ಫ್ಲಾಪ್‌ ಹೀರೊನ ಬೋಗಸ್‌ ಸಿನಿಮಾ: ನರೇಂದ್ರ ಮೋದಿ ಸಿನಿಮಾ ಕುರಿತು ಕಾಂಗ್ರೆಸ್‌ ವಾಗ್ದಾಳಿ

ನರೇಂದ್ರ ಮೋದಿ ಅವರ ಜೀವನಾಧಾರಿತ ಚಿತ್ರ 'ಪಿಎಂ ನರೇಂದ್ರ ಮೋದಿ' ಚಿತ್ರದ ಕುರಿತು ಕಿಡಿಕಾರಿರುವ ಕಾಂಗ್ರೆಸ್ ಪಕ್ಷ ಇದು ಫ್ಲಾಪ್ ಹೀರೋನ ಬೋಗಸ್ ಸಿನಿಮಾ ಎಂದು ಟೀಕಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ: ನರೇಂದ್ರ ಮೋದಿ ಅವರ ಜೀವನಾಧಾರಿತ ಚಿತ್ರ 'ಪಿಎಂ ನರೇಂದ್ರ ಮೋದಿ' ಚಿತ್ರದ ಕುರಿತು ಕಿಡಿಕಾರಿರುವ ಕಾಂಗ್ರೆಸ್ ಪಕ್ಷ ಇದು ಫ್ಲಾಪ್ ಹೀರೋನ ಬೋಗಸ್ ಸಿನಿಮಾ ಎಂದು ಟೀಕಿಸಿದೆ.
ಚಿತ್ರದ ಕುರಿತ ಕಾಂಗ್ರೆಸ್ ನಾಯಕರ ಟೀಕೆಗೆ ಈ ಹಿಂದೆ ತಿರುಗೇಟು ನೀಡಿದ್ದ ನಟ ವಿವೇಕ್ ಒಬೆರಾಯ್, 'ಚೌಕೀದಾರನ ದಂಡಕ್ಕೆ ಕಾಂಗ್ರೆಸ್‌ ನಾಯಕರು ಬೆದರಿದ್ದಾರೆ' ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ಇದೀಗ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ಇದೊಂದು ಫ್ಲಾಪ್ ಹೀರೋನ ಬೋಗಸ್‌ ಸಿನಿಮಾ ಎಂದಿದೆ. 
ಈ ಚಿತ್ರ ಹಾಗೂ ಪಾತ್ರಧಾರಿಯ ಬಗ್ಗೆ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೆವಾಲಾ, ಇದು ಫ್ಲಾಪ್‌ ಹೀರೊನ ಬೋಗಸ್‌ ಸಿನಿಮಾ ಎಂದು ಬುಧವಾರ ಪ್ರತಿಕ್ರಿಯಿಸಿದ್ದಾರೆ.  'ಇದು ಫ್ಲಾಪ್‌ ಹೀರೊನ ಬೋಗಸ್‌ ಸಿನಿಮಾ, ಜೀರೊ ಎಂದು ಸಾಬೀತು ಪಡಿಸಿರುವ ಫ್ಲಾಪ್‌ ವ್ಯಕ್ತಿಯ ಕುರಿತು ಮಾಡಿರುವ ಸಿನಿಮಾ ಹಾಗೂ ನಿರ್ಮಿಸಿರುವವರು ಫ್ಲಾಪ್‌ ನಿರ್ಮಾಪಕ' ಎಂದು ಸುರ್ಜೆವಾಲಾ ಟೀಕಿಸಿದ್ದಾರೆ.  
ಅಂತೆಯೇ ಚಿತ್ರ ತೆರೆಕಾಣುತ್ತಿರುವ ಸಮಯವನ್ನು ಪ್ರಶ್ನಿಸಿದ ಸುರ್ಜೆವಾಲಾ, ಚಿತ್ರ ನಿರ್ಮಾಣದಲ್ಲಿ ಕಪ್ಪು ಹಣ ಬಳಕೆಯಾಗಿರುವ ಕುರಿತು ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ. 
ಇದಕ್ಕೆ ಪ್ರತಿಕ್ರಿಯಿಸಿರುವ ವಿವೇಕ್‌ ಓಬೆರಾಯ್‌, ’ಏಕೆ ಕೆಲವು ಜನ ಈ ರೀತಿ ಅತಿಯಾಗಿ ವರ್ತಿಸುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ. ಅಭಿಷೇಕ್‌ ಸಿಂಘ್ವಿ ಹಾಗೂ ಕಪಿಲ್‌ ಸಿಬಲ್‌ ಅವರಂಥ ಹಿರಿಯ ಹಾಗೂ ಖ್ಯಾತ ವಕೀಲರು ಸಾಮಾನ್ಯ ಸಿನಿಮಾ ವಿರುದ್ಧ ಪಿಐಎಲ್‌ ದಾಖಲಿಸುವ ಮೂಲಕ ಯಾಕೆ ಕಾಲ ಹರಣ ಮಾಡುತ್ತಿದ್ದಾರೆ? ಏಕೆಂದು ತಿಳಿಯುತ್ತಿಲ್ಲ. ಅವರು ಸಿನಿಮಾದ ಬಗ್ಗೆ ಹೆದರಿದ್ದಾರೆಯೋ ಅಥವಾ ಚೌಕೀದಾರನ ದಂಡದ ಬಗ್ಗೆಯೋ..?’ ಎಂದಿದ್ದಾರೆ. 
ಲೋಕಸಭೆ ಸಮೀಪದಲ್ಲಿರುವಂತೆ ಮೋದಿ ಕುರಿತಾದ ಚಿತ್ರದ ಬಿಡುಗಡೆ ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್‌, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು. ಚುನಾವಣಾ ಮಾದರಿ ನೀತಿ ಸಂಹಿತಿಯ ಉಲ್ಲಂಘನೆ ಎಂದು ಆಕ್ಷೇಪಿಸಿತ್ತು. ಚುನಾವಣಾ ಆಯೋಗ ನೀಡಿದ ನೋಟಿಸ್‌ ಗೆ ಉತ್ತರಿಸಲು ವಿವೇಕ್‌ ಓಬೆರಾಯ್‌ ಕಳೆದ ವಾರ ಆಯೋಗದ ಮುಂದೆ ಹಾಜರಾಗಿದ್ದರು. ಈ ವೇಳೆ ಮಾತನಾಡಿದ್ದ ಅವರು, 'ಮೋದಿ ಅವರನ್ನು ನಾಯಕನಾಗಿ ಬಿಂಬಿಸುತ್ತಿಲ್ಲ, ಅವರು ಈಗಾಗಲೇ ಹೀರೊ... ನನಗೆ ಮಾತ್ರ ಅಲ್ಲ, ದೇಶದ ಹಾಗೂ ಹೊರದೇಶಗಳ ಕೋಟ್ಯಂತರ ಜನರಿಗೂ ನಾಯಕರಾಗಿದ್ದಾರೆ. ನಾವು ತೆರೆಯ ಮೇಲೆ ತರುತ್ತಿರುವುದು ಸ್ಫೂರ್ತಿದಾಯಕ ಕಥೆಯನ್ನು' ಎಂದು ವಿವೇಕ್‌ ಹೇಳಿದ್ದಾರೆ. 
‘ಸರಬ್‌ಜಿತ್‌’, ‘ಮೇರಿ ಕೋಮ್‌’ ಜೀವನಾಧಾರಿತ ಸಿನಿಮಾಗಳನ್ನು ನಿರ್ದೇಶಿಸಿರುವ ಒಮಂಗ್‌ ಕುಮಾರ್‌ ಈ ಚಿತ್ರದ ನಿರ್ದೇಶಕ. ಚುನಾವಣಾ ಆಯೋಗ ಚಿತ್ರದಿಂದ ನೀತಿ ಸಂಹಿತೆ ಉಲ್ಲಂಘನೆ ಇಲ್ಲ ಎಂದಿದ್ದರೂ, ನಿಗದಿಯಂತೆ ಏಪ್ರಿಲ್‌ 5ರಂದು ಚಿತ್ರ ಬಿಡುಗಡೆ ಅನುಮಾನ ಎನ್ನಲಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com