ಸಂಪಾದಕೀಯ

ಭಾರತದ ಸೋಲಿಗೆ ನೆಹರೂ ಹೊಣೆ ಅಧಿಕೃತ ವರದಿಯ ವಿವರಣೆ

Published On :

1962. ಈಶಾನ್ಯ ಭಾರತದ ಗಡಿಯಲ್ಲಿ ಚೀನಾ, ಭಾರತದ ನೆಲದ ಮೇಲೆ ಆಕ್ರಮಣ ನಡೆಸಿದಾಗ, ಸಾಕಷ್ಟು ಸಿದ್ಧತೆ ಇಲ್ಲದೇ, ಅಸಮರ್ಪಕವೆಂದು ಗೊತ್ತಿದ್ದ ಶಸ್ತ್ರಾಸ್ತ್ರಗಳನ್ನೇ ಅವಲಂಬಿಸಿ, ಚೀನಾದ ಸೀಮೆಗೇ ದಾಳಿ ಇಟ್ಟ ಭಾರತೀಯ ಸೇನೆ ಹೀನಾಯವಾಗಿ ಸೋತಿದ್ದರೂ, ಅದನ್ನು ನಮ್ಮ ಎಲ್ಲ ಸರ್ಕಾರಗಳೂ ಅತಿ ರಹಸ್ಯವನ್ನುವಂತೆ ಜನರಿಂದ ಮುಚ್ಚಿಟ್ಟಿದ್ದು ಈಗ ಬಟಾ ಬಯಲಾಗಿದೆ.
ಆ ಸೋಲಿನ ಸಂಬಂಧ (ಅದನ್ನು ಭಾರತ ಇನ್ನೂ ಅಧಿಕೃತವಾಗಿ ಒಪ್ಪಿಲ್ಲ) ಲೋಕಸಭೆಯಲ್ಲಿ ಒಮ್ಮೆ ಚರ್ಚೆ ನಡೆದಾಗ ನೆಹರೂ - ಕೃಷ್ಣ ಮೆನನ್ (ಅಂದಿನ ರಕ್ಷಣಾ ಮಂತ್ರಿ) ಸಮ್ಮುಖದಲ್ಲೇ ಆಚಾರ್ಯ ಕೃಪಲಾನಿ ಅವರು ಸರ್ಕಾರದ ನಾಯಕತ್ವದ ವಿರುದ್ಧ ದೊಡ್ಡ, ಅತ್ಯಂತ ಕಟುವಾದ ನೇರವಾದ ಆರೋಪಗಳ ಪಟ್ಟಿಯನ್ನೇ ಮಂಡಿಸಿದ್ದರು.
ಸಮರದ ವೈಫಲ್ಯಗಳ ಕಾರಣಗಳನ್ನು ಹುಡುಕಲು ಸರ್ಕಾರ ಹೆಂಡರ್‌ಸನ್ ಬ್ರೂಕ್ಸ್ ಸಮಿತಿಯನ್ನು ರಚಿಸಿದ್ದು, ಆ ಸಮಿತಿಯ ವರದಿ 1963 ರಲ್ಲೇ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಅದರ ಪರಿಣಾಮವಾಗಿ ಕೃಷ್ಣ ಮೆನನ್ ರಕ್ಷಣಾ ಮಂತ್ರಿಯ ಸ್ಥಾನಕ್ಕೆ ರಾಜಿನಾಮೆ ನೀಡಿ, ಅನಂತರ ಕಾಂಗ್ರೆಸ್ಸನ್ನೇ ತೊರೆಯಬೇಕಾಗಿ ಬಂದಿದ್ದು ಇತಿಹಾಸ.
ಭಾರತ-ಚೀನಾ ಸಮರದಲ್ಲಿ, ಈಶಾನ್ಯ ಭಾರತದ ಭೂಭಾಗದ ನಿಜವಾದ ಸ್ವರೂಪದ ಅರಿವಿದ್ದ ಸೇನಾ ಕಮಾಂಡರ್‌ಗಳಿಗೆ ಚೀನಾ ಪಡೆಗಳನ್ನು ಹಿಮ್ಮೆಟ್ಟಿಸಿ, ಆ ರಾಷ್ಟ್ರದೊಳಗೇ ನುಗ್ಗಿ ಎದುರಾಳಿಯನ್ನು ಸದೆಬಡಿಯುವ ವಿಶ್ವಾಸವಿರಲಿಲ್ಲ. ಆ ವಿಚಾರದಲ್ಲಿ ಹಲವಾರು ದಾಖಲೆಗಳನ್ನು ಒಳಗೊಂಡ ಪುಸ್ತಕಗಳು ಪ್ರಕಟವಾಗಿವೆ. ಆದರೂ ಅಂದಿನ ರಾಜಕೀಯ ನಾಯಕತ್ವ - ಅಂದರೆ ಜವಹರಲಾಲ ನೆಹರೂ - ವಿ.ಕೆ. ಕೃಷ್ಣ ಮೆನನ್ ಬಲಾತ್ಕಾರದಿಂದ ಮುನ್ನುಗ್ಗಿ ಹೋರಾಡಲು ಸೇನೆಯ ಕಮಾಂಡರ್‌ಗಳಿಗೆ ಸೂಚನೆ ಕೊಟ್ಟಿರುವ ವಿಚಾರ ಹೆಂಡರ್ಸನ್ ಬ್ರೂಕ್ಸ್ ವರದಿಯಲ್ಲಿ ಸ್ಥೂಲವಾಗಿ, ಸೂಚ್ಯವಾಗಿ ಪ್ರಸ್ತಾಪವಾಗಿದ್ದೂ ದಾಖಲೆಯಾಗಿದೆ. ಆದರೂ ಈ ಸಮರದ ವಿಚಾರದಲ್ಲಿ, ಅದು ನಡೆದು ಅರ್ಧಶತಮಾನದ ಅನಂತರವೂ ಎಲ್ಲವೂ ರಹಸ್ಯವೆನ್ನುವಂತಹ ವಾತಾವರಣ ನಿರ್ಮಾಣವಾಗಿದೆ. ಆ ವಾತಾವರಣವನ್ನು ತಿಳಿಗೊಳಿಸಲು ಹಾಗೂ ಸತ್ಯಕ್ಕೆ ಅಪಚಾರವಾಗಬಾರದೆನ್ನುವ ದೃಷ್ಟಿಯಿಂದ ಆಸ್ಟ್ರೇಲಿಯದ ಹಿರಿಯ ಪತ್ರಕರ್ತ (1962 ರಲ್ಲಿ ದೆಹಲಿಯಲ್ಲಿ ಲಂಡನ್ ಟೈಮ್ಸ್ ಪ್ರತಿನಿಧಿ) ನೆವಿಲ್ಲೆ ಮ್ಯಾಕ್ಸ್‌ವೆಲ್, ಈಗ ಆ ವರದಿಯಲ್ಲಿ ಪ್ರಸ್ತಾಪಿಸಿದ ವಿಚಾರಗಳನ್ನೆಲ್ಲ ತಮ್ಮ ವೆಬ್‌ಸೈಟಿನಲ್ಲೇ ಹಾಕಿದ್ದಾರೆ. ಮ್ಯಾಕ್ಸ್‌ವೆಲ್, ಈ ವಿಚಾರ ಕುರಿತು 1970ರಲ್ಲಿ ಒಂದು, 2000ರಲ್ಲಿ ಇನ್ನೊಂದು ಪುಸ್ತಕವನ್ನು ಪ್ರಕಟಿಸಿದ್ದರೂ ಅದಕ್ಕೆ ಇಲ್ಲಿ ಪ್ರತಿಕ್ರಿಯೆ ಸಿಗಲಿಲ್ಲ. ಭಾರತೀಯ ಪ್ರಕಾಶಕರು ಆ ಘಟನೆಗಳನ್ನು ಕುರಿತ ಪುಸ್ತಕದ ಪ್ರಕಟಣೆಗೆ ಸಿದ್ಧರಿರಲಿಲ್ಲ. ಹೆಂಡರ್‌ಸನ್ ಬ್ರೂಕ್ಸ್ ವರದಿ ಕೆಲವು ಕಾಲ ಆಕ್ಸ್‌ಫರ್ಡ್ ಲೈಬ್ರರಿಯಲ್ಲೂ ಇತ್ತು. (ಅದನ್ನು ಮ್ಯಾಕ್ಸ್‌ವೆಲ್ ಅವರೇ ಅಲ್ಲಿ ಇಟ್ಟಿದ್ದರು)
ಎಷ್ಟೇ ರಹಸ್ಯವಾದ ದಾಖಲೆಯೇ ಆದರೂ ಮೂವತ್ತು ವರ್ಷಗಳ ಅನಂತರ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕೆನ್ನುವ ಕಾಯಿದೆ ಇಂಗ್ಲೆಂಡ್, ಅಮೆರಿಕಗಳಲ್ಲಿದೆ. ಈಗ ಭಾರತದಲ್ಲೂ ಅದರ ಪ್ರಸ್ತಾಪವಿದ್ದರೂ, ಲೋಕಸಭೆಯಲ್ಲಿ ರಕ್ಷಣಾ ಮಂತ್ರಿ ಎ.ಕೆ. ಆಂಟನಿ ಅವರು ವರದಿಯಲ್ಲಿ ಅಡಕವಾಗಿರುವ ಸೂಕ್ಷ್ಮ ವಿಚಾರಗಳನ್ನು ಬಹಿರಂಗಪಡಿಸುವುದು ಸಾಧ್ಯವಿಲ್ಲ ಎಂದಿದ್ದಾರೆ. ಈಗ ಚುನಾವಣೆಯ ಸಮಯ. ಒಂದು ರೀತಿಯಲ್ಲಿ ಚುನಾವಣೆ ಕಾಂಗ್ರೆಸ್ - ಬಿಜೆಪಿಗಳ ದೇಶಪ್ರೇಮ, ರಾಷ್ಟ್ರಶಕ್ತಿಗಳ ಅಗ್ನಿಪರೀಕ್ಷೆಯ ಸಮಯ. ಇಂತಹ ಪರ್ವ ಕಾಲದಲ್ಲಿ ನೆವಿಲ್ಲೆ ಮ್ಯಾಕ್ಸ್‌ವೆಲ್ ಪ್ರಕಟಿಸಿರುವ ದಾಖಲೆಯೇ ಅಧಿಕೃತವೆಂದು ಭಾವಿಸಬಾರದೆನ್ನುವ ಅಭಿಪ್ರಾಯ ಕೇಂದ್ರ ಸರ್ಕಾರಕ್ಕೆ ಇದ್ದರೆ, ತಾನೇ ವರದಿಯ ಮೇಲಿನ ರಹಸ್ಯದ ಮುಸುಕನ್ನು ತೆಗೆದು, ಅದರ ಮುಕ್ತ ಪ್ರಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಈಗಾಗಲೇ ಬಿಜೆಪಿ ನಾಯಕರು ವರದಿಯ ಪ್ರಕಟಣೆಗೆ ಒತ್ತಾಯಪಡಿಸಿದ್ದೂ ಆಗಿದೆ.
ಇದು ಕಾಂಗ್ರೆಸ್ - ಬಿಜೆಪಿ, ನೆಹರೂ-ಮೆನನ್- ಆಚಾರ್ಯ ಕೃಪಲಾನಿ ಅವರ ವೈಯಕ್ತಿಕ ವಿಚಾರವಲ್ಲ. ದೇಶದ ಇತಿಹಾಸದ ಒಂದು ಪ್ರಮುಖ ಘಟ್ಟದ ವಿವರಗಳನ್ನು ತಿಳಿಯುವ ಭಾರತೀಯರ ಹಕ್ಕಿನ ಸಮಸ್ಯೆ. ನೂರಿಪ್ಪತ್ತು ಕೋಟಿ ಜನರ ಭವಿಷ್ಯವನ್ನು ಇತ್ಯರ್ಥಪಡಿಸುವ ಚುನಾವಣೆಯ ಪ್ರಚಾರ ಸಮರದಲ್ಲಿ ಇಂತಹ ವಿಷಯವನ್ನು ಚರ್ಚಿಸುವುದನ್ನು ಬಿಟ್ಟು ಚರ್ಚೆಗೆ ಬೇರೆ ಯಾವ ಘನಂದಾರಿ ರಾಷ್ಟ್ರೀಯ ವಿಚಾರವಿದೆ? ಸರ್ಕಾರ ಈಗಲೂ ರಾಜಕೀಯ ಕಾರಣಗಳಿಗಾಗಿ ವರದಿಯ ಬಿಡುಗಡೆಯನ್ನು ವಿಳಂಬ ಮಾಡಿದರೆ, ಅದು ಬೇರೆ ದಾರಿಗಳಲ್ಲಿ ಜನರಿಗೆ ಲಭ್ಯವಾಗುವುದು ಖಚಿತ. ಇದು ಇಂಟರ್‌ನೆಟ್ ಯುಗ. ಯಾವ ರಹಸ್ಯವೂ ಬಹುಕಾಲ ಹಾಗೇ ಉಳಿಯುವುದಿಲ್ಲ. ಸರ್ಕಾರ ಇದನ್ನು ತಿಳಿದು ತಾನೇ ಸತ್ಯಪ್ರಕಾಶಕ್ಕೆ ಮುಂದಾಗಬೇಕು. ಅದು ರಾಜಧರ್ಮ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.