಟಿತ್ತು.
ಈಗ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಚುನಾವಣೆ ಪ್ರಚಾರ ಸಮರದ ಕಾಲದಲ್ಲಿ ಕಾರ್ಯಸಾಧುವಲ್ಲದ ಅನೇಕ ಬಗೆಯ ಸಾಲ ಮನ್ನಾ, ಕೊಡುಗೆ - ಉಡುಗೊರೆಗಳನ್ನು ಪ್ರಕಟಿಸಿದ್ದರು. ಅದೆಲ್ಲದರ ಒಟ್ಟು ಹೊರೆ ಸುಮಾರು 54000 ಕೋಟಿ ರುಪಾಯಿಗಳೆಂದು ಅಂದಾಜು. ಆ ಹೊರೆಯನ್ನು ನಿಭಾಯಿಸಲು ಚಂದ್ರಬಾಬು ನಾಯ್ಡು ಅವರು ಈಗ ಕೇಂದ್ರದ ಮೊರೆ ಹೊಕ್ಕಿದ್ದಾರೆ. ನಿಜ. ಈಗಿನ ವಿಶೇಷ ಪರಿಸ್ಥಿತಿಯಲ್ಲಿ ಆಂಧ್ರಪ್ರದೇಶಕ್ಕೆ ಕೇಂದ್ರದ ಅಧಿಕ ನೆರವು ಅಗತ್ಯ.  ಆದರೆ ಆ ನೆರವು ಮೂಲ ಸೌಲಭ್ಯಗಳ ನಿರ್ಮಾಣಕ್ಕೆ, ಹೊಸ ರಾಜಧಾನಿಯನ್ನು ಕಟ್ಟುವುದಕ್ಕೇ ಬಳಕೆಯಾಗುವುದಾದರೆ ಅದು ಅನಿವಾರ್ಯ. ಪ್ರವಾಹ, ಬರಗಾಲದಂತಹ ಸನ್ನಿವೇಶಗಳನ್ನು ನಿಭಾಯಿಸುವುದಕ್ಕೂ ನೆರವನ್ನು ಅಪೇಕ್ಷಿಸುವುದು ಸರಿ. ಆದರೆ ಸಾಲ ಮನ್ನಾ- ಉಡುಗೊರೆ ಕೊಡುಗೆಗಳಿಗೂ ಕೇಂದ್ರದ ನೆರವನ್ನು ಅಪೇಕ್ಷಿಸುವುದು ಎಷ್ಟರ ಮಟ್ಟಿಗೆ ಸರಿ? ಆಂಧ್ರಪ್ರದೇಶಕ್ಕೆ ಮಾತ್ರ ಈ ನೆರವನ್ನು ಸೀಮಿತಗೊಳಿಸುವುದು ಸಾಧ್ಯವೇ? ಇಡೀ ದೇಶಕ್ಕೆ ಅದೇ ನೀತಿಯನ್ನು ಅನ್ವಯಿಸುವುದೂ ಸಾಧ್ಯವಿಲ್ಲದ ಮಾತು. ಈಗಲೂ ಪ್ರಖ್ಯಾತ ಅರ್ಥಶಾಸ್ತ್ರ ತಜ್ಞರು, ಕೇಂದ್ರ ಸರ್ಕಾರ ಚಂದ್ರಬಾಬು ನಾಯ್ಡು ಅವರ ಮನವಿಯನ್ನು ತಿರಸ್ಕರಿಸಬೇಕೆನ್ನುವ ಸಲಹೆ ಮಾಡಿದ್ದಾರೆ. ನೂತನ ಸರ್ಕಾರದ ನೀತಿಯನ್ನು ಪ್ರತಿಪಾದಿಸಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಭಾಷಣದಲ್ಲಿ ಮೂಲ ವಸ್ತು ಬಂಡವಾಳ ಸಂಚಯನಕ್ಕೆ ಸಂಬಂಧಪಟ್ಟಿದ್ದು. ಸಾಲ ಮನ್ನಾ ಆ ನೀತಿಗೆ ವಿರೋಧವಾಗಿರುವಂತಹ ಮಾತು.
ಕೆಲವು ಬ್ಯಾಂಕ್‌ಗಳು ಮತ್ತೊಮ್ಮೆ ಸಾಲ ಮನ್ನಾ ನೀತಿಯನ್ನು ಜಾರಿಗೆ ತರುವುದಾದರೆ, ಅದರ ವಿರುದ್ಧ ನ್ಯಾಯಾಲಯಗಳ ಮುಂದೆ ದಾವಾ ಹೂಡುವ ಚಿಂತನೆಯನ್ನು ಮಾಡುತ್ತಿವೆ ಎಂದು ವರದಿ. ಕೆಲವು ಪ್ರತಿಷ್ಠಿತ ಬ್ಯಾಂಕ್‌ಗಳು ತಜ್ಞ ವಕೀಲರ ಜತೆ ವಿಚಾರ ವಿನಿಮಯ ನಡೆಸಿವೆ ಎನ್ನುವ ವರದಿಗಳೂ ಪ್ರಕಟವಾಗಿವೆ. ಸರ್ಕಾರ ಯಾವುದೇ ಜನವರ್ಗಕ್ಕೆ ವಿಶೇಷವಾದ ನೆರವನ್ನು ಒದಗಿಸುವುದು ಸೂಕ್ತ ಎಂದು ಭಾವಿಸಿದರೆ, ಅದನ್ನು ಸರ್ಕಾರದ ಬಜೆಟ್ ಹಣದಿಂದಲೇ ನೇರವಾಗಿ ಪೂರೈಸುವುದು ಒಳಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.