ದಂತಕಥೆ

ದಂತಕಥೆ
Updated on: 

ಫ್ಲಾಸಿಂಗ್ ಅಂದ್ರೇನು?

ಬಹಳಷ್ಟು ಸಲ ಮೆಡಿಕಲ್ ಸ್ಟೋರ್ಸ್‌ನಲ್ಲಿ ಫ್ಲಾಸ್ ಖರೀದಿಸುವವರನ್ನು ನೀವು ನೋಡಿರಬಹುದು. ಆದರೆ ಏನಿದು ಎಂಬ ಕುತೂಹಲವಿದ್ದರೂ ತಿಳಿದುಕೊಂಡಿರುವುದಿಲ್ಲ. ಫ್ಲಾಸ್ ಎಂದರೆ ದಂತದಾರ. ಇದನ್ನು ಮುಖ್ಯವಾಗಿ ಹಲ್ಲುಗಳ ಸಂದಿಗಳನ್ನು ಸ್ವಚ್ಛಗೊಳಿಸಲು ಬಳಸಲಾಗುತ್ತದೆ.
ಇತ್ತೀಚೆಗೆ ವ್ಯಾಪಕವಾಗಿ ಬಳಕೆಯಾಗುವ ಸಂಸ್ಕರಿತ ಆಹಾರ ಮತ್ತು ಹಲ್ಲಿನ ಮೇಲೆ ಬಲವಾಗಿ ಕೂರುವ ಆಹಾರ ಕಣಗಳ ಉಳಿಕೆ ಅಂಶಗಳಿಂದ ಹಲ್ಲನ್ನು ಸ್ವಚ್ಛಗೊಳಿಸಲು ಬ್ರಶ್‌ನಿಂದ ಅಸಾಧ್ಯ. ಜತೆಗೆ ಹಲ್ಲಿನ ನಡುವಿನ ಸಂದಿಗಳಿಗೂ ಬ್ರಶ್ ತಲುಪುವುದಿಲ್ಲ. ಅಂಥ ಜಾಗಗಳಲ್ಲಿ ತೂರಿ ಸ್ವಚ್ಛಗೊಳಿಸುವುದೇ 'ಫ್ಲಾಸ್‌' ಎಂಬ ದಂತದಾರ.

ಸತ್ಯಕ್ಕೆ ದೂರ
ನಿತ್ಯ ಎರಡು ಬಾರಿ ತಪ್ಪದೇ ಬ್ರಶ್ ಮಾಡಿದರೂ ದಂತಕುಳಿ, ದುರ್ವಾಸನೆ, ವಸಡಿನ ರಕ್ತಸ್ರಾವ... ಹೀಗೆ ಹತ್ತಾರು ಸಮಸ್ಯೆಗಳನ್ನು ದೂರಮಾಡಲು ಸಾಧ್ಯವಾಗದು. ನಿಜ ಸಂಗತಿ ಎಂದರೆ ಬ್ರಶ್ ಮಾಡುವುದರಿಂದ ಶೇ.100 ಸಂಪೂರ್ಣ ಸ್ವಚ್ಛತೆ ಸಾಧ್ಯವಿಲ್ಲ. 'ಹಲ್ಲುಗಳ ನಡುವೆ ತಲುಪುವ ಬ್ರಶ್‌' ಎಂಬ ಜಾಹೀರಾತುಗಳೂ ಸತ್ಯಕ್ಕೆ ದೂರವಾದವು. ಇದಕ್ಕೆ ಉಪಾಯವೆಂದರೆ ದಂತದಾರ ಅಥವಾ ಡೆಂಟಲ್ ಫ್ಲಾಸ್.

ಹೇಗಿರುತ್ತದೆ?
ಇದು ನೈಲಾನ್ ಅಥವಾ ಮೇಣಲೇಪಿತ ಪ್ಲಾಸ್ಟಿಕ್ ದಾರ. ಇಲ್ಲವೇ ಸಾಧಾರಣ ಬಣ್ಣ ಹೊಲೆಯುವ ಪಾಲಿಸ್ಟರ್ ದಾರ. ಇದನ್ನು ಫ್ಲಾಸ್ ರೀತಿ ಬಳಸಬಹುದು. ಇದು ಹತ್ತಾರು ವಿಧಗಳಲ್ಲಿ, ಮಾದರಿಗಳಲ್ಲಿ ದೊರಕುತ್ತದೆ. ಇದನ್ನು ವೈದ್ಯರ ಸಲಹೆ ಮೇರೆಗೆ ಔಷಧಿ ಅಂಗಡಿಗಳಲ್ಲಿ ಪಡೆಯಬಹುದು.

ಬಳಸುವ ಬಗೆ

  • ಬ್ರಶ್ ಮಾಡಿದ ನಂತರ, ಫ್ಲಾಸಿಂಗ್ ಮಾಡಬಹುದು. ಹಲ್ಲುಗಳನ್ನು ಸ್ವಚ್ಛಗೊಳಿಸಲು ಸಿಗುವ ದಾರವನ್ನು ಬೆರಳುಗಳ ಮಧ್ಯ ಸುತ್ತಿ ಅಥವಾ ಅದಕ್ಕೆಂದೇ ರೂಪಿತವಾಗಿರುವ ಕ್ಲಿಪ್‌ನಿಂದ ಹಲ್ಲುಗಳ ನಡುವಿನ ಜಾಗದಲ್ಲಿ ಅಥವಾ ಮೇಲ್ಭಾಗದಿಂದ ಹಾಕಿ ದಂತ ಕೊಳೆ (ಪ್ಲ್ಯಾಕ್) ತೆಗೆಯಬೇಕು.
  •  ಸುಮಾರು 18- 24 ಇಂಚು ದಾರವನ್ನು ಎರಡೂ ಕೈಗಳ ಮಧ್ಯದ ಬೆರಳಿಗೆ ಸುತ್ತಿಕೊಳ್ಳಬೇಕು. ಇದನ್ನು ಕನ್ನಡಿ ಮುಂದೆ ನಿಂತುಕೊಂಡೇ ಮಾಡಬೇಕು.
  •  ಮೊದಲಿಗೆ ಮೇಲುದವಡೆ ಅಥವಾ ಬಾಚಿ ಹಲ್ಲುಗಳ ನಡುವಿನ ಜಾಗದಲ್ಲಿ ನಿಧಾನವಾಗಿ ಹಾಕಿ.
  •     ಕೈಗಳ ನಡುವಿನ ಜಾಗ 8-10 ಇಂಚು ಖಾಲಿ ದಾರ ಬಿಡಿ. ಈ ಬಿಟ್ಟ ದಾರದ ಜಾಗವನ್ನು ಹಲ್ಲಿನ ನಡುವೆ ಹಾಕಿರಿ.
  •     ಹಲ್ಲಿನ ನಡುವಿನ ಜಾಗದಲ್ಲಿ ದಂತದಾರವನ್ನು ನಿಧಾನವಾಗಿ ತೂರಿಸಿ. ಬಲವಾಗಿ ಹಾಕಿ ವಸಡನ್ನು ಘಾಸಿ ಮಾಡಬಾರದು. ಅತ್ಯಂತ ಬಿಗಿಯಾಗಿ ಕೂತಿರುವ ಹಲ್ಲುಗಳ ನಡುವೆ ಈ ಫ್ಲಾಸ್ ಹೋಗುವುದು ಕಷ್ಟವಾಗುವುದರಿಂದ ನಿಧಾನವಾಗಿ ದಾರವನ್ನು ತೂರಿಸಿ. ರೂಢಿಯ ನಂತರ ಸರಿಯಾಗುತ್ತದೆ.
  •     ಎಲ್ಲ ಹಲ್ಲುಗಳನ್ನು ಸ್ವಚ್ಛಗೊಳಿಸಿದ ಮೇಲೆ ಬಾಯನ್ನು ನೀರಿನಿಂದ ಚೆನ್ನಾಗಿ ಮುಕ್ಕಳಿಸಬೇಕು.
ವೈದ್ಯರ ಸಲಹೆ ಅಗತ್ಯ
  •     ಫ್ಲಾಸ್ ಬಳಕೆಗೆ ದಂತವೈದ್ಯರ ಮಾರ್ಗದರ್ಶನ ಅಗತ್ಯ. ಸರಿಯಾಗಿ ಬಳಸದ ಫ್ಲಾಸ್‌ನಿಂದ ವಸಡಿಗೆ ಗಾಯವಾಗಬಹುದು.
  •     ನಿತ್ಯವೂ ಸಾಧ್ಯವಾದಷ್ಟು ಹೀಗೆ ಸ್ವಚ್ಛಮಾಡಬೇಕು. ಆಗದಿದ್ದಲ್ಲಿ ವಾರದಲ್ಲಿ 2-3 ಬಾರಿಯಾದರೂ ಮಾಡಿದರೆ ಕೊಳೆಯ ಜಮಾವಣೆ ತಪ್ಪಿಸಬಹುದು.
  •     ಫ್ಲಾಸ್ ದಾರವನ್ನು ಮೌತ್‌ವಾಷ್‌ಗಳಲ್ಲಿ ಅದ್ದಿ, ನೆನೆಸಿ ಬಳಸಿದರೆ ಹೆಚ್ಚು ಉಪಯೋಗಕಾರಿ.
  •     ಹಲ್ಲುಗಳ ನಡುವೆ ದಾರ ಕಟ್ ಆಗಿ ಉಳಿಯದಂತೆ ಎಚ್ಚರ ವಹಿಸಿ.
  •     ದಾರವನ್ನು ಬೆರಳಲ್ಲಿ ಸರಿಯಾಗಿ ಹಿಡಿದುಕೊಂಡಿರಬೇಕು.
ಬಾಯಿಯ ಸ್ವಚ್ಛತೆಗೆ ಸಹಕಾರಿ
  •     ಸ್ವಚ್ಛ, ಸ್ವಸ್ಥ ಬಾಯಿ- ಹಲ್ಲು ನಿಮ್ಮದಾಗುತ್ತದೆ.
  •     ಎಷ್ಟೇ ಸ್ವಚ್ಛಗೊಳಿಸಿದರೂ ಹೋಗದ ಕೊಳೆ ಫ್ಲಾಸಿಂಗ್‌ನಿಂದ ತೊಲಗುತ್ತದೆ.
  •     ಬ್ರಶ್ ತಲುಪದ ಜಾಗದಲ್ಲೂ ಸ್ವಚ್ಛತೆ ಮಾಡಬಹುದು.
  •     ಬಾಯಿಯ ದುರ್ವಾಸನೆ ತಡೆಗಟ್ಟುತ್ತದೆ.
  •     ಹಲ್ಲಿನ ಸಂಪೂರ್ಣ ಆರೋಗ್ಯ ಕಾಪಾಡಬಹುದು.
  •     ಅತ್ಯಂತ ಸುರಕ್ಷಿತ, ವೈಜ್ಞಾನಿಕ ವಿಧಾನದ ಸ್ವಚ್ಛತಾಮಾರ್ಗ.
  •     ಸ್ವಚ್ಛತೆಗಾಗಿ ಬ್ರಶ್‌ನೊಂದಿಗೆ ಬಳಸಬಹುದು. ಆದರೆ ಬ್ರಶ್‌ಗೆ ಪರ್ಯಾಯವಲ್ಲ.
-ಡಾ. ಕೆ.ವಿ. ಸಂತೋಷ್‌ಕುಮಾರ್ ಹೊಳಲ್ಕೆರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com