ಸಂಪಾದಕೀಯ

ಜನಜಾಗೃತಿಯಾಗದೇ ವ್ಯವಸ್ಥೆ ಬದಲಾಗದು

Published On :

ದೇಶದಲ್ಲಿ ಪ್ರಚಲಿತದಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇಂದಿನ ದಿನಗಳಲ್ಲಿ ಭ್ರಷ್ಟರು ಮುಳುವಾಗುತ್ತಿರುವುದು ಸತ್ಯ.  ಬದಲಾಗಿರುವ ಇಂದಿನ ಸಮಾಜದಲ್ಲಿ ಶ್ರೀಸಾಮಾನ್ಯ ಹಾಗೂ ಮಧ್ಯಮ ವರ್ಗದವರು ಬಗೆಹರಿಯಲಾಗದ ಅನೇಕ ದಿನನಿತ್ಯದ ಸಮಸ್ಯೆಗಳಿಂದ ತೊಳಲಾಡುತ್ತಿದ್ದಾರೆ.
ಹಿಂದೆಂದೂ ಕಾಣದ, ಕಂಡರಿಯದ ಅಡಿಯಿಂದ ಮುಡಿಯವರೆಗೂ ಸಮಾಜದ ವಿವಿಧ ಅಂಗಗಳಲ್ಲಿ ಭ್ರಷ್ಟಾಚಾರವು ತಲೆಯೆತ್ತಿ ರಕ್ಕಸ ಬಾಯಿ ತೆರೆದಿರುವುದು ಕಠೋರ ಸತ್ಯ. ಲೆಕ್ಕವಿಲ್ಲದಷ್ಟು ಭ್ರಷ್ಟಾಚಾರದಲ್ಲಿ ತೊಡಗಿದ್ದರೂ ಸಹ, ಕಾನೂನಿನ ದೌರ್ಬಲ್ಯ, ಸಡಿಲತೆಯಿಂದ ಸುಲಭವಾಗಿ ನುಣುಚಿಕೊಂಡು ರಾಜಕೀಯ ಚದುರಂಗ ಆಟದಲ್ಲಿ ಮತ್ತೆ ಬೆರೆತು ಚುನಾವಣಾ ಕಣಕ್ಕೆ ಇಳಿದು ಆಯ್ಕೆಯಾಗುತ್ತಿದ್ದಾರೆ. ಸಂಪೂರ್ಣ ಜನಜಾಗೃತಿಯಾಗದೆ ವ್ಯವಸ್ಥೆ ಬದಲಾಗದು. ಇಂತಹ ನಾಯಕರುಗಳಿಂದ ಉತ್ತಮ, ಪ್ರಾಮಾಣಿಕ ಸೇವೆಯನ್ನು ಜನತೆ ನಿರೀಕ್ಷಿಸಬಹುದೇ? ದೇಶದ ಆಪಾರ ಸಂಪತ್ತು ಕೆಲವೇ ಕೆಲವು ಜನರ ಸ್ವತ್ತಾಗಿರುವುದು ವಾಸ್ತವ. ಇಂದಿನ ಬಹಳಷ್ಟು ಉದ್ಯಮಿಗಳು ಈ ಹಿಂದೆ ಸಣ್ಣಪುಟ್ಟ ವ್ಯವಹಾರಗಳನ್ನು ಮಾಡುತ್ತಿದ್ದು, ಹಳೆಯ ದ್ವಿಚಕ್ರ ವಾಹನಗಳಲ್ಲಿ ಓಡಾಡುತ್ತಿದ್ದವರು, ಇಂದು ತಮ್ಮ ವ್ಯಾಪಾರ ವ್ಯವಹಾರಗಳನ್ನು ವಾಮಮಾರ್ಗದಲ್ಲಿ ನಡೆಸುತ್ತಾ ಅಪಾರ ಸಂಪತ್ತು ಗಳಿಸುತ್ತಾ ಸರ್ಕಾರದ ಬೊಕ್ಕಸಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ತೆರಿಗೆಗಳನ್ನು ತಪ್ಪಿಸಿ ವಂಚಿಸುತ್ತಿದ್ದಾರೆ. ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಾ ದಿನದಿಂದ ದಿನಕ್ಕೆ ಭಾರಿ ಬಂಗಲೆಗಳು, ವ್ಯಾಪಾರಿಕ ಸಂಸ್ಥೆ, ಕಾಂಪ್ಲೆಕ್ಸ್‌ಗಳನ್ನು ನಿರ್ಮಿಸುತ್ತಿದ್ದು ಪ್ರಭಾವಿ ಶ್ರೀಮಂತ ವರ್ಗಕ್ಕೆ ಸೇರ್ಪಡೆಯಾಗುತ್ತಿರುವುದು ಹಗಲು-ರಾತ್ರಿಗಳಷ್ಟೇ ಸತ್ಯ.
ಸಮಾಜದಲ್ಲಿ ಬಿಗಿಯಾದ ಕಟ್ಟುನಿಟ್ಟಿನ ಕಾಯಿದೆ-ಕಾನೂನುಗಳಿಂದ ಕೂಡಿರುವ ಪ್ರಾಮಾಣಿಕ ದೃಢ ಸರ್ಕಾರ ರಚನೆಯಾಗಿ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ ಪೂರ್ಣ ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತೆ ಆದರೆ ಮಾತ್ರ ಪ್ರಜಾಪ್ರಭುತ್ವದ ಅರ್ಥ ಸಾರ್ಥಕವಾಗುತ್ತದೆ.
-ಕುಮಾರಸ್ವಾಮಿ, ಹಾಸನ

ಗದಗ-ಗುಲ್ಬರ್ಗ ಫಾಸ್ಟ್ ಪ್ಯಾಸೆಂಜರ್
ರೇಲ್ವೆಯು ಗುಲ್ಬರ್ಗದಿಂದ ಹುಬ್ಬಳ್ಳಿಗೆ ನೇರ ರೈಲು ಸಂಪರ್ಕ ಒದಗಿಸಿ (ಸಿಕಂದರಾಬಾದ್ ಗುಲ್ಬರ್ಗ-ಹುಬ್ಬಳ್ಳಿ ರೈಲು ಸಂಖ್ಯೆ 17319 / 17320 ವಾರಕ್ಕೆ ಮೂರು ಬಾರಿ) ಬಹುದಿನಗಳ ಕನಸನ್ನು ನನಸು ಮಾಡಿದೆ. ಈ ಕಾರ್ಯಕ್ಕೆ ಡಾ.ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆಗಳು.  ಜುಲೈ 1ರಿಂದ ರೈಲು ನಿತ್ಯವೂ ಓಡಾಡಲಿದೆ ಎಂದು ತಿಳಿದುಬಂದಿದೆ. ಬಿಜಾಪೂರ, ಬಾಗಲಕೋಟೆ, ಬಾದಾಮಿ, ಗದಗ, ಹುಬ್ಬಳ್ಳಿ  ನಗರಗಳಿಗೆ ಇದು ತುಂಬಾ ಅನುಕೂಲ. ಉತ್ತರ ಕರ್ನಾಟಕ ಹೈದ್ರಾಬಾದ್ ಕರ್ನಾಟಕದೊಂದಿಗೆ ಬೆಸೆದಂತಾಗಿದೆ. ಆದರೆ ರೈಲು ಮಾರ್ಗವಿದ್ದರೂ ನೇರ ರೈಲಿನ ಸಂಪರ್ಕ ಇಲ್ಲದ ಕಾರಣ, ಹೈದ್ರಾಬಾದ್ ಕರ್ನಾಟಕದ ಕೊಪ್ಪಳ, ಹೊಸಪೇಟೆ, ಬಳ್ಳಾರಿಯ ಜನತೆ ವಿಭಾಗೀಯ ಕೇಂದ್ರ ಗುಲ್ಬರ್ಗಕ್ಕೆ ರಸ್ತೆ ಮೂಲಕ ಪ್ರಯಾಣ ಅನಿವಾರ್ಯವಾಗಿದೆ. ಸಮಯದ ಜೊತೆಗೆ ರಸ್ತೆ ಪ್ರಯಾಣ ದುಬಾರಿಯಾಗಿದೆ. ರೇಲ್ವೆ ಇಲಾಖೆ, ಗದಗ್ ಕೊಪ್ಪಳ-ಹೊಸಪೇಟೆ-ಬಳ್ಳಾರಿ-ಗುಂತಕಲ್ ರಾಯಚೂರ್ ವಾಡಿ ಮೂಲಕ ಉಭಯ ದಿಕ್ಕಿನಿಂದ ರಾತ್ರಿ ವೇಳೆ ಸಂಚರಿಸುವ ಫಾಸ್ಟ್ ಪ್ಯಾಸೆಂಜರ್ ರೈಲನ್ನು ಆರಂಭಿಸಿದಲ್ಲಿ, ಇಲ್ಲಿಂದ ಮಂತ್ರಾಲಯ, ಹಂಪಿಗೆ ಹೋಗುವ ಜನತೆಗೆ ಹಾಗೂ ಕೊಪ್ಪಳ, ಹೊಸಪೇಟೆ, ಬಳ್ಳಾರಿಯ ಜನತೆ ವಿಭಾಗೀಯ ಕೇಂದ್ರ ಗುಲ್ಬರ್ಗಕ್ಕೆ ನೇರ ರೈಲು ದೊರಕಿದಂತಾಗುತ್ತದೆ.
-ಮುದಗಲ್ ವೆಂಕಟೇಶ, ಗುಲಬರ್ಗ

ಖರ್ಚಾದ ಹಣವನ್ನು ಮಂತ್ರಿಗಳಿಂದಲೇ ಪಡೆಯಿರಿ
ಲೋಕೋಪಯೋಗಿ ಇಲಾಖೆ ಮಂತ್ರಿವರ್ಯರು 'ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ' ಅನ್ನುವ ಹಾಗೆ ಎರಡೂವರೆ ಕೋಟಿ ರುಪಾಯಿ ಖರ್ಚು ಮಾಡಿ ತಮಗೆ ಸಿಕ್ಕ ಬಂಗಲೆಯನ್ನು ನವೀಕರಣ ಮಾಡಿದ್ದು ಖಂಡನೀಯ. ಈ ಬಗ್ಗೆ ಅವರ ಪಕ್ಷದವರೇ ಖಂಡಿಸಿದ್ದು ಸ್ವಾಗತಾರ್ಹ. ಈ ಕೂಡಲೇ ಮುಖ್ಯಮಂತ್ರಿಗಳು ಮಂತ್ರಿಗಳಿಂದ ಖರ್ಚಾದ ಹಣವನ್ನು ವಸೂಲಿ ಮಾಡಿಸಬೇಕು. ಮಂತ್ರಿಗಳು ಅಧಿಕಾರದಲ್ಲಿರುವವರೆಗೆ ಆ ಬಂಗಲೆಯಲ್ಲಿ ಇದ್ದು ಮಜಾ ಅನುಭವಿಸಲಿ. ನಂತರ ಹೇಗೂ ಆ ಬಂಗಲೆ ಸರ್ಕಾರಕ್ಕೆ ಸೇರುತ್ತದೆ. ಮಂತ್ರಿಗಳಿಂದ ಈ ರೀತಿ ಆದರೂ ದೇಶ ಸೇವೆ ನಡೆಯಲಿ.
-ಕುತ್ಪಾಡಿ ಜಯಪ್ರಕಾಶ ಹೆಗ್ಡೆ, ತೀರ್ಥಹಳ್ಳಿ.

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.