

ಆರೋಗ್ಯಕ್ಕೆ ತರಕಾರಿ ಒಳ್ಳೆಯದು. ಆದರೆ, ತರಕಾರಿ ತಿನ್ನುವುದಕ್ಕಿಂತ ಮುಂಚೆ ಅದು ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಗಮನಿಸಿ. ನೈಸರ್ಗಿಕವಾದ ಆಹಾರ ಎಂದು ಹಾಗೇ ತಿನ್ನಲು ಹೋಗಬೇಡಿ. ಯಾಕೆಂದರೆ, ಹಸಿರು ಕ್ರಾಂತಿಯ ನೆಪದಲ್ಲಿ ಸೊಪ್ಪು ಪಲ್ಲೆ, ತರಕಾರಿ, ಹಣ್ಣು ಹಂಪಲು ಬೆಳೆಯುವ ಪರಿಯೂ ಬದಲಾಗಿದೆ.
ಹಸಿರು ಸೊಪ್ಪು ಪಲ್ಲೆ, ಹಣ್ಣು ಹಂಪಲು ಇಂದು ಕೀಟನಾಶಕಗಳ ಶವರ್‌ಬಾತ್ ಮಾಡಿಯೇ ಬಂದಿರುತ್ತವೆ! ಹೀಗಾಗಿ ಅವುಗಳ ಮೈಮೇಲೆ ವಿಷ ವಸ್ತುವಿನ ಒಂದು ಲೇಪನ ಇರುತ್ತದೆ. ಇಂಥ ಪದಾರ್ಥಗಳನ್ನು ನೇರವಾಗಿ ಸೇವಿಸುವವರು ಕೀಟನಾಶಕಗಳನ್ನು ನುಂಗಿದಂತೆಯೇ.
ಅಧ್ಯಯನ ಕೈಗೊಂಡರು
ಇದರ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚಲು ಇಂಗ್ಲೆಂಡಿನಲ್ಲಿ ಒಂದು ಅಧ್ಯಯನ ನಡೆಸಿದರು. ಅಧ್ಯಯನ ತಂಡದವರು ಪೇಟೆಗೆ ಬಂದ ಎಲ್ಲ ಥರದ ತರಕಾರಿ, ಸೊಪ್ಪು, ಹಣ್ಣು ಹಂಪಲುಗಳನ್ನು ಸಂಗ್ರಹಿಸಿದರು. ವಿಷಕಾರಿಯಾಗಿವೆಯೇ ಎಂದು ಪರಿಶೀಲಿಸಿದರು. ಪ್ರಯೋಗಾಲಯದ ಫಲಿತಾಂಶಗಳು ಮಹತ್ವದ ಸಂಗತಿಗಳನ್ನು ಹೊರಹಾಕಿದವು. ಸಂಗ್ರಹಿಸಿದ ಎಲ್ಲ ಪದಾರ್ಥಗಳಲ್ಲೂ ವಿಷ ವಸ್ತುಗಳಿದ್ದವು. ಈ ಅಧ್ಯಯನದ ಸುದ್ದಿ ಬಿತ್ತರಗೊಂಡಾಗ ಬ್ರಿಟಿಷರೆಲ್ಲ ಬೆಕ್ಕಸ ಬೆರಗಾದರು. ಶಿಸ್ತಿನ ಸಿಪಾಯಿಗಳಂತೆ ಎಲ್ಲ ರಂಗದಲ್ಲೂ ಕೆಲಸ ಮಾಡುವ ಆಂಗ್ಲರ ಪಾಡೇ ಹೀಗಿದ್ದರೆ, ಉಳಿದವರ ಪಾಡು ಹೇಗಿದ್ದೀತು? ಈ ಅಧ್ಯಯನಕ್ಕೆ ಆರಿಸಿಕೊಂಡ ತರಕಾರಿ, ಹಣ್ಣು ಹಂಪಲುಗಳಲ್ಲಿ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಬೆಳೆದವಿದ್ದವು.
ನಮ್ಮ ದೇಶದ ಸ್ಥಿತಿ ಇನ್ನೂ ಭಯಂಕರವಾಗಿದೆ. ಊರಾಚೆ ಹರಿದು ಬರುವ ಕೊಳಚೆ ನೀರನ್ನೇ ಬಳಸಿ ತರಕಾರಿಗಳನ್ನು ಬೆಳೆಯುತ್ತಾರೆ. ತರಾತುರಿಯಲ್ಲಿ ತೊಳೆದು ಮಾರುಕಟ್ಟೆಗೆ ತರುತ್ತಾರೆ. ಕಲುಷಿತ ನೀರಿನ ಬಳಕೆಯಿಂದ ಜಂತಿನ ತತ್ತಿಗಳು, ಆಮಶಂಕೆ, ರಕ್ತಬೇಧಿ, ಟೈಫಾಯ್ಡ್, ಪ್ಯಾರಾ ಟೈಫಾಯ್ಡ್, ಕಾಮಾಲೆ ಕಾಣಿಕೆ ನೀಡುವ ರೋಗಾಣುಗಳು ತರಕಾರಿಗೆ ಮೆತ್ತಿಕೊಂಡಿರುತ್ತವೆ.
ಅಂಥ ಪದಾರ್ಥಗಳ ಸೇವನೆಯಿಂದ ಅಂಬೆಗಾಲು ಇಕ್ಕುವ, ಆಗ ತಾನೆ ನಡೆಯಲು ಕಲಿತ ಮಕ್ಕಳಲ್ಲಿ ವಿಪರೀತ ಉದರಶೂಲೆ ಕಾಣಿಸಿಕೊಳ್ಳುತ್ತದೆ. ಗರ್ಭಿಣಿಯ ಭ್ರೂಣಕ್ಕೆ ಅಂಗವೈಕಲ್ಯ, ವಿಚಿತ್ರ ವಿಕಾರತೆಗಳು ಗೋಚರಿಸುತ್ತವೆ. ಮೆದುಳಿನ ಬೆಳವಣಿಗೆ ಇಲ್ಲದೆ ಹುಟ್ಟಬಹುದು. ಆಕಸ್ಮಾತ್ ಇವೆಲ್ಲವುಗಳಿಂದ ಶಿಶು ಪಾರಾದರೂ ಅಲರ್ಜಿ ತಪ್ಪದೆ ಬಾಳಿನ ಉದ್ದಕ್ಕೆ ಅಪ್ಪಿಕೊಳ್ಳುತ್ತದೆ.
ಚೆನ್ನಾಗಿ ತೊಳೆಯರಿ
ತರಕಾರಿ, ಸೊಪ್ಪು, ಹಣ್ಣು ಹಂಪಲು ಆಹಾರದ ಅವಿಭಾಜ್ಯ ಅಂಗ. ತರಕಾರಿ ಬೆಳೆಗಾರರು ಮಾರುಕಟ್ಟೆಗೆ ಎಂಥ ತರಕಾರಿ ತರುತ್ತಾರೆ ಎಂಬುದನ್ನು ಪರೀಕ್ಷಿಸುವ ವ್ಯವಸ್ಥೆ ನಮ್ಮಲ್ಲಿ ಇಲ್ಲ. ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಾವೇ ಎಚ್ಚರಗೊಳ್ಳುವುದು ಅನಿವಾರ್ಯ ಮತ್ತು ಅವಶ್ಯ. ತರಕಾರಿ ತರುವ ಅಪಾಯಗಳನ್ನು ತಪ್ಪಿಸುವ ಉಪಾಯ ನಮ್ಮಲ್ಲಿಯೇ ಇದೆ. ಅಂದರೆ ಪೇಟೆಯಿಂದ ತರುವ ತರಕಾರಿ ತೊಪ್ಪಲು ಪಲ್ಲೆ, ಹಣ್ಣು ಹಂಪಲುಗಳನ್ನು ಮೂರು ನಾಲ್ಕು ಬಾರಿ ಸ್ವಚ್ಛವಾಗಿ ನೀರಿನಿಂದ ತೊಳೆದು ಸೇವಿಸುವುದು. ಬಿಸಿನೀರಿನಿಂದ ತೊಳೆದರೆ ಇನ್ನೂ ಉತ್ತಮ.
ಡಾ. ಕರವೀರಪ್ರಭು ಕ್ಯಾಲಕೊಂಡ