ಆರೋಗ್ಯ-ಜೀವನಶೈಲಿ

ಕಿವಿ ಕಚ್ಚುವ ಗುಗ್ಗೆ

ಕಿವಿ ಕಚ್ಚುವ ಗುಗ್ಗೆ
Published On :

ಉತ್ತಮ ಮಾತುಗಾರನಾಗುವ ಮೊದಲು ಉತ್ತಮ ಕೇಳುಗನಾಗಬೇಕು ಎಂಬುದು ಗಾದೆ. ಆದರೆ, ಕಿವಿಯೇ ಸರಿಯಾಗಿ ಕೇಳದಿದ್ದರೆ ಮಾತೂ ಇಲ್ಲ ಕತೆಯೂ ಇಲ್ಲ!
ತಾತ್ಕಾಲಿಕ ಕಿವುಡುತನಕ್ಕೆ ಪ್ರಮುಖ ಕಾರಣ ಗುಗ್ಗೆ ಕಟ್ಟುವುದು. ಇದರಿಂದ ಕಿವಿ ಸರಿಯಾಗಿ ಕೇಳಿಸದಿರುವುದು ಮಾತ್ರವಲ್ಲ ತೀವ್ರ ಬಾಧೆಯುಂಟಾಗುವ ಸಾಧ್ಯತೆ ಇದೆ. ಕಿವಿ ಸೋರುವುದು, ತೀವ್ರ ನೋವು, ವಾಸನೆ ಸೇರಿದಂತೆ ಇತರೆ ಸಂಕಟಗಳು ಕಾಣಿಸಿಕೊಳ್ಳುತ್ತವೆ. ಕಿವಿಯಲ್ಲಿ ಹೊರಕಿವಿ, ಮಧ್ಯಕಿವಿ ಹಾಗೂ ಒಳಕಿವಿ ಎಂಬ ಮೂರು ಭಾಗಗಳಿರುತ್ತವೆ. ಮೂರೂ ಸರಿಯಾಗಿ ಕೆಲಸ ಮಾಡಿದರೆ ಮಾತ್ರ ಎಲ್ಲವೂ ಸಲೀಸು. ಇಲ್ಲದಿದ್ದರೆ ತ್ರಾಸು.  
ಏನಿದು ಗುಗ್ಗೆ ಕಟ್ಟುವುದು?
ಇದು ಹೊರಕಿವಿಯಲ್ಲಿ ಕಾಣಿಸಿಕೊಳ್ಳುವ ತೊಂದರೆ. ಕಿವಿಯ ಹೊರಭಾಗದಲ್ಲಿರುವ ಕೆಲವು ಗ್ರಂಥಿಗಳು ಸ್ರವಿಸುವ ದ್ರವ ನಿಧಾನವಾಗಿ ಗಟ್ಟಿಯಾಗುವುದೇ ಈ ಗುಗ್ಗೆ. ಸಾಮಾನ್ಯವಾಗಿ ಇದು ಸಣ್ಣ ಸಣ್ಣ ತುಣುಕುಗಳ ರೀತಿಯಲ್ಲಿ ಆಗಿ ನಾವು ಆಹಾರವನ್ನು ಜಗಿಯುವಾಗ ಕಿವಿಯ ಅಲುಗಾಟಕ್ಕೆ ತನ್ನಿಂದ ತಾನೇ ಬಿದ್ದು ಹೋಗುತ್ತದೆ. ಆದರೆ ಕೆಲವೊಮ್ಮೆ ಅದು ಕಿವಿಯಲ್ಲೇ ಉಳಿದು ಹಲವು ತೊಂದರೆಗಳನ್ನು ಉಂಟು ಮಾಡುತ್ತದೆ. ಇದಕ್ಕೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಇಲ್ಲದಿದ್ದಲ್ಲಿ ಶಾಶ್ವತ ಕಿವುಡಿಗೆ ಬಲಿಯಾಗಬೇಕಾಗುತ್ತದೆ.
ಕಾರಣ ಏನು?
ಗುಗ್ಗೆಯ ರಾಸಾಯನಿಕ ಮಿಶ್ರಣದಲ್ಲಿ ವ್ಯತ್ಯಾಸವಾದಾಗ ವಿವಿಧ ಗ್ರಂಥಿಗಳು ಸ್ರವಿಸುವ ಪ್ರಮಾಣ ಜಾಸ್ತಿಯಾದಾಗ ಹೊರಗಿನ ನಾಳದ ಆಕೃತಿಯಲ್ಲಿ ವ್ಯತ್ಯಾಸವಾದಾಗ ಕಿವಿಯೊಳಗಡೆ ಅಸಾಮಾನ್ಯ ರೀತಿಯಲ್ಲಿ ರೋಮಗಳು ಹಾಗೂ ಕೂದಲುಗಳು ಬೆಳೆದಾಗ ಧೂಳಿನ  ವಾತಾವರಣದಲ್ಲಿ ಕೆಲಸ ಮಾಡುವವರಲ್ಲಿ ಸ್ವಪ್ರಯತ್ನದಿಂದ ಗುಗ್ಗೆ ತೆಗೆಯಲು ಪ್ರಯತ್ನಿಸಿ, ಗುಗ್ಗೆ ಇನ್ನೂ ಒಳ ಸೇರಿ ಕಟ್ಟಿಕೊಂಡು ಬಿಡುವುದರಿಂದ
ಚಿಕಿತ್ಸೆ ಏನು?
ಗುಗ್ಗೆಯನ್ನು ಆದಷ್ಟು ಮೆತ್ತಗಾಗುವಂತೆ ಮಾಡಿ ತೆಗೆಯಬೇಕು. ಗುಗ್ಗೆಯನ್ನು ಮೆತ್ತಗೆ ಮಾಡಲು ಅಥವಾ ದ್ರವೀಕರಿಸಲು ಹಲವಾರು ವಸ್ತುಗಳನ್ನು ಉಪಯೋಗಿಸಲಾಗುತ್ತದೆ.
1. ಸೋಡಿಯಂ ಬೈ ಕಾರ್ಬೋನೇಟ್ ಹನಿಗಳನ್ನು ಪ್ರತಿದಿನ 5ರಿಂದ 6 ಬಾರಿ 3ರಿಂದ 8 ದಿನ ಹಾಕಬೇಕು.
2. ಶೇ.2 ಪ್ಯಾರಾಡೈಕ್ಲೋರೋ ಬೆನ್‌ಜೀನ್ (ಶೇ.15ರಷ್ಟು ಟರ್ಪಂಟೈನ್ ಎಣ್ಣೆಯ ಜೊತೆಗೆ)ನ್ನು ಪ್ರತಿದಿನ 3 ಬಾರಿ 3 ದಿವಸ ಉಪಯೋಗಿಸಬೇಕು.
3. ಹೈಡ್ರೋಜನ್ ಪೆರಾಕ್ಸೈಡ್ ಸಹಿತ ಗುಗ್ಗೆಯನ್ನು ದ್ರವೀಕರಿಸುತ್ತದೆ. ಆದರೆ ಇದರಲ್ಲಿ ಕೆಲವು ತೊಡಕುಗಳಿರುವುದರಿಂದ ಇದನ್ನು ಆದಷ್ಟು ಉಪಯೋಗಿಸದೆ ಇರುವುದು ಒಳ್ಳೆಯದು.
4. ಕಿವಿಗೆ ಎಣ್ಣೆ ಬಿಡುವುದರಿಂದ ಗುಗ್ಗೆ ಕರಗಿಸಬಹುದೆಂಬ ಅಂಶ ನಮ್ಮ ಹಿಂದಿನವರಿಗೆ ಸ್ಪಷ್ಟವಾಗಿ ಗೊತ್ತಿತ್ತು. ಆದರೆ ಇದನ್ನು 5-10 ನಿಮಿಷ ಕುದಿಸಿ, ನಂತರ ತಣಿಸಿ, ನಂತರ ಕಿವಿಯೊಳಗಡೆ ಬಿಡಬೇಕು.



ಗುಗ್ಗೆಯ ಬಗ್ಗೆ
1. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕಿವಿಯ ನೋವಿಗೆ ಮುಖ್ಯ ಕಾರಣ ಈ ಗುಗ್ಗೆ.
2. ಬಹಳ ಗುಗ್ಗೆ ಕಟ್ಟಿಕೊಂಡಿದ್ದರೆ ಸ್ವಲ್ಪ ಪ್ರಮಾಣದ ಕಿವುಡುತನ ಕಾಣಿಸಿಕೊಳ್ಳಬಹುದು. ಸ್ನಾನ ಮಾಡುವಾಗ ಸೇರಿಕೊಂಡ ನೀರು ಗುಗ್ಗೆಯನ್ನು ಹಿಗ್ಗಿಸಬಹುದು.
3. ಗುಗ್ಗೆ ಕಿವಿಯಲ್ಲಿರುವುದರಿಂದ ಒಂದು ರೀತಿಯ ಅಸಹನೆ ಕಿರಿಕಿರಿಯಾಗಿ ಕಡಿತವನ್ನು ಉಂಟು ಮಾಡಬಹುದು.
4. ಕಿವಿಯಲ್ಲಿ ಗುಂಯ್ ಗುಟ್ಟುವ ಅನುಭವ ಅಥವಾ ಕಿವಿ ಮೊರೆತ ಉಂಟಾಗಬಹುದು.
5. ಇರುವ ಗುಗ್ಗೆಯಲ್ಲಿ ಸೋಂಕಾದಾಗ ಕಿವಿ ಸುರಿತ ಉಂಟಾಗಬಹುದು.
6. ಅಪರೂಪವಾಗಿ ತಲೆಸುತ್ತಿನ ಲಕ್ಷಣವೂ ಕಾಣಿಸಿಕೊಳ್ಳಬಹುದು.

-ಡಾ. ಎಚ್.ಎಸ್. ಮೋಹನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.