ಬೆನ್‌ ಬಿಡದ ಭೂತ!

ಬೆನ್‌ ಬಿಡದ ಭೂತ!
Updated on: 

ಬೆನ್ನಿನ ಕೆಳಭಾಗದಲ್ಲಿ ಐವರಲ್ಲಿ ನಾಲ್ಕು ಮಂದಿಗೆ ನೋವು ಕಂಡುಬರುವುದು ಸಹಜ. ನೋವು ಪರಿಹರಿಸುವಲ್ಲಿ ಸೂಕ್ಷ್ಮವಾಗಿ ನಿಗಾ ವಹಿಸುವುದೊಳಿತು. ನಿರಂತರವಾಗಿ ಕಾಡುವ ಕೆಳಭಾಗದ ಬೆನ್ನು ನೋವು ದೇಹವನ್ನು ದುರ್ಬಲಗೊಳಿಸುವಷ್ಟು ಪ್ರಭಾವಶಾಲಿ.
ಸಂಶೋಧನೆಗಳ ಪ್ರಕಾರ, ಕೆಳ ಭಾಗದ ಬೆನ್ನುನೋವು ತಲೆನೋವಿನಂತೆ ಸಾಮಾನ್ಯವಾಗಿಯೂ ಬರುತ್ತದಂತೆ. ಇಂದು ಬಹುತೇಕರು ಹೆಚ್ಚು ರಜೆ ತೆಗೆದುಕೊಳ್ಳುವುದು ತಲೆನೋವು ಹಾಗೂ ಜ್ವರ ಎಂಬ ಕಾರಣಕ್ಕೆ. ನಂತರದ ಸ್ಥಾನ ಸಿಗುವುದು ಕೆಳ ಬೆನ್ನು ನೋವಿಗೇ. ಇದು ಕಠಿಣ ಕೆಲಸಗಳಿಗೆ, ವ್ಯಾಯಾಮ ಮಾಡಲು, ಪ್ರಯಾಣಿಸಲು ತೊಂದರೆಯನ್ನೊಡ್ಡುತ್ತಿದೆ.
ದೀರ್ಘಕಾಲದ ಕೆಳ ಬೆನ್ನು ನೋವಿನಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಬೆನ್ನಿನಲ್ಲಿ ಮೂಳೆಗಳು, ಸಂಧಿಗಳು, ನರಗಳು, ಸ್ನಾಯುಗಳು ಮತ್ತು ಅಸ್ಥಿಮಜ್ಜೆಗಳು ಹೆಸರಿಸಲ್ಪಟ್ಟಿವೆಯಾದರೂ ಮತ್ತೆ ಕೆಲವು ಭಾಗಗಳು ರಹಸ್ಯವಾಗಿಯೇ ಉಳಿದುಕೊಂಡಿರುವುದರಿಂದ ಬೆನ್ನಿನ ರಚನೆಯನ್ನು ತಿಳಿಯುವುದು ಕಷ್ಟ.

ವೈದ್ಯರನ್ನು ಯಾವಾಗ ಕಾಣಬೇಕು?
-    ಮರಗಟ್ಟುವಿಕೆ ಸಂಭವಿಸಿದಲ್ಲಿ.
-    ಜುಂ ಎನ್ನುವ ಅನುಭವವಾಗುತ್ತಿದ್ದಲ್ಲಿ.
-    ಬೆನ್ನಿನ ಕೆಳಭಾಗದ ದುರ್ಬಲತೆ ಅತಿರೇಕಕ್ಕೆ ಹೋದಲ್ಲಿ.
-    ಕರುಳು, ಮೂತ್ರಕೋಶಗಳಲ್ಲಿ ಏರುಪೇರಾದಲ್ಲಿ.
-    ಜ್ವರವಿದ್ದಲ್ಲಿ.
-    ನಿಲ್ಲಲ್ಲು ಅಸಾಧ್ಯವೆನಿಸಿದಲ್ಲಿ.

ಸಾಮಾನ್ಯವಾಗಿ ಕಾಡುವ ಬೆನ್ನು ನೋವಿಗೆ ಇಂಥದ್ದೇ ಕಾರಣಗಳಿರುವುದಿಲ್ಲ. ಬೆನ್ನಿನ ಕೆಳಭಾಗದಿಂದ ಪೃಷ್ಠ ಭಾಗದವರೆಗೂ ವಿಸ್ತರಿಸುವ ನೋವು ಬಹುಬೇಗನೆ ಮಾಯವಾಗುತ್ತದೆ.
ನಿರಂತರವಾಗಿ ನೋವು ಕಾಡುತ್ತಿದ್ದಲ್ಲಿ, ಯಾವಾಗಿನಿಂದ ಶುರುವಾಯಿತು ಎಂಬ ಅರಿವು ಇಲ್ಲದ್ದಿದ್ದಲ್ಲಿ, ಯಾಕಾಗಿ ಸಂಭವಿಸಿದೆ ಎಂಬ ಕಾರಣ ತಿಳಿಯದಿದ್ದಲ್ಲಿ, ತುಸು ಎಚ್ಚರವಾಗಿರೋದು ಒಳಿತು.

ಮನಸ್ಸಿಗೂ ತಗಲುತ್ತೆ ರೋಗ!
ಕೆಳ ಬೆನ್ನು ನೋವು ಬರಲು ಇಂಥದ್ದೇ ಕಾರಣಗಳಿವೆ ಎನ್ನಬಹುದಾದರೂ ಬೇಜಾರು ಎಂದೆನಿಸುವ ಜೀವನ ಶೈಲಿ, ಚಿತ್ತ ಮತ್ತು ಆರೋಗ್ಯ ಸಮಸ್ಯೆಗಳಿಂದಲೂ ಇಂಥ ನೋವು ಬರಬಹುದು. ನೋವು ತುಂಬಾ ಕಿರಿಕಿರಿ ಉಂಟುಮಾಡುತ್ತಿದ್ದಲ್ಲಿ ಮನೋರೋಗಕ್ಕೆಡೆ ಮಾಡಬಲ್ಲದು. ಮಾನಸಿಕ ಕೊರಗು ದೈಹಿಕ ನೋವಿಗೆ ಪುಷ್ಟಿ ನೀಡುತ್ತದೆ. ಹೀಗಾಗಿ ಮಾನಸಿಕ ಮತ್ತು ದೈಹಿಕ ನೋವುಗಳು ಒಂದಕ್ಕೊಂದು ಪೂರಕವಾಗಿದ್ದು ಮನುಷ್ಯನನ್ನು ದುರ್ಬಲಗೊಳಿಸುತ್ತವೆ. ಇವೆರಡನ್ನು ಪರಿಗಣಿಸಿ ಚಿಕಿತ್ಸೆ ಪಡೆಯುವುದೊಳಿತು.
ನೋವಿನ ಬಗ್ಗೆ ಚಿಂತೆ ನಿಲ್ಲಿಸಿ ನಿಮ್ಮ ಚಿತ್ತವನ್ನು ಬೇರೆಡೆ ಹರಿಸಿ. ಸೃಜನಾತ್ಮಕ ಚಿಂತನೆ, ಫನ್, ಉತ್ತಮವಾದ ಅಂಶಗಳನ್ನೇ ಜೀವನದಲ್ಲಿ ಅಳವಡಿಸಲು ಯತ್ನಿಸಿ. ಗೆಳೆಯರೊಂದಿಗೆ ಹರಟಿ. ಆ್ಯಕ್ಟಿವ್ ಆಗಿರಿ. ನಿಮಗೆ ಖುಷಿ ನೀಡುವ ಕಾರ್ಯಗಳಲ್ಲಿ ತೊಡಗಿಕೊಳ್ಳಿ. ಸದಾ ಪಾಸಿಟಿವ್ ಆಗಿರೋದನ್ನು ರೂಢಿಸಿಕೊಂಡರೂ ಈ ರೋಗ ಬಹುತೇಕ ಶಮನವಾಗಬಲ್ಲದು.
ಸಹಜವಾಗಿ ಕಾಣಿಸಿಕೊಂಡ ಕೆಳಭಾಗದ ಬೆನ್ನು ನೋವು ಕಡಿಮೆಯಾಗದೆ ತೀವ್ರವಾಗಿ ಸಹಿಸಲಸಾಧ್ಯ ಎಂದೆನಿಸುತ್ತಿದ್ದರೆ ಸರ್ಜರಿ ಬಗ್ಗೆ ಯೋಚಿಸಿ.

ಯೋಗ ಮಾರ್ಗ

ನಿತ್ಯ ವ್ಯಾಯಾಮ, ದೈಹಿಕ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ತೀವ್ರ ಬೆನ್ನು ನೋವು ಕಾಡುವುದೇ ಇಲ್ಲ. ಬೆನ್ನು ನೋವಿನಿಂದ ಬಳಲುತ್ತಿರುವ ರೋಗಿಗಳಿಗೆ ಕಠಿಣ ಚಟುವಟಿಕೆಗಳಲ್ಲಿ ಭಾಗವಹಿಸದಿರುವಂತೆ ವೈದ್ಯರು ಸಲಹೆ ನೀಡುತ್ತಾರೆ. ವ್ಯಾಯಾಮ ಮಾಡುವುದರಿಂದ ನೋವು ಜಾಸ್ತಿಯಾದರೆ ನಿಲ್ಲಿಸುವುದೇ ಒಳಿತು.  ಅಪಘಾತ, ಆಕಸ್ಮಿಕ ಎಡವುವಿಕೆಯಿಂದ ಅಥವಾ ಒಟ್ಟಾರೆ ನೋವು ಬಂದರೆ ಐಸಿಂಗ್ ಉತ್ತಮ. ನೋವು ತೀವ್ರವಾಗಿದ್ದರೆ, ಬಿಸಿ ಮುಟ್ಟಿಸಿದರೆ ಪರಿಣಾಮಕಾರಿ. ಕೆಲವರಿಗೆ ಐಸಿಂಗ್ ಮಾಡುವುದರಿಂದ, ಮತ್ತೆ ಕೆಲವರಿಗೆ ಮಸಾಜ್ ಮಾಡುವುದರಿಂದಲೂ ನೋವು ಹತೋಟಿಗೆ ಬರುತ್ತದೆ. ಈ ನೋವಿಗೆ ಫಿಸಿಯೋಥೆರಪಿಸ್ಟ್ ಸಲಹೆಯೊಂದಿಗೆ ಸೂಕ್ತ ವ್ಯಾಯಾಮ ಹಾಗೂ ಇತರೆ ಚಿಕಿತ್ಸೆಗಳನ್ನು ತೆಗೆದುಕೊಂಡರೆ ಒಳಿತು.

- ಮಂಜುನಾಥ್ ಎಲ್.ಕೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com