ವಾರಾಣಸಿ ರ್ಯಾಲಿ ಗೊಂದಲ
ಬಿಜೆಪಿಯ ಪ್ರಧಾನಿ ಪೀಠದ ಅಭ್ಯರ್ಥಿ ಹಾಗೂ ವಾರಾಣಸಿಯಲ್ಲೇ ಚುನಾವಣೆಯಲ್ಲಿ ಸ್ಪರ್ಧಿಸಿರುವ ನರೇಂದ್ರ ಮೋದಿ ಅವರಿಗೆ ಆ ನಗರದ ಅತಿ ಜನನಿಬಿಡ ಪ್ರದೇಶದಲ್ಲಿ "ರ್ಯಾಲಿಯನ್ನು" ನಡೆಸಲು ಅನುಮತಿ ನಿರಾಕರಿಸಿದ ಚುನಾವಣಾಧಿಕಾರಿ ಹಾಗೂ ಚುನಾವಣೆ ಆಯೋಗದ ವಿರುದ್ಧ ಮೋದಿ ಸಂಗಾತಿಗಳು ಒಂದು ರೀತಿಯಲ್ಲಿ ವಾಕ್ಸಮರವನ್ನೇ ಸಾರಿದ್ದಾರೆ.
ಈ "ಸಮರದ" ನಾಯಕತ್ವವನ್ನು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಅರುಣ ಜೈಟ್ಲಿ ಅವರೇ ವಹಿಸಿಕೊಂಡಿದ್ದು, ಅವರು ಬುಧವಾರ, ಒಂದೇ ದಿನ, ಚುನಾವಣೆ ಆಯೋಗಕ್ಕೆ ಮೂರು ಪತ್ರಗಳನ್ನು ರವಾನಿಸಿ, ಕ್ಷೇತ್ರದ ಚುನಾವಣಾಧಿಕಾರಿಯನ್ನು ಅಲ್ಲಿಂದ ತೆಗೆದು ಹಾಕಲು ಒತ್ತಾಯಪಡಿಸಿದರು.
ಲೋಕಸಭೆ ಚುನಾವಣೆಯ ಪ್ರಚಾರ ಸಮರದ ಕೊನೆಯ ದಿನಗಳಲ್ಲಿ ನಡೆದಿರುವ ಈ ಘಟನೆ ಬಿಜೆಪಿ - ಕಾಂಗ್ರೆಸ್ ಪಕ್ಷಗಳ ನಡುವಣ ಸ್ಪರ್ಧೆ ಅಥವಾ ದ್ವೇಷದ ತೀವ್ರತೆಗೆ ಒಂದು ಮಾನದಂಡದಂತಿದೆ. ಅರುಣ ಜೈಟ್ಲಿ ಅವರು ಚುನಾವಣೆ ಆಯೋಗದ ವಿರುದ್ಧ ಮಾತಿನ ಪ್ರಹಾರ ನಡೆಸಿದ್ದಕ್ಕೆ ಟಿ.ವಿ. ವಾಹಿನಿಗಳ ಬುಧವಾರದ ರಾತ್ರಿ ಪ್ರಸಾರದಲ್ಲಿ ಕಂಡುಬಂದಷ್ಟು ತೀವ್ರತೆ ಪತ್ರಿಕಾವಲಯದಲ್ಲಿ ಕಂಡುಬರದೇ ಹೋಗಿದ್ದು, ಒಂದು ವಿಶೇಷವೇ.
ಅರುಣ ಜೈಟ್ಲಿ ಚುನಾವಣೆ ಆಯೋಗದ ಸದಸ್ಯರನ್ನು "ದುರ್ಬಲರು" ಎಂದೂ ಪರೋಕ್ಷವಾಗಿ ಚಿತ್ರಿಸಿದರು. ವಾರಾಣಸಿ ಕ್ಷೇತ್ರದ ಚುನಾವಣೆ ಅಧಿಕಾರಿಯನ್ನು ಆ ಸ್ಥಾನದಿಂದ ತತ್ಕ್ಷಣದಿಂದಲೇ ತೆಗೆದು ಹಾಕಬೇಕು ಎಂದು ಒತ್ತಾಯಪಡಿಸಿದರು.
ಆದರೆ ಅವರ ಒತ್ತಾಯಕ್ಕೆ ಮಣಿಯುವ ಸ್ಥಿತಿಯಲ್ಲಿ ಆಯೋಗ ಇರಲಿಲ್ಲ. ಜನ ನಿಬಿಡ ಪ್ರದೇಶದಲ್ಲಿ ವಾರಾಣಸಿಯಲ್ಲಿ ರ್ಯಾಲಿಗೆ ಪರವಾನಗಿ ಕೊಡುವುದು ಸಾಧ್ಯವೇ ಇಲ್ಲ ಎನ್ನುವುದು ಚುನಾವಣೆ ಅಧಿಕಾರಿಯ ಮಾತು.
ಅವರು ಗುಜರಾತ್ ಮೂಲದ ಗುಪ್ತಚಾರ ದಳದ ಮೂಲಕ ಬಂದಿರುವ ಸಂದೇಶದ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿ ಮಾಡುವುದು ಅಗತ್ಯವಾಗಿತ್ತು ಎಂದಿದ್ದಾರೆ. ಉಳಿದ ನಾಲ್ಕು ಕಡೆ ಸಭೆಗಳನ್ನು ನಡೆಸಲು ಅನುಮತಿ ನೀಡಿದ್ದು ಸಂಜೆ ಕಳೆದ ನಂತರವೇ ಎಂದು ಆರೋಪಿಸಿದ ಅರುಣ ಜೈಟ್ಲಿ ಗುರುವಾರದ, ಮೋದಿಯವರ ಎಲ್ಲ ಕಾರ್ಯಕ್ರಮವನ್ನು ರದ್ದುಪಡಿಸಿರುವುದಾಗಿ ಪ್ರಕಟಿಸಿದರು.
ವಾರಾಣಸಿಯಲ್ಲಿ ರಾಹುಲ ಗಾಂಧಿ ಅವರ ಮೆರವಣಿಗೆ ಕಾರ್ಯಕ್ರಮಕ್ಕೂ ಅನುಮತಿ ನೀಡಲಾಗಿದೆ. ನರೇಂದ್ರ ಮೋದಿಗೆ, ಅವರು ಕೇಳಿದ ಸ್ಥಳದಲ್ಲಿ ರ್ಯಾಲಿ ನಡೆಸಲು ಅವರ ನಿರ್ವಾಚನ ಕ್ಷೇತ್ರದಲ್ಲೇ ಅವಕಾಶ ಸಿಗದೇ ಇರುವುದು ಬಿಜೆಪಿಯನ್ನು ಕೆರಳಿಸಿರುವುದು ಸಹಜ. ಆದರೆ ಕೊನೆಯ ನಿಮಿಷದಲ್ಲಿ ಚುನಾವಣೆ ಅಧಿಕಾರಿಯನ್ನು ತೆಗೆದು ಹಾಕಲು ಒತ್ತಾಯಪಡಿಸುವುದು, ಚುನಾವಣೆ ಆಯೋಗದ ಸದಸ್ಯರನ್ನೇ ದುರ್ಬಲರೆಂದು ಟೀಕಿಸುವುದು, ಪ್ರಚಾರ ಸಮರದ ಈಗಿನ ಸ್ಥಿತಿಯಲ್ಲಿ ಜನರಲ್ಲಿ ತಪ್ಪು ಭಾವನೆಗಳು ಮೂಡಲು ಅವಕಾಶವಾಗುತ್ತದೆ.
ಬಿಜೆಪಿ ನಾಯಕರಾದ ಅರುಣ ಜೈಟ್ಲಿ, ಅಮಿತ್ ಷಾ ಹಾಗೂ ಅನಂತಕುಮಾರ್ ದೆಹಲಿಯಲ್ಲಿ ಗುರುವಾರ ಸತ್ಯಾಗ್ರಹ ನಡೆಸುವ ಕಾರ್ಯಕ್ರಮದಿಂದ ಪರಿಸ್ಥಿತಿ ಬದಲಾಯಿಸುವುದಿಲ್ಲ. ಚುನಾವಣೆ ಆಯೋಗ ಈಗಾಗಲೇ ಅರುಣ ಜೈಟ್ಲಿ ಅವರ ಒತ್ತಾಯವನ್ನು ನಿರಾಕರಿಸಿದೆ. ಆದರೆ ಅದೇ ಸಮಯದಲ್ಲಿ ಚುನಾವಣೆ ಆಯೋಗದ ಪರವಾಗಿ ಒಂದು ವಿವರಣೆ ಪತ್ರವೂ ಪ್ರಕಟವಾಗಬೇಕಾಗಿತ್ತು. ನರೇಂದ್ರ ಮೋದಿ ಅವರ ಪ್ರಚಾರದ ಕಾರ್ಯಕ್ರಮಕ್ಕೆ ಚುನಾವಣೆ ಅಧಿಕಾರಿ ಉದ್ದೇಶಪೂರ್ವಕವಾಗಿ ಅಡ್ಡಿ ಮಾಡಿದ್ದರೆ ಅದು ಅಕ್ಷಮ್ಯ ಅಪರಾಧ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

