ನನಗೆ ಸಿಎಂ ಆಗುವ ಯೋಗ ಬಂದರೆ ಯಾರೂ ತಡೆಯಲು ಸಾಧ್ಯವಿಲ್ಲ: ಹೆಚ್.ಡಿ ರೇವಣ್ಣ

ನನಗೆ ಮುಖ್ಯಮಂತ್ರಿಯಾಗುವ ಯಾವ ಆಸೆಯೂ ಇಲ್ಲ. ಆದರೂ ಅಂತಹ ಯೋಗ ಬಂದರೆ ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಸೂಚ್ಯವಾಗಿ...
ಹೆಚ್ ಡಿ ರೇವಣ್ಣ
ಹೆಚ್ ಡಿ ರೇವಣ್ಣ
Updated on: 
ಬೆಂಗಳೂರು: ನನಗೆ ಮುಖ್ಯಮಂತ್ರಿಯಾಗುವ ಯಾವ ಆಸೆಯೂ ಇಲ್ಲ. ಆದರೂ ಅಂತಹ ಯೋಗ ಬಂದರೆ ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಸೂಚ್ಯವಾಗಿ ನುಡಿದಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವೀಗ ಮಂತ್ರಿ ಸ್ಥಾನದಲ್ಲಿದ್ದು, ಸದ್ಯಕ್ಕೆ  ಈ ಸ್ಥಾನವೇ ಸಾಕು. ಲೋಕೋಪಯೋಗಿ ಇಲಾಖೆಯಲ್ಲಿಯೇ ಉತ್ತಮ ಕೆಲಸಗಳನ್ನು ಮಾಡುತ್ತೇನೆ.  ನನ್ನದು ಸ್ವಾತಿ ನಕ್ಷತ್ರವಾಗಿರುವುದರಿಂದ ಮಾಟಮಂತ್ರ ಮಾಡಲು ಸಾಧ್ಯವಿಲ್ಲ. ನನ್ನ ಮೇಲೆ ಯಾರಾದರೂ ಮಾಟ ಮಂತ್ರ ಮಾಡಿದರೆ ಅದು ಅವರಿಗೆ ತಿರುಗುಬಾಣವಾಗುತ್ತದೆ. ಮುಖ್ಯಮಂತ್ರಿ ಸ್ಥಾನದ ಬಗ್ಗೆ ಯಾವುದೇ ಶಾಸ್ತ್ರಪಾಸ್ತ್ರ ಕೇಳುವುದಿಲ್ಲ ಎಂದರು.
ಸಚಿವ ರೇವಣ್ಣ ಹಾಗೂ ಹಾಸನ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ನಡುವಿನ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಜಿಲ್ಲಾಧಿಕಾರಿ ವಿರುದ್ಧ ರೇವಣ್ಣ ಸೇಡಿನ ರಾಜಕೀಯ ಮಾಡುತ್ತಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಜಿಲ್ಲಾಧಿಕಾರಿ ಹಾಗೂ ತಮ್ಮ ಮಧ್ಯೆ ಯಾವುದೇ ಗುದ್ದಾಟ ಇಲ್ಲ. ಯಾರ ಜೊತೆಯಲ್ಲಿಯೂ ಜಗಳ ಮಾಡಬೇಕಾದ ಅಗತ್ಯವೂ ಇಲ್ಲ. ಬರನಿರ್ವಹಣೆ ಮಾಡಲು ಜಿಲ್ಲಾಡಳಿತ ಬಳಿ 10 ಕೋಟಿ ರೂ.ಗಿಂತಲೂ ಹೆಚ್ಚಿನ ಹಣವಿದೆ. ಅದನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿರಲಿಲ್ಲ. ಜಿಲ್ಲಾಡಳಿತದಲ್ಲಿ ನಾನು ತಲೆ ಹಾಕಿಲ್ಲ. ಮಾಧ್ಯಮಗಳ ಮುಂದೆಯೇ ಬರ ಪರಿಹಾರ ಬಿಡುಗಡೆ ಮಾಡಲು ಹೇಳಿದ್ದೆ.  ಆಲೂಗಡ್ಡೆ ಬಿತ್ತನೆ ಬೀಜ ವಿತರಣೆಯಲ್ಲಿ ರೈತರಿಗೆ ಸಮಸ್ಯೆಯಾಗಬಾರದು. ಹಿಂದೆ ಇದೇ ಕಾರಣಕ್ಕಾಗಿ ಗೋಲಿಬಾರ್ ನಡೆದಿತ್ತು. ರೈತರಿಗೆ ತೊಂದರೆಯಾಗದಂತೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಹೇಳಿದ್ದೇನೆಯೇ ಹೊರತು ಯಾವುದೇ ವೈಯಕ್ತಿಕ ಕಾರಣಗಳಿಂದ ಅವರ ಜೊತೆ ಹೊಡೆದಾಟ ಮಾಡಿಲ್ಲ. ಜನರ ಸಮಸ್ಯೆಗಳ ಬಗ್ಗೆ ಮಾತ್ರ ಅವರೊಂದಿಗೆ ಮಾತನಾಡಿದ್ದೇನೆ ಎಂದರು.
ಹಾಸನಕ್ಕೆ ಹೊಸ ಜಿಲ್ಲಾಧಿಕಾರಿಗಳನ್ನು ಚುನಾವಣಾ ಆಯೋಗದವರು ನೇಮಿಸಿದ್ದಾರೆ. ಚುನಾವಣೆಯಲ್ಲಿ ದೇವೇಗೌಡರು ಹಾಗೂ ಅವರ ಮಕ್ಕಳು ಹಣ ಹಂಚುತ್ತಾರೆ ಎಂದು ಜಿಲ್ಲಾಧಿಕಾರಿಗಳನ್ನು ನೇಮಿಸಲಾಯಿತು. ತರಕಾರಿ ಮಾರುವವರು, ದೇವಸ್ಥಾನದ ಪೂಜಾರಿಗಳ ಮೇಲೂ ಐಟಿ ದಾಳಿ ನಡೆಸಲಾಯಿತಾದರೂ ದಾಳಿಯಲ್ಲಿ ಅವರಿಗೇನೂ ಸಿಗಲಿಲ್ಲ ಎಂದರು.
ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಚುನಾವಣಾ ಆಯೋಗದ ನಿರ್ದೇಶನಾನುಸಾರ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಅವರನ್ನು ಹಾಸನಕ್ಕೆ ಜಿಲ್ಲಾಧಿಕಾರಿಯಾಗಿ ವರ್ಗಾಯಿಸಲಾಗಿತ್ತು.
ಬುಧವಾರ ಹಾಸನದಲ್ಲಿ ಸಭೆ ನಡೆಸಿದ್ದ ಹೆಚ್.ಡಿ.ರೇವಣ್ಣ, ಆಲೂಗಡ್ಡೆ ಬಿತ್ತನೆ ಬೀಜಗಳನ್ನು ಸಮರ್ಪಕವಾಗಿ ವಿತರಿಸುವುದು ಜಿಲ್ಲಾಡಳಿತದ ಕರ್ತವ್ಯ. ಜಿಲ್ಲೆಯಲ್ಲಿ ಒಂದು ವೇಳೆ ಕಾನೂನು ಸುವ್ಯವಸ್ಥೆ ಹದಗೆಟ್ಟು ಗೋಲಿಬಾರ್ ನಡೆದರೆ ಅದಕ್ಕೆಲ್ಲ ಜಿಲ್ಲಾಧಿಕಾರಿಗಳೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದ್ದರು. ರೇವಣ್ಣ ಅವರ ಈ ಹೇಳಿಕೆ ಸಾಕಷ್ಟು ಟೀಕೆಗೆ ಗುರಿಯಾಗಿತ್ತು.
ಮಾಜಿ ಸಚಿವ ಚೆಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ರೇವಣ್ಣ, ಚೆಲುವರಾಯಸ್ವಾಮಿ ಹೇಳಿಕೆಗೆಲ್ಲಾ ಪ್ರತಿಕ್ರಿಯೆ ಕೊಟ್ಟರೆ ಪೊಳ್ಳೆದ್ದು ಹೋಗುತ್ತೇನೆ. ಅವರ ಬಗ್ಗೆ ಮಾತನಾಡುವುದು ಎಂದರೆ ಸ್ವಗೌರವ ಹಾಳು ಮಾಡಿಕೊಂಡಂತೆ. ಹೀಗಾಗಿ ಚೆಲುವರಾಯಸ್ವಾಮಿ ಬಗ್ಗೆ ಏನನ್ನು ಮಾತನಾಡದೇ ಇರುವುದು ಒಳ್ಳೆಯದು ಎಂದರು.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನಡವಳಿಕೆಯ ಮೇಲೆ ಮೈತ್ರಿ ಸರ್ಕಾರ ನಿಂತಿದೆ ಎಂದು ಚೆಲುವರಾಯಸ್ವಾಮಿ ಮಂಡ್ಯದಲ್ಲಿ ಹೇಳಿಕೆ ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com