ಇದು ಸುಮಾರು ಒಂದು ನೂರು ವರ್ಷಗಳ ಹಿಂದೆ ನಡೆದ ಒಂದು ನೈಜ ಘಟನೆ. ಗಿರಿಯಪ್ಪ, ಹಳ್ಳಿಯೊಂದರ ನಾಯಿಂದ. ಆಗಿನ ಕಾಲದಲ್ಲಿ ಪ್ರತಿ ಹಳ್ಳಿಯಲ್ಲಿಯೂ ಪ್ರತಿ ಕಸುಬಿನವರೂ ಇರುತ್ತಿದ್ದರು. ಅವರು ರೈತಾಪಿ ಜನರಿಗೆ ಸೇವೆಯನ್ನು ಒದಗಿಸುತ್ತಿದ್ದರು. ಅವರ ಸೇವೆಗೆ ಪ್ರತಿಫಲವಾಗಿ ವರ್ಷಕ್ಕೊಮ್ಮೆ ತಾವು ಬೆಳೆದ ಕಾಳುಕಡಿಗಳನ್ನು ನೀಡುತ್ತಿದ್ದ ಪದ್ಧತಿ ಇತ್ತು. ಅದಕ್ಕೆ ಆಯ ಎಂದು ಕರೆಯುತ್ತಿದ್ದರು. ಹೀಗಾಗಿ ಗಿರಿಯಪ್ಪನ ಆದಾಯ ಅನಿಶ್ಚಯವಾಗಿತ್ತು. ಅವನು ಯಾರದಾದರೂ ಮನೆಯವರ ಸೇವೆ ಮಾಡಿದರೆ ಕಾಳುಕಡಿ ಕೊಡುತ್ತಿದ್ದರು, ಇಲ್ಲವೇ ಮನೆಯಲ್ಲಿದ್ದ ಹಿಟ್ಟು ಹಾಕಿ ಸಾಗಹಾಕುತ್ತಿದ್ದರು. ಅವನಿಗೆ ಹೆಂಡತಿ ಮಕ್ಕಳು ಯಾರೂ ಇರದಿದ್ದುದರಿಂದ ಮನೆಯಲ್ಲಿ ಅಡುಗೆ ಮಾಡಿಕೊಳ್ಳುವುದು ತಪ್ಪಿದರೆ ಸಾಕು ಎಂದು ಬಯಸುತ್ತಿದ್ದ. ಅವನೆಂದೂ ಯಾವುದೇ ಜಗಳ ಮತ್ತು ಇತರರ ಸುದ್ದಿಗೆ ಹೋದವನಲ್ಲ. ಕರೆದ ಕಡೆ ಹೋಗಿ ಉಂಡು, ಅವರಿವರು ಕೊಟ್ಟ ಕಾಳನ್ನು ಮಾರಿ ಸ್ವಲ್ಪ ಹಣವನ್ನೂ ಇಟ್ಟುಕೊಂಡಿದ್ದ. ಹೀಗಾಗಿ ಅವನ ಬಗ್ಗೆ ಎಲ್ಲರಿಗೂ ಆದರವಿತ್ತು. ಒಮ್ಮೆ ಅವನು ತನ್ನ ಕಸುಬಿಗಾಗಿ ಹಳ್ಳಿಗೆ ಬರುತ್ತಿದ್ದಾಗ ಊರ ದನಗಳು ನೀರಿಗಾಗಿ ಬಲುದೂರದ ಕೆರೆಗೆ ಹೋಗುತ್ತಿದ್ದುದನ್ನು ಗಮನಿಸಿದ. ಬೇಸಿಗೆಯಲ್ಲಂತೂ ಅವುಗಳ ಪಾಡು ಬೇಡ. ಊರವರಿಗೇ ಕುಡಿಯಲು ನೀರಿಲ್ಲದಾಗ ಪಾಪ ಆ ಮೂಕ ಪ್ರಾಣಿಗಳಿಗೆ ಎಲ್ಲಿಂದ ತರಬೇಕು? ಇಂತಹ ಪ್ರಾಣಿಗಳಿಗಾಗಿ ಸಹಾಯ ಮಾಡಬೇಕೆಂದು ಅಂದುಕೊಂಡ ಗಿರಿಯಪ್ಪ ಊರ ಹೊರಗೆ ಒಂದು ಸ್ಥಳದಲ್ಲಿ ಒಂದು ಕುಂಟೆಯನ್ನು ನಿರ್ಮಿಸಿದ. ಅದಕ್ಕಾಗಿ ಒಡ್ಡರನ್ನು ಕರೆಸಿ ತನ್ನ ಕೈಲಿದ್ದ ಹಣ ನೀಡಿ ನೀರಿಗೊಂದು ಆಶ್ರಯಮಾಡಿದ. ಅವನ ಈ ಕಾರ್ಯದಿಂದಾಗಿ ಕುಂಟೆಯಲ್ಲಿ ನೀರು ತುಂಬಿಕೊಂಡು ವರ್ಷವಿಡೀ ದನಕರುಗಳಿಗೆ ನೀರು ಸಿಗುವಂತಾಯಿತು. ಆ ಕುಂಟೆಯ ನೀರು ಸಿಹಿಯಾಗಿದ್ದುದರಿಂದ ಅಲ್ಲಿ ಹಾದು ಹೋಗುವ ಜನರೂ ಸಹ ತಮ್ಮ ಬಾಯಾರಿಕೆಯನ್ನು ತಣಿಸಿಕೊಳ್ಳುತ್ತಿದ್ದರು.
ಎಲ್ಲರಿಗೂ 'ಗಿರಿಯ' ಆಗಿದ್ದವನು ಈಗ ಗಿರಿಯಪ್ಪನಾಗಿದ್ದ. ಜನರ ಮನಸ್ಸಿನಲ್ಲಿ ಅವನೊಬ್ಬ ಬಡವನಾದರೂ ಅವರ ದೃಷ್ಟಿಯಲ್ಲಿ ದೊಡ್ಡ ಮನುಷ್ಯನಾಗಿದ್ದ. ಎಲ್ಲರೂ ಆ ಕುಂಟೆಯನ್ನು ಗಿರಿಯಪ್ಪನ ಕುಂಟೆ ಎಂದೇ ಕರೆಯಲಾರಂಭಿಸಿದರು. ಈ ಘಟನೆಯನ್ನು ಮಾಸ್ತಿಯವರು ತಮ್ಮ ಕೃತಿಯೊಂದರಲ್ಲಿ ಹೇಳಿದ್ದಾರೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ