ಸಂಪಾದಕೀಯ

ಕ್ರಿಕೆಟ್‌ನ ವಾಣಿಜ್ಯೀಕರಣ ನಿಲ್ಲಲಿ

Published On :

ಕ್ರಿಕೆಟ್‌ನ ಐ.ಪಿ.ಎಲ್. ಪಂದ್ಯಾವಳಿಗಳು ಪ್ರಾರಂಭವಾದಾಗಿನಿಂದ ಕ್ರಿಕೆಟ್‌ನ ಬೆಟ್ಟಿಂಗ್ ದಂಧೆ ಜೋರಾಗಿ ನಡೆದಿದೆ. ಪರಿಣಾಮ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ಹಳ್ಳಿಯ ರೈತ ಕೂಡ ಇದರ ಸುಳಿಗೆ ಸಿಲುಕಿರುವುದು ದುರಂತ. ಏಕೆಂದರೆ ಈಗಾಗಲೇ, ಈ ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡು ಅನೇಕರು ಕೈ ಸುಟ್ಟುಕೊಂಡಿದ್ದಾರೆ, ಕೆಲವರು ಜೀವವನ್ನು ಕಳೆದುಕೊಂಡಿದ್ದಾರೆ. ಇದರ ಮುಂದುವರಿದ ಸರಣಿಯೇ, ಹುಬ್ಬಳ್ಳಿಯಲ್ಲಿ ಬೆಟ್ಟಿಂಗ್ ಭೂತಕ್ಕೆ ಇಬ್ಬರು ಅಮಾಯಕ ವಿದ್ಯಾರ್ಥಿಗಳು ಬಲಿಯಾಗಿದ್ದು.
ಇದಕ್ಕೆಲ್ಲಾ ಕಾರಣ ಕ್ರಿಕೆಟ್ಟನ್ನು ವಾಣಿಜ್ಯೀಕರಣಗೊಳಿಸಿರುವುದು. ಯಾವ ಕ್ರೀಡೆಗೆ ಕೊಡದ ಪ್ರಚಾರ ಕ್ರಿಕೆಟ್‌ಗೆ ಸಿಗುತ್ತಿದೆ. ಇಂದು ಎಲ್ಲಿ ನೋಡಿದರೂ ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಆಡುವ ಯುವಕರನ್ನು ನೋಡುತ್ತಿದ್ದೇವೆ. ಹಾಕಿ, ಫುಟ್ಬಾಲ್, ಟೆನ್ನಿಸ್, ಕಬಡ್ಡಿ ಅಲ್ಲದೇ ಅನೇಕ ದೇಸಿಯ ಆಟಗಳು ನಿರ್ಲಕ್ಷ್ಯಕ್ಕೊಳಗಾಗಿವೆ.
ಕ್ರಿಕೆಟ್ ಆಡುವ ಆಸಕ್ತಿಗಿಂತ, ಕ್ರಿಕೆಟ್ ಹುಚ್ಚು ಹೆಚ್ಚಾಗಲು ಕಾರಣ ಕ್ರಿಕೆಟ್‌ನ ಬಗ್ಗೆ ಮಾಧ್ಯಮಗಳು ಮಾಡುತ್ತಿರುವ ಅತಿ ರಂಜಿತ ವರದಿಗಳು. ಕ್ರಿಕೆಟ್ ಆಟಗಾರರಿಗೆ ದೊರೆಯುತ್ತಿರುವ ಪ್ರಚಾರಕ್ಕೆ ತುಂಬಾ ಹಣ, ಐಷಾರಾಮಿ ಜೀವನಶೈಲಿ, ಪ್ರೀತಿ, ಪ್ರೇಮಗಳ ಕಳ್ಳ ವ್ಯವಹಾರ, ಮೋಜು ಮಸ್ತಿಗಳ ಅಮಿಷದಿಂದ ಇಂದು ಪ್ರತಿಯೊಬ್ಬರೂ ಕ್ರಿಕೆಟ್‌ನ ತೆವಲು ಹಚ್ಚಿಕೊಂಡಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್‌ಗಳಿಂದ ಕ್ರಿಕೆಟ್ ಆಗ ಕ್ರೀಡೆಯಾಗಿ ಉಳಿದಿಲ್ಲ. ಅದು ಉದ್ಯಮವಾಗಿ ಬೆಳೆದಿದೆ. ಕ್ರೀಡೆಗಳು ಕ್ರೀಡೆಯಾಗಿರಬೇಕೇ ಹೊರತು ಈ ರೀತಿ ಹಣದ ವ್ಯವಹಾರವಾಗಬಾರದು.
-ಶ್ರವಣಕುಮಾರ್ ರಾಯ್ಕರ್, ಗಂಗಾವತಿ

ಬೆದರಿಕೆ ಕರೆ-ಖಂಡನೀಯ

ಹಿಂದೆ ಅನುಚಿತ ಹೇಳಿಕೆ ನೀಡಿ ಈಗ ತೀವ್ರ ವಿವಾದಕ್ಕೆ ಒಳಗಾಗಿರುವ ಡಾ. ಯು.ಆರ್. ಅನಂತಮೂರ್ತಿಯವರಿಗೆ ದೂರವಾಣಿ ಮೂಲಕ ಬೆದರಿಕೆ ಹಾಕುತ್ತಿರುವವರು ಯಾರೇ ಆಗಿರಲಿ ಅದು ಖಂಡನೀಯ. ಬೆದರಿಕೆ ಒಡ್ಡುತ್ತಿರುವವರು ಬಿ.ಜೆ.ಪಿ. ಪರವಾಗಿರುವವರು ಇರಬಹುದು- ಅಥವಾ ಬಿ.ಜೆ.ಪಿ.ಗೆ ಕೆಟ್ಟ ಹೆಸರು ತರುವ ಉದ್ದೇಶದ ಕಾಂಗ್ರೆಸ್ ಪರವಾಗಿರುವವರೂ ಇರಬಹುದು. ಯಾರೇ ಆಗಿರಲಿ, ಪೊಲೀಸರು ಅವರನ್ನು ಪತ್ತೆ ಹಚ್ಚಿ ಶಿಕ್ಷಿಸಲೇಬೇಕು.
ಡಾ. ಅನಂತಮೂರ್ತಿಯವರು ಮೋದಿಯವರು ಆಯ್ಕೆಯಾಗುವುದನ್ನು ವಿರೋಧಿಸಬಹುದಿತ್ತೇ ಹೊರತು ಅವರು ಪ್ರಧಾನಿಯಾದರೆ ಭಾರತವನ್ನು ಬಿಟ್ಟು ಹೊರಗೆ ಹೋಗುವುದಾಗಿ ಹೇಳಿಕೆ ನೀಡಿದ್ದು ತೀರ ಅನುಚಿತವಾದುದು. ಭಾರತೀಯರು ಅವರಂತಹ ಸಾಹಿತಿಗಳ ಮಾತನ್ನು ಲೆಕ್ಕಿಸದೆ ಬಹುಮತ ನೀಡಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಬಿಜೆಪಿ ಪರವಾಗಿರುವ ನಾನು ಒಂದು ವೇಳೆ ಕಾಂಗ್ರೆಸ್ ಗೆದ್ದು ರಾಹುಲ್ ಗಾಂಧಿಯವರು ಪ್ರಧಾನಿಯಾಗಿದ್ದರೆ ನನ್ನ ಹೆಮ್ಮೆಯ ಮಾತೃ ಭೂಮಿ ಭಾರತವನ್ನು ತ್ಯಜಿಸುತ್ತಿರಲಿಲ್ಲ. ಒಟ್ಟು ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡುವುದೇ ಪ್ರಜಾಪ್ರಭುತ್ವ. ಈ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶವಿದೆಯೇ ಹೊರತು ಅನುಚಿತ ಮಾತಿಗೆ ಅಲ್ಲ. ಭಾರತೀಯರೂ ಬಿಜೆಪಿಯನ್ನು ಅತ್ಯಂತ ಬಹುಮತದಿಂದ ಗೆಲ್ಲಿಸಿರುವುದಕ್ಕಾಗಿ ಅವರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ಆಯ್ಕೆಯೂ ಬಹು ಉಚಿತವಾದುದು.
-ಡಾ. ಎಂ. ಚಿದಾನಂದಮೂರ್ತಿ, ಬೆಂಗಳೂರು

ಮಧ್ಯಮ ವರ್ಗದ ತುಚ್ಛೀಕರಣ

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಹೀನಾಯ ಸೋಲಿಗೆ ಮಧ್ಯಮ ವರ್ಗದ ಮತದಾರರನ್ನು ತುಚ್ಛೀಕರಿಸಿದ್ದು ಮುಖ್ಯ ಕಾರಣಗಳಲ್ಲೊಂದು ಎಂದರೆ ಅತಿಶಯೋಕ್ತಿಯಾಗಲಾರದು. ಅದರಲ್ಲೂ ಕರ್ನಾಟಕದಲ್ಲಿ ಅತಿ ಹೆಚ್ಚು ಬಿಪಿಎಲ್ ಕಾರ್ಡುದಾರರಿಗೆ ಎಲ್ಲ ಸೌಲಭ್ಯಗಳನ್ನು ಅಂದರೆ 1 ರುಪಾಯಿ ಬೆಲೆಯಲ್ಲಿ ಅಕ್ಕಿಯ ವಿತರಣೆ, ಸಾಲಸೌಲಭ್ಯ, ಶಾಲಾ ವಿದ್ಯಾರ್ಥಿಗಳಲ್ಲಿಯೂ ಸಹ ಭೇದ-ಭಾವವನ್ನು ಉಂಟು ಮಾಡಿದ್ದು ಅಲ್ಲದೆ ಇನ್ನೂ ಅನೇಕ ತಾರತಮ್ಯ ಧೋರಣೆಯಿಂದ ಕಾಂಗ್ರೆಸ್ ತನ್ನ ಕಾಲ ಮೇಲೆ ಕಲ್ಲು ಹಾಕಿಕೊಂಡಿದೆ. ಮುಂದಿನ ದಿನಗಳಲ್ಲಿಯಾದರೂ ಮಧ್ಯಮ ವರ್ಗದವರನ್ನು ಸಮಾನ ದೃಷ್ಟಿಯಿಂದ ಕಾಣುವ ಮನೋಭಾವ ರಾಜ್ಯ ಸರ್ಕಾರಕ್ಕೆ ಬರಲೆಂಬುದು ಮಧ್ಯಮ ವರ್ಗದವರ ಆಶಯ.
-ಎಂ.ಪಿ. ಹರಗನಹಳ್ಳಿ, ಧಾರವಾಡ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.