ಕತ್ತು ಕುತ್ತು

ನೀವು ಎಂದಾದರೂ ನಿಮ್ಮ ವಾರ್ಡ್‌ರೋಬ್‌ನ ಎತ್ತರದ ಶೆಲ್ಫ್‌ನಲ್ಲಿರುವ ವಸ್ತುವನ್ನು ತೆಗೆದುಕೊಳ್ಳಲು ಪ್ರಯಾಸ ಪಟ್ಟಿದ್ದೀರಾ? ಆಗ ಕತ್ತಿನ ಭಾಗ...
ಕತ್ತು ಕುತ್ತು
Updated on: 

ನೀವು ಎಂದಾದರೂ ನಿಮ್ಮ ವಾರ್ಡ್‌ರೋಬ್‌ನ ಎತ್ತರದ ಶೆಲ್ಫ್‌ನಲ್ಲಿರುವ ವಸ್ತುವನ್ನು ತೆಗೆದುಕೊಳ್ಳಲು ಪ್ರಯಾಸ ಪಟ್ಟಿದ್ದೀರಾ? ಆಗ ಕತ್ತಿನ ಭಾಗ ಹಿಡಿದುಕೊಂಡ ಅನುಭವವಾಗಿದೆಯೇ? ಅಥವಾ ಮುಂಜಾನೆ ಎದ್ದಾಗ ಕತ್ತಿನ ಭಾಗದಲ್ಲಿ ಅಸಹನೀಯ ನೋವು ಕಾಣಿಸಿಕೊಂಡು ಇಡೀ ದಿನ ಕತ್ತು ತಿರುಗಿಸಲಾಗದಷ್ಟು ತೊಂದರೆ ಅನುಭವಿಸಿದ್ದೀರಾ?
ಒಂದು ಕ್ಷಣ ನಿಲ್ಲಿ. ಇತ್ತೀಚೆಗೆ ಕುತ್ತಿಗೆ ನೋವಿನ ಸಮಸ್ಯೆ ಹಿಡಿದುಕೊಂಡು ಕ್ಲಿನಿಕ್‌ಗಳಿಗೆ ಬರುವುದು ಸಾಮಾನ್ಯವಾಗಿದೆ. ಬಹುತೇಕ ಕುತ್ತಿಗೆ ನೋವು ಸ್ನಾಯುವಿನ ಆಯಾಸ ಅಥವಾ ಉಳುಕುವಿಕೆಯಿಂದ ಸಂಭವಿಸುತ್ತದೆ. ಇದು ಕಾಮನ್ ಪ್ಲಾಬ್ಲಂ.
ಯಾತನಾಮಯ ಕತ್ತು ನೋವಿಗೆ ಹಲವು ಕಾರಣಗಳಿರಬಹುದು. ಯಾಂತ್ರಿಕ ಒತ್ತಡಗಳಿಂದ ತಲೆ ಹಾಗೂ ಕುತ್ತಿಗೆಯ ಭಾಗ ದುರ್ಬಲವಾಗಬಹುದು. ಕುತ್ತಿಗೆ, ತಲೆ ಹಾಗೂ ಬೆನ್ನಿನ ಭಾಗದಲ್ಲಿ ಕಾಣಿಸಿಕೊಳ್ಳುವ ನೋವು ಅಥವಾ ಕಿರಿಕಿರಿಗೆ ನಾವು ಕೂರುವ, ಮಲಗುವ ಅಸಮರ್ಪಕ ಭಂಗಿಯೂ ಪ್ರಮುಖ ಕಾರಣವಾಗುತ್ತದೆ. ಒಂದು ಸಣ್ಣ ಅವಘಡ, ವಯಸ್ಸಿಗೆ ಸಂಬಂಧಿಸಿದ ಕಡಿತ ಮತ್ತು ಸವೆತದಿಂದಲೂ ಬೆನ್ನು ಮೂಳೆಯ ನೋವು ಕಾಣಿಸಿಕೊಳ್ಳುತ್ತದೆ. ಗಮ್ ಅಗಿಯುವುದು ಮತ್ತು ಹೇಗಾಯಿತೋ ಹಾಗೆ ಮಲಗುವುದರಿಂದಲೂ ಈ ನೋವು ಕಾಣಿಸಿಕೊಳ್ಳುತ್ತದೆ.

ದೇಹ, ತಲೆಗೆ ಸೇತು ಕತ್ತು

ಬೆನ್ನು ಮೂಳೆಯಲ್ಲಿ ಸುಲಭವಾಗಿ ಬಾಗುವ ಭಾಗವೆಂದರೆ ಕತ್ತು. ಇದು ಏಳು ಬೆನ್ನೆಲುಬು, ಆಘಾತವನ್ನು ಗುರುತಿಸುವ ಡಿಸ್ಕ್‌ಗಳು, ಸ್ನಾಯುಗಳು ಮತ್ತು ಬೆನ್ನೆಲುಬಿನ ಅಸ್ಥಿಬಂಧನಿಯನ್ನು ಹೊಂದಿಕೊಂಡಿದೆ. ಮೇಲ್ಪಂಕ್ತಿಯಲ್ಲಿನ ಸೆರ್ವಿಕಲ್ ಡಿಸ್ಕ್, ಬೆನ್ನು ಮೂಳೆಯ ಮೇಲ್ತುದಿಯನ್ನು ಅಸ್ಥಿಪಂಜರಕ್ಕೆ ಸಂಪರ್ಕಿಸುತ್ತದೆ. ಬೆನ್ನು ಮೂಳೆಯು ಕತ್ತಿನ ಭಾಗದಲ್ಲಿನ ಕಶೇರು ಹಾಗೂ ಬೆನ್ನೆಲುಬಿನ ತುದಿವರೆಗಿನ ಅಂಶಗಳ ಮೂಲಕ ಚಾಲಕ ಶಕ್ತಿಯನ್ನು ದೇಹದ ಪ್ರತಿ ಭಾಗಕ್ಕೆ ಕತ್ತಿನ ಮೂಲಕ ರವಾನಿಸುತ್ತದೆ. ಸೆರ್ವಿಕಲ್ ನರ್ವ್‌ಗಳು ನಮ್ಮ ತೋಳಿನ ಮೂಲಕ ಕೆಳಗೆ ಹೋಗಿರುತ್ತವೆ. ಈ ಕಾರಣದಿಂದ ಕೆಲವೊಮ್ಮೆ ತೋಳಿನ ನೋವು ಕತ್ತಿನ ನೋವಾಗಿಯೂ ಪರಿವರ್ತನೆಗೊಳ್ಳುತ್ತದೆ.
ಬೆನ್ನು ಮೂಳೆಯ ನಾಲೆ ಸಂಕುಚಿತಗೊಂಡಾಗ ಮತ್ತು ಬೆನ್ನುಹುರಿ ಮುದುಡಿ ಕೊಂಡಾಗ ಸೆರ್ವಿಕಲ್ ಕ್ಯಾನಲ್ ಸ್ಟೆನೋಸಿಸ್ ಸಂಭವಿಸುತ್ತದೆ. ಇದು ಆಗಾಗ್ಗೆ ಸಂಭವಿಸುವ ನರ ಮಾರ್ಗಗಳ ಸಂಕುಚಿತಗೊಳ್ಳುವಿಕೆಯಿಂದ ಕಾಣಿಸಿಕೊಳ್ಳುತ್ತದೆ. ಇದು ಕುತ್ತಿಗೆ ನೋವು, ಎರಡೂ ಕೈಗಳಲ್ಲಿ ಜೋಮು ಹಿಡಿಯುವುದು ಮತ್ತು ನಿಶ್ಶಕ್ತಿ, ನಡೆಯುವಾಗ ಅಸ್ಥಿರತೆ ಮತ್ತು ಕಾಲುಗಳಲ್ಲಿನ ಸ್ನಾಯು ಸೆಳೆತಕ್ಕೆ ಕಾರಣವಾಗುತ್ತದೆ. ಸಮಸ್ಯೆಯ ಲಕ್ಷಣಗಳು ಕತ್ತು ನೋವಿಗೇ ಸೀಮಿತವಾಗಿದ್ದರೆ ಕೆಲವೊಮ್ಮೆ ಮಿಡ್ ಸ್ಟೆನೋಸಿಸ್‌ಗೆ ಸಮರ್ಪಕವಾಗಿ ಚಿಕಿತ್ಸೆ ನೀಡಬಹುದು. ಇನ್ನು ಕೆಲವೊಮ್ಮೆ ತಜ್ಞರನ್ನು ಸಂಪರ್ಕಿಸುವುದು ಒಳಿತು.

ಕತ್ತು ನೋವಿಗೆ ಪರೀಕ್ಷೆ

ಎಕ್ಸ್ ರೇ, ಸಿಎಟಿ ಸ್ಕ್ಯಾನ್‌ಗಳು, ಎಂಆರ್‌ಐ, ಎಲೆಕ್ಟ್ರೋಮ್ಯಾಮೋಗ್ರಾಮ್ ಮತ್ತು ನರ್ವ್ ಕಂಡೀಷನ್ ಸ್ಟಡೀಸ್ (ಇಎಂಜಿ/ಎನ್‌ಸಿಎಸ್) ಕತ್ತು ನೋವಿಗೆ ಕಾರಣಗಳನ್ನು ಕಂಡುಹಿಡಿಯಬಲ್ಲದು. ಒಂದು ವೇಳೆ ಮೆದುಳಿನ ಭಾಗಕ್ಕೆ ಹಾನಿಯಾಗಿದೆ ಎಂಬ ಅನುಮಾನ ಬಂದಲ್ಲಿ ಸೆರೆಬ್ರೊಸ್ಪೈನಲ್ ಅನಾಲಿಸಿಸ್ ಮಾಡಿಸಬೇಕಾಗುತ್ತದೆ.

ವೈದ್ಯರನ್ನು ಯಾವಾಗ ಕಾಣಬೇಕು?

-    ಕತ್ತು ಅಥವಾ ತಲೆ ಭಾಗದಲ್ಲಿ ನೋವು ತೀವ್ರಗೊಂಡಾಗ.
-    ಕತ್ತು ನೋವಿನೊಂದಿಗೆ ಜ್ವರ ಅಥವಾ ತಲೆ ನೋವು ಇದ್ದರೆ.
-    ನಿಮ್ಮ ಗದ್ದವನ್ನು ಎದೆ ಭಾಗಕ್ಕೆ ಮುಟ್ಟಿಸಲಾಗದಷ್ಟು ಕತ್ತು ಹಿಡಿದುಕೊಂಡಾಗ.
-    ನೋವು ನಿಮ್ಮ ಒಂದು ತೋಳನ್ನು ನಿಷ್ಕ್ರಿಯಗೊಳಿಸಿದರೆ.
-    ನಿಮ್ಮ ತೋಳು ಅಥವಾ ಕೈಗಳಲ್ಲಿ ಕೆರೆತ, ಜೋಮು ಅಥವಾ ನಿಶ್ಶಕ್ತಿ ಕಂಡುಬಂದರೆ.
-    ನಡೆಯಲು ಕಷ್ಟವೆನಿಸಿದಲ್ಲಿ.
-    ನೋವು ನಿವಾರಣೆ ಕ್ರಮಗಳಿಗೆ ನಿಮ್ಮ ನೋವು ಕೆಲವು ದಿನಗಳವರೆಗೆ ಸ್ಪಂದಿಸದಿದ್ದರೆ.
-    ಒಂದು ವಾರ ಅಥವಾ ಹತ್ತು ದಿನಗಳವರೆಗೂ ನೋವಿದ್ದರೆ.

- ಡಾ. ಅರುಣ್ ಎಲ್.ನಾಯಕ್
 (ಮೊ. 9538512121)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com