ಸಂಪಾದಕೀಯ

ಸಂಶೋಧನಾ ಸಾಹಿತ್ಯಕ್ಕೆ ಹೊಸ ಸೇರ್ಪಡೆ - ಮೂತ್ರ ಸಾಹಿತ್ಯ!

Published On :

ಹಿಂದೆ ಬಸವಲಿಂಗಪ್ಪ ಅವರು ದೇವರಾಜ ಅರಸು ನೇತೃತ್ವದ ಮಂತ್ರಿಮಂಡಲದಲ್ಲಿದ್ದಾಗ ಕನ್ನಡ ಸಾಹಿತ್ಯಕ್ಕೆ 'ಬೂಸಾ ಸಾಹಿತ್ಯ' ಎಂಬ ಹೊಸ ಪ್ರಕಾರವೊಂದನ್ನು ಸೇರ್ಪಡೆಗೊಳಿಸಿದ್ದರು! ಅದು ಬಹಳ ಕಾಲದವರೆಗೆ ಚರ್ಚೆಯಲ್ಲಿತ್ತು. ಅದಾದ ಬಳಿಕ ಕನ್ನಡ ಸಾಹಿತ್ಯದಲ್ಲಿ 'ಇಕ್ರಲಾ ವದೀರ್ಲಾ' ಎಂಬ 'ಒದೆ ಸಾಹಿತ್ಯ' ಬಂತು. ಅದು ಎಷ್ಟು ಪ್ರಭಾವಿಯಾಗಿತ್ತು ಎಂದರೆ ಮುಂದೆ 'ಹೊಡಿ ಮಗ ಹೊಡಿ ಮಗ ಹೊಡಿ ಮಗ ಬಿಡ್ ಬೇಡ ಅವನ್ನಾ' ಎಂಬ ಚಿತ್ರಗೀತೆಯೂ ರಚನೆಯಾಯಿತು.
ಇದೀಗ ಕೆಲವು ವರ್ಷಗಳಾಗಿದ್ದವು - ಕನ್ನಡ ಸಾಹಿತ್ಯ ನೀರಸವೇನೋ ಎಂದು ಅನ್ನಿಸಲಿಕ್ಕೆ ಶುರುವಾಗಿ. ಆದರೆ ಡಾ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿ, ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಮುಂತಾದವರು ಆ ಕೊರತೆ ತುಂಬಿದ್ದಾರೆ. ಡಾ. ಅನಂತಮೂರ್ತಿಯವರು ಮರದ ಕೆಳಗಿರುವ ಕಲ್ಲಿನ ಮೇಲೆ ಮೂತ್ರ ಮಾಡಿದರೆ ಏನಾಗುತ್ತದೆ ಎಂದು ಪ್ರಯೋಗ-ಸಂಶೋಧನೆ ಮಾಡಿ ಗ್ರಂಥ ರಚನೆ ಮಾಡಿದರೆ ಇಲ್ಲಿಯವರೆಗೆ ಅಜ್ಞಾತವಾಸದಲ್ಲಿ ಅನಾಥವಾಗಿದ್ದ ಆ ಗ್ರಂಥವನ್ನು ಸಾರ್ವಜನಿಕ ವೇದಿಕೆಯ ಮೇಲೆ ಉಲ್ಲೇಖಿಸಿ ಆ ಗ್ರಂಥಕ್ಕೆ ಮತ್ತು ಡಾ. ಅನಂತಮೂರ್ತಿಯವರ ಅದ್ಭುತ ಸಂಶೋಧನೆಗೆ ಅಷ್ಟೇ ಅದ್ಭುತ ಪ್ರಚಾರ ಮತ್ತು ರಾಜಮಾನ್ಯತೆ ದೊರಕಿಸಿಕೊಟ್ಟಿದ್ದಾರೆ. ನೀರಸವಾಗಿದ್ದ ಕನ್ನಡ ಸಾಹಿತ್ಯಕ್ಕೆ ಮೂತ್ರ ಸೇರಿಸಿ ರಸಭರಿತವನ್ನಾಗಿ ಮಾಡಿದ್ದಾರೆ.
ಮುರಾರ್ಜಿ ದೇಸಾಯಿಯವರು ಪ್ರಧಾನಮಂತ್ರಿಗಳಾಗಿದ್ದಾಗ ಸ್ವಮೂತ್ರಪಾನವನ್ನು ಪ್ರತಿಪಾದಿಸಿ ಮೂತ್ರಕ್ಕೆ ರಾಷ್ಟ್ರಮಾನ್ಯತೆ ಗಳಿಸಿಕೊಟ್ಟಿದ್ದರು. ಅವರು ಪ್ರಧಾನಮಂತ್ರಿ ಸ್ಥಾನದಿಂದ ಕೆಳಗಿಳಿದ ಕೂಡಲೇ ಮೂತ್ರವೂ ಕೂಡಾ ಈ ರಾಷ್ಟ್ರಮಾನ್ಯತೆಯ ಪೀಠದಿಂದ ಪದಚ್ಯುತಗೊಂಡಿತ್ತು. ಆದರೆ ಡಾ. ಕಲಬುರ್ಗಿ ಮತ್ತು ಡಾ.ಅನಂತಮೂರ್ತಿ ಜೋಡಿ ಸಾಹಿತ್ಯದ ಮೂಲಕ ಜನರು ಮೂತ್ರವನ್ನು ಆಸ್ವಾದಿಸುವಂತೆ ಮಾಡಿದ್ದಕ್ಕಾಗಿ ಮುರಾರ್ಜಿ ದೇಸಾಯಿಯವರ ಆತ್ಮ ಸ್ವರ್ಗದಲ್ಲೇ ಸಂತೋಷಪಟ್ಟಿರಲೇಬೇಕು!
ಇನ್ನೂ ಕೆಲವು ಬುದ್ಧಿಜೀವಿಗಳಿದ್ದಾರೆ. ಗೌರಿ ಲಂಕೇಶ್, ಮರುಳಸಿದ್ದಪ್ಪ, ಗಿರೀಶ್ ಕಾರ್ನಾಡ್, ಭಗವಾನ್ ಮುಂತಾದವರು. ಮೂತ್ರಸಾಹಿತ್ಯದ ಹರಿಕಾರರಾಗಿ ಡಾ.ಕಲಬುರ್ಗಿ ಮತ್ತು ಡಾ.ಅನಂತಮೂರ್ತಿ ಅವರು ವಿಜೃಂಭಿಸಿರುವುದನ್ನು ನೋಡಿ ಸ್ಫೂರ್ತಿಗೊಂಡು ತಾವೂ ಯಾಕೆ ಅಂಥದೊಂದು ಪ್ರಯತ್ನಕ್ಕೆ ಕೈಹಾಕಬಾರದು ಎಂದು ಆಲೋಚಿಸಿ ಕನ್ನಡ ಸಾಹಿತ್ಯಕ್ಕೆ ಮೂತ್ರ ಸಾಹಿತ್ಯ ಎಂಬ ಪ್ರಕಾರವೊಂದನ್ನು ಸೇರ್ಪಡೆಗೊಳಿಸಲು ಗಂಭೀರವಾಗಿ ಚಿಂತಿಸಿದ್ದರೆ ಅದರಲ್ಲೇನೂ ತಪ್ಪಿಲ್ಲ ಎಂದು ನನ್ನ ಭಾವನೆ.
ಇನ್ನುಳಿದಂತೆ ಕೋ. ಚೆನ್ನಬಸಪ್ಪ, ಡಾ. ಸಿ. ಎನ್. ರಾಮಚಂದ್ರನ್ ಮುಂತಾದ ಹಿಮ್ಮೇಳದವರು ಇನ್ನೂ ನವೀನ ಸಾಹಿತ್ಯವನ್ನು ಕಂಡುಕೊಂಡರೆ ಅದು ಅತ್ಯಂತ ಸಹಜ ಎಂದು ನನ್ನಂತಹವರು ಭಾವಿಸಬಹುದಾಗಿದೆ.
-ಸಚ್ಚಿದಾನಂದ ಹೆಗಡೆ, ಶಿರಸಿ



ಕನ್ನಡಪ್ರಭ, ನಂ.1 , ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.