ಸಂಪಾದಕೀಯ

ಅಸ್ಸಾಮ್ ಹತ್ಯಾಕಾಂಡ ಆರೋಪಕ್ಕೇನು ಆಧಾರ?

Published On :

ಕಳೆದ ಒಂದು ವಾರದಿಂದಲೂ ಅಸ್ಸಾಮ್‌ನ ಬೋಡೋಲ್ಯಾಂಡ್ ಜಿಲ್ಲೆಗಳ ಗಡಿಯಲ್ಲಿ ಕಂಡುಬಂದಿರುವ ಜನಾಂಗೀಯ ಸಂಘರ್ಷ ಹಾಗೂ ಅಮಾಯಕರ ಮಾರಣ ಹೋಮಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ಕಾರಣಗಳು ವಾಸ್ತವದಲ್ಲಿ ಸಮರ್ಥನೀಯವಲ್ಲ.
ಅಲ್ಲಿ ಬೋಡೋ ಜನಾಂಗೀಯ ಮುಂಖಂಡರು ಹಾಗೂ ಅಲ್ಪ ಸಂಖ್ಯಾತರ ಪ್ರತಿನಿಧಿಗಳು ಒಂದೇ ಕಡೆ ಕೂತು ಮಾತುಕತೆ ನಡೆಸುವ ವಾತಾವರಣವನ್ನು ನಿರ್ಮಿಸುವ ಹೊಣೆಗಾರಿಕೆಯನ್ನು ಹೊತ್ತಿರುವ ಕೇಂದ್ರ ಸರ್ಕಾರ ತಲೆಗೆಲ್ಲಾ ಒಂದೇ ಮಂತ್ರವೆನ್ನುವಂತೆ, ಹಿಂಸಾಚಾರಕ್ಕೆ ಕೆಲವು ಕೋಮುವಾದಿ ಶಕ್ತಿಗಳನ್ನು ದೂರಿದೆ. ಕೇಂದ್ರ ಗೃಹಮಂತ್ರಿ ಸುಶೀಲ ಕುಮಾರ ಶಿಂಧೆ ಅವರು ತಮ್ಮ ಎಂದಿನ ಶೈಲಿಯಲ್ಲಿ ಚುನಾವಣೆ ಸಮಯದಲ್ಲಿ ಅಸ್ಸಾಮ್‌ನಲ್ಲಿ ವ್ಯಾಪಕವಾಗಿ ಕೋಮುವಾರು ಗಲಭೆಗಳನ್ನು ಪ್ರಚೋದಿಸುವುದೇ ಬೋಡೋಲ್ಯಾಂಡ್ ಗಡಿನಾಡಿನ ಘಟನೆಗಳಿಗೆ ಕಾರಣ ಎಂದಿದ್ದಾರೆ.
ಅವರು ಈ ಮಾತನ್ನು ಒಂದು ಪತ್ರಿಕಾ ಗೋಷ್ಠಿಯಲ್ಲೇ ಹೇಳಿರುವುದರಿಂದ ಸಹಜವಾಗಿಯೇ ಅವರಲ್ಲಿ ಸಾಕಷ್ಟು ಮಾಹಿತಿ ಇರಬೇಕು ಎಂದು ತಿಳಿದುಕೊಳ್ಳಬಹುದು. ಆದರೆ ಶಿಂಧೆ ಅವರು ಯಾವುದೋ ಅಗೋಚರ ಕೋಮುವಾದಿ ಶಕ್ತಿಯ ಕಿತಾಪತಿಯ ವಿಚಾರದಲ್ಲಿ ಇಂತಹ ಗಂಭೀರವಾದ ಹೇಳಿಕೆಯನ್ನು ಕೊಟ್ಟು ಸುಮ್ಮನಾಗುವಂತಿಲ್ಲ. ಅವರಲ್ಲಿ ಲಭ್ಯವಿರುವ ಮಾಹಿತಿಯಲ್ಲಿ ಒಂದು ಭಾಗವನ್ನಾದರೂ ಜನರ ಜತೆ ಹಂಚಿಕೊಳ್ಳಬೇಕು.
ಅಸ್ಸಾಮ್ ರಾಜಕೀಯದಲ್ಲಿ ನೆರೆಯ ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತದೊಳಗೆ ನುಗ್ಗಿ ಬರುವ ಸಮೂಹಗಳನ್ನು ಕಾಂಗ್ರೆಸ್ ಲಾಗಾಯ್ತಿನಿಂದಲೂ ತನ್ನ ವೋಟು ಬ್ಯಾಂಕ್ ಎಂದೇ ಪರಿಗಣಿಸಿದೆ. ಅದನ್ನು ಕಾಂಗ್ರೆಸ್ ನಿರಾಕರಿಸಿದರೂ, ಇದುವರೆಗೂ ಅಸ್ಸಾಮ್‌ನ ಒಳಗೆ ಬಾಂಗ್ಲಾದೇಶದ ಜನ ನುಗ್ಗಿ ಬರುವುದನ್ನು ತಡೆಯುವುದರಲ್ಲಿ ಆಗಿರುವ ವೈಫಲ್ಯದ ಪ್ರಮಾಣವನ್ನು ಗಮನಿಸಿದರೆ, ಕಾಂಗ್ರೆಸ್ ನಂಬಿಕೊಂಡಿರುವ ವೋಟ್ ಬ್ಯಾಂಕ್‌ನ ಶಕ್ತಿಯ ನೆಲೆ ಯಾವುದು ಎನ್ನುವುದನ್ನು ಊಹಿಸುವುದು ಕಷ್ಟವಲ್ಲ.
ಆದರೆ ಒಂದು ವಾರದಲ್ಲಿ 32 ಮಂದಿ ಅಮಾಯಕರು (ಬಹುತೇಕವಾಗಿ ಮಹಿಳೆಯರು ಹಾಗೂ ಮಕ್ಕಳು) ಗೊಂದಲ-ಗಲಭೆಗಳಲ್ಲಿ ಸಿಕ್ಕಿ ಬಿದ್ದು ಪ್ರಾಣ ಕಳೆದುಕೊಂಡಿರುವುದಕ್ಕೆ ನಿಜವಾಗಲೂ ಯಾರು ಹೊಣೆ ಹೊರಬೇಕು?
ಅಸ್ಸಾಮ್ ಘಟನೆಗಳನ್ನು ನಾಗರಿಕ ಸಮಾಜದಲ್ಲಿ ಯಾರೂ ಸಹಿಸಬಾರದು. ಅಲ್ಲಿ ಪರಿಸ್ಥಿತಿಯನ್ನು ನಿಭಾಯಿಸುವ ಹೊಣೆ ಕೇಂದ್ರ ಸರ್ಕಾರದ್ದೇ. ಅನಧಿಕೃತ ವಲಸೆಗಾರರನ್ನು ತಡೆಗಟ್ಟುವುದು ಕೇಂದ್ರದ ಹೊಣೆ. ಆಂತರಿಕವಾಗಿ, ಕಾಯಿದೆ ಪಾಲನೆಯ ಹೊಣೆ ರಾಜ್ಯ ಸರ್ಕಾರದ್ದೇ. ದೀರ್ಘಕಾಲದಿಂದಲೂ ಆ ರಾಜ್ಯದಲ್ಲಿ ಕಾಂಗ್ರೆಸ್ಸೇ ಆಡಳಿತದಲ್ಲಿರುವುದು.
ಕೈಯಲ್ಲಿ ಅಧಿಕಾರದ ದಂಡವನ್ನು ಹಿಡಿದುಕೊಂಡೇ, ಬೋಡೋಲ್ಯಾಂಡ್ ಗಡಿ ಜಿಲ್ಲೆಗಳ ಮಾರಣ ಹೋಮವನ್ನು ಸಹಿಸುವುದಿಲ್ಲವೆಂದು ಸುಶೀಲ ಕುಮಾರ ಶಿಂಧೆ ಬಾಯಿ ಮಾತಿನಲ್ಲಿ ಹೇಳಿದರೆ, ಜನರಿಗೆ ಬರುವ ಭಾಗ್ಯವಾದರೂ ಏನು? ಅಸ್ಸಾಮ್‌ನಲ್ಲಿ ಶಾಂತಿ ಸ್ಥಾಪನೆ ಸರ್ಕಾರದ ಮೊದಲ ಕರ್ತವ್ಯವಾಗಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.