ಫಿಫಾ ವಿಶ್ವಕಪ್ 2014

ವಾರೆಲಾ; ಪೋರ್ಚುಗಲ್‌ಗೆ ಮರುಜೀವ

ವಾರೆಲಾ; ಪೋರ್ಚುಗಲ್‌ಗೆ ಮರುಜೀವ
Published On :

ಮಾನೌಸ್: ಇನ್ನೇನು ಪೋರ್ಚುಗಲ್ ತಂಡ ಸಹ ಗುಂಪು ಸೆಣಸಿನಿಂದಲೇ ಗಂಟುಮೂಟೆ ಕಟ್ಟಿಕೊಂಡು ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗೆ ಗುಡ್‌ಬೈ ಹೇಳುತ್ತದೆ ಅಂದುಕೊಳ್ಳುತ್ತಿರುವಾಗಲೇ ಮಿಂಚಿನಂತೆ ಎರಗಿಬಂದ ಸಿಲ್ವೆಸ್ಟರ್ ವಾರೆಲಾ ಆಕರ್ಷಕವಾಗಿ ಹೆಡ್ ಮಾಡುವ ಮೂಲಕ ಚೆಂಡನ್ನು ಅಮೆರಿಕದ ಬಲೆಯೊಳಕ್ಕೆ ಸೇರಿಸಿ ಗೋಲು ಸಂಪಾದಿಸುವ ಮೂಲಕ ಕ್ರಿಸ್ಟಿಯಾನೊ ರೊನಾಲ್ಡೊ ಪಡೆಗೆ ಪುನರ್ಜನ್ಮ ತಂದುಕೊಟ್ಟಿದ್ದಾರೆ.
ಎರೆನಾ ಅಮಾಜೋನಿಯಾ ಕ್ರೀಡಾಂಗಣದಲ್ಲಿ ಸೋಮವಾರ ಬೆಳಗ್ಗೆ ಜರುಗಿದ “f’ ಗುಂಪಿನ ಪಂದ್ಯದಲ್ಲಿ ಪೋರ್ಚುಗಲ್ ಮತ್ತು ಅಮೆರಿಕ ತಂಡಗಳು 2-2 ಗೋಲುಗಳಿಂದ ಡ್ರಾ ಫಲಿತಾಂಶ ಪಡೆದು ತಲಾ ಒಂದೊಂದು ಅಂಕ ಹಂಚಿಕೊಂಡಿವೆ.
ಮೊದಲ ಅವಧಿಯ ಆಟದಲ್ಲಿ 0-1 ಗೋಲಿನಿಂದ ಹಿನ್ನಡೆ ಅನುಭವಿಸಿದ್ದ ಅಮೆರಿಕನ್ನರು ಉತ್ತರಾರ್ಧದ ಆಟದಲ್ಲಿ ಕೇವಲ 17 ನಿಮಿಷಗಳ ಅಂತರದಲ್ಲಿ ಎರಡು ಗೋಲು ಬಾರಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಪ್ರಮುಖ ಆಟಗಾರ ಕ್ಲೈಂಟ್ ಡಿಂಪ್ಸೆ ಮೊದಲಿಗೆ ಖಾತೆ ತೆರೆದರೆ, ಜರ್ಮೈನ್ ಜೋನ್ಸ್ ಮತ್ತೊಂದು ಗೋಲು ಬಾರಿಸಿ ಅಮೆರಿಕ ತಂಡಕ್ಕೆ 2-1 ಗೋಲುಗಳ ಮಹತ್ವದ ಮುನ್ನಡೆ ತಂದುಕೊಟ್ಟರು.
ಅಂತಿಮ ಕ್ಷಣದ ಒಂದು ಹಂತದಲ್ಲಿ ಅಮೆರಿಕ ತಂಡ ಅಂತಿಮ ಹದಿನಾರರಘಟ್ಟ ಪ್ರವೇಶಿಸುವುದು ಬಹುತೇಕ ಖಚಿತ ಎಂದೇ ಲೆಕ್ಕ ಹಾಕಲಾಗುತ್ತಿತ್ತು. ಆದರೆ, ಕೆಲವೇ ಸೆಕೆಂಡುಗಳ ಆಟ ಉಳಿದಿರುವಾಗ ಪಂದ್ಯದ ಕೊನೆಯ ಘಟ್ಟ ಗಾಯದ ಹೆಚ್ಚುವರಿ ಸಮಯದ ಆಟದಲ್ಲಿ ಸಿಲ್ವೆಸ್ಟರ್ ವಾರೆಲಾ ಅವರು ಪೋರ್ಚುಗಲ್ ಪರ ಗೋಲು ಗಳಿಸುವ ಮೂಲಕ ಅಮೆರಿಕದ ಆಸೆ ಈಡೇರಿಕೆಯನ್ನು ತಡೆದರು.
ಫೀಫಾ ವರ್ಷದ ಆಟಗಾರ ಗೌರವ ಪುರಸ್ಕೃತ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮತ್ತ ಬಾರಿಸಿದ ಚೆಂಡನ್ನು ಸಿಲ್ವೆಸ್ಟರ್ ಅವರು ಹೆಡ್ ಮಾಡುವ ಮೂಲಕ ಅಮೆರಿಕದ ಗೋಲ್‌ಕೀಪರ್ ಟಿಮ್ ಹೊವಾರ್ಡ್‌ರ ಕಣ್ತಪ್ಪಿಸಿ ಗುರಿ ಸೇರಿಸುವ ಮೂಲಕ ಪಂದ್ಯ ಸಮಸ್ಥಿತಿಗೆ ಮರಳುವಂತೆ ಮಾಡಿದರು.
ಗುಂಪಿನ ತಮ್ಮ ಮೊದಲ ಪಂದ್ಯದಲ್ಲಿ ಜರ್ಮನಿ ವಿರುದ್ಧ 0-4 ಗೋಲುಗಳ ಭಾರಿ ಅಂತರದಲ್ಲಿ ಆಘಾತಕಾರಿ ಸೋಲು ಕಂಡಿದ್ದ ಪೋರ್ಚುಗಲ್ ಆಟಗಾರರಿಗೆ ಈ ಪಂದ್ಯ ಅಳಿವು-ಉಳಿವಿನ ಪ್ರಶ್ನೆಯಾಗಿತ್ತು. ಒಂದು ವೇಳೆ ಸೋಲನುಭವಿಸಿದ್ದರೆ, ಪಂದ್ಯಾವಳಿಯಿಂದಲೇ ಹೊರನಡೆಯಬೇಕಾಗುತ್ತಿತ್ತು. ಆದರೆ, ಡ್ರಾ ಸಾಧಿಸುವ ಮೂಲಕ ತನ್ನ ಆಸೆಯನ್ನು ಸ್ವಲ್ಪ ಮಟ್ಟಿಗೆ ಹಿಡಿದಿಟ್ಟುಕೊಂಡಿತು.
ಸದ್ಯ ತಮ್ಮ ಗುಂಪಿನ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಪೋರ್ಚುಗಲ್ ಆಟಗಾರರು, ಅಂತಿಮ ಲೀಗ್‌ನಲ್ಲಿ ಘಾನಾ ವಿರುದ್ಧ ಸೆಣಸಲಿದ್ದು, ಭಾರಿ ಅಂತರದ ಗೆಲವು ದಾಖಲಿಸಬೇಕಾಗಿದೆ. ಅಲ್ಲದೆ, ಜರ್ಮನಿ ಮತ್ತು ಅಮೆರಿಕ ನಡುವಿನ ಕೊನೆಯ ಲೀಗ್ ಪಂದ್ಯ ಡ್ರಾಗೊಳ್ಳದೇ ಯಾರಾದರೊಬ್ಬರೂ ಗೆಲ್ಲಬೇಕೆಂದು ಪೋರ್ಚುಗಲ್ ಪ್ರಾರ್ಥನೆ ಮಾಡಬೇಕಾಗಿದೆ.
ಏಕೆಂದರೆ, ಸದ್ಯ ತಲಾ 4 ಅಂಕಗಳೊಂದಿಗೆ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿರುವ ಜರ್ಮನಿ ಮತ್ತು ಅಮೆರಿಕ ಅಂತಿಮ ಪಂದ್ಯದಲ್ಲಿ ಪರಸ್ಪರ ಡ್ರಾ ಸಾಧಿಸಿದರೆ, ಅಂಕಗಳಿಕೆಯನ್ನು ತಲಾ 5ಕ್ಕೆ ಹೆಚ್ಚಿಸಿಕೊಳ್ಳಲಿವೆ. ಆಗ, ಪೋರ್ಚುಗಲ್ ತಂಡ ಘಾನಾ ವಿರುದ್ಧ ಎಷ್ಟೇ ಅಂತರದಿಂದ ಗೆದ್ದರೂ ಸಹ ಅಂಕಗಳಿಕೆ 4ಕ್ಕೆ ವಿಸ್ತರಿಸಿಕೊಳ್ಳಲಿದೆ. ಆಗ ಮೂರನೇ ಸ್ಥಾನಕ್ಕೆ ತೃಪ್ತಿ ಹೊಂದುವ ಮೂಲಕ ಸ್ಪರ್ಧೆಯಿಂದ ಹೊರನಡೆಯಬೇಕಾಗುತ್ತದೆ. ಹಾಗಾಗಿ, ಪೋರ್ಚುಗಲ್‌ನ ಮುಂದಿನ ಹಾದಿ ಬಹಳ ದುರ್ಗಮವಾಗಿ ಎಂದೇ ಹೇಳಬಹುದು.
ಅಮೆರಿಕ ಮತ್ತು ಪೋರ್ಚುಗಲ್ ನಡುವಿನ ಹೋರಾಟ ಉತ್ತಮ ಪೈಪೋಟಿಯಿಂದ ಕೂಡಿತ್ತು. ಎರಡೂ ತಂಡಗಳಿಗೆ ಗೆಲ್ಲುವ ಉತ್ತಮ ಅವಕಾಶಗಳಿದ್ದವು. ಆದರೆ, ಪರಸ್ಪರ ರಕ್ಷಣಾ ಗೋಡೆಯನ್ನು ಹೆಚ್ಚಿ ಬಲಪಡಿಸಿಕೊಂಡಿದ್ದರಿಂದ ಗುರಿ ಸೇರುವುದು ಕಷ್ಟವಾಗಿತ್ತು.
ಈ ಪಂದ್ಯದಲ್ಲಿ ಪೋರ್ಚುಗಲ್ ಆಟಗಾರರು ಪ್ರತಿಶತ 52ರಷ್ಟು ಚೆಂಡಿನ ಮೇಲೆ ಹಿಡಿತ ಸಾಧಿಸಿದ್ದರು. ಅಲ್ಲದೆ, 20 ಬಾರಿ ಗುರಿಯೆಡೆಗೆ ಚಂಡು ಬಾರಿಸಿದರೆ, ಅಮೆರಿಕನ್ನರು 48ರಷ್ಟು ಹಿಡಿತ ಸಾಧಿಸಿ 15 ಬಾರಿ ಗುರಿಯತ್ತ ತಮ್ಮ ಸಾಹಸ ಪ್ರದರ್ಶಿಸಿದ್ದರು. ಆದರೆ, ಇಬ್ಬರಿಗೂ ಅವಕಾಶಗಳು ಕೈಜಾರಿ ಹೋದವು.

ಗೋಲು ವಿವರ
ಪೋರ್ಚುಗಲ್ 2
ನ್ಯಾನಿ5ನೇ ನಿಮಿಷ
ಸಿಲ್ವೆಸ್ಟರ್ ವಾರೆಲಾ 90.5ನೇ ನಿಮಿಷ

ಅಮೆರಿಕ 2
ಕ್ಲೈಂಟ್ ಡಿಂಪ್ಸೆ 81ನೇ ನಿಮಿಷ
ಜರ್ಮೈನ್ ಜೋನ್ಸ್64ನೇ ನಿಮಿಷ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.