

ಕಣ್ಣಿನಲ್ಲಿ ಒತ್ತಡ ಹೆಚ್ಚಾದರೆ ಮುಖ್ಯ ನರವಾಹಿನಿಯಾದ ಆಪ್ಟಿಕ್‌ನರ್ವ್‌ಗೆ ಧಕ್ಕೆ ಉಂಟಾಗುತ್ತದೆ. ಈ ಹಾನಿಗೊಳಗಾಗುವ ಸ್ಥಿತಿಯೇ 'ಗ್ಲಾಕೋಮಾ'. ಒಂದರ್ಥದಲ್ಲಿ ಕಣ್ಣಿನ ನರಗಳ ದುಃಸ್ಥಿತಿ ಎನ್ನಬಹುದು. ಆಗದೃಷ್ಟಿ ದೋಷ ಕಟ್ಟಿಟ್ಟಬುತ್ತಿ. ಭಾರತದಲ್ಲಿ ಸುಮಾರು 11.2 ಮಿಲಿಯನ್ ಮಂದಿ ಈ ರೀತಿಯ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಯಾವುದೇ ಲಕ್ಷಣಗಳನ್ನು ವ್ಯಕ್ತಪಡಿಸದೇ ನಿಧಾನವಾಗಿ ನಮ್ಮ ದೃಷ್ಟಿಯನ್ನು ಕಸಿದುಕೊಳ್ಳುವ ರೋಗವಿದು. ವಾಸ್ತವದಲ್ಲಿ ಗ್ಲಾಕೋಮಾದಿಂದ ನರಳುತ್ತಿರುವ ರೋಗಿಗಳಿಗೆ ಅಂಧತ್ವ ಆವರಿಸುತ್ತಿದೆ ಎಂಬ ವಿಷಯವೇ ಗೊತ್ತಿರಲ್ಲ. ಹಾಗಾಗಿಯೇ ಗ್ಲಾಕೋಮಾವನ್ನು 'ದೃಷ್ಟಿಯ ಠಕ್ಕ' (Silent Thief of Vision) ಎಂದೂ ಕರೆಯುತ್ತಾರೆ.
ದ್ರೋಹವೆಸಗುವ ದ್ರವ
ಆರೋಗ್ಯಕರವಾದ ಕಣ್ಣು ಏಕ್ವಿಯಿಸ್ ಹ್ಯೂಮರ್ (Aqueous Humor) ಎಂಬ ದ್ರವವೊಂದನ್ನು ಉತ್ಪಾದಿಸುತ್ತದೆ. ಅದೇ ಪ್ರಮಾಣದಲ್ಲಿ ಅದು ಹೊರ ಹರಿಯುತ್ತದೆ. ಉತ್ಪತ್ತಿ ಮತ್ತು ಹೊರಸೋರುವಿಕೆಯಲ್ಲಿ ಸಮತೋಲನ ಇರಬೇಕು. ಹೀಗಾದಲ್ಲಿ ಕಣ್ಣಿನ ಒಳ ಒತ್ತಡ ಸರಿಯಿರುತ್ತದೆ (Normal IOP - 10 mmHg - 12mmHg). ಕಾರಣಾಂತರದಿಂದ ಹೊರಸೋರುವಿಕೆ ಕಟ್ಟಿಕೊಂಡಾಗ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಈ ಹೆಚ್ಚಾದ ಕಣ್ಣಿನ ಒತ್ತಡ, ದೃಷ್ಟಿಯ ನರಕ್ಕೆ ಹಾನಿಯುಂಟುಮಾಡುತ್ತದೆ. ಸಾಮಾನ್ಯವಾಗಿ ಫೆರಿಫರಲ್ ಅಥವಾ ಸುತ್ತಲೂ ದೃಷ್ಟಿ ಹಾನಿಯಾಗುವ ಮೂಲಕ ಆರಂಭವಾಗಿ ನಂತರ ಸಂಪೂರ್ಣ ದೃಷ್ಟಿ ನಾಶಕ್ಕೆ ಕಾರಣವಾಗಬಹುದು.
ತೆರೆದ ಕೋನದ ಗ್ಲಾಕೋಮಾ, ಜನನಾಗತ ಗ್ಲಾಕೋಮಾ, ಸೆಕೆಂಡರಿ ಗ್ಲಾಕೋಮಾ, ಪಿಗ್ಮೆಂಟರಿ ಗ್ಲಾಕೋಮಾ, ಸಂಕುಚಿತ ಕೋನದ ಗ್ಲಾಕೋಮಾ ಎಂಬ ವಿವಿಧ ಬಗೆಯ ಗ್ಲಾಕೋಮಾಗಳಿವೆ.
ಒತ್ತಡ ಯಾರ್ ಯಾರಿಗೆ?