ಹದಿಹರೆಯ ಮತ್ತು ಕ್ಯಾನ್ಸರ್

ಹದಿಹರೆಯ ಮತ್ತು ಕ್ಯಾನ್ಸರ್
Updated on: 

ಯೌವ್ವನ ಪ್ರಾಯದವರಲ್ಲಿ ಕ್ಯಾನ್ಸರ್ ತಲೆದೋರುವುದೆಂದರೆ, ಅದು ರೋಗದಿಂದ ನರಳುವವರಿಗೆ ಹಾಗೂ ಅವರ ಪಾಲಕರಿಗೆ ತೀವ್ರತರವಾದ ಯಾತನೆಯನ್ನು ತರುವುದೇ ಆಗಿದೆ. ಇತ್ತೀಚೆಗೆ ಕ್ಯಾನ್ಸರ್ ಕುರಿತ ಸಮಗ್ರ ಜ್ಞಾನ ಹಾಗೂ ಪ್ರಾರಂಭಿಕ ಹಂತದಲ್ಲಿಯೇ ರೋಗ ನಿರ್ಣಯ ಮತ್ತು ಪರಿಪೂರ್ಣ ಚಿಕಿತ್ಸಾ ಸೌಲಭ್ಯಗಳು ಲಭ್ಯವಿರುವುದರಿಂದ ಕ್ಯಾನ್ಸರ್‌ನಿಂದ ಪಾರಾದವರ ಜೀವಿಸುವ ಕಾಲ ವಿಸ್ತರಿಸುತ್ತಿದೆ.
ಆದರೀಗ ಸಂತಾನೋತ್ಪತ್ತಿ ಮಾಡಬಲ್ಲ ವಯಸ್ಸಿನ ಎಳೇ ಪ್ರಾಯದ ಕ್ಯಾನ್ಸರ್ ರೋಗಿಗಳು, ಯಶಸ್ಸು ತರುತ್ತಿರುವ ಅತ್ಯಾಧುನಿಕ ಕೀಮೋ (Chemotherapy) ಹಾಗೂ ರೇಡಿಯೋಥೆರಪಿಯ (Radiotherapy) ಚಿಕಿತ್ಸೆಗಳ ನಂತರ ಹೊಸ ಸಮಸ್ಯೆಗೆ ಕಾರಣರಾಗುತ್ತಿದ್ದಾರೆ. ವಂಶಾಭಿವೃದ್ಧಿಯಂತಹ ಮೂಲ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದಾರೆ.

ಕಾರಣ ಏನು?

1. ಕ್ಯಾನ್ಸರ್ ರೋಗದ ಸಲುವಾಗಿನ ಚಿಕಿತ್ಸೆಗಳಲ್ಲಿ ಬಳಸಲ್ಪಡುವ ಹಲವಾರು ಔಷಧಗಳು ಜನನ ಗ್ರಂಥಿಯ ಕಾರ್ಯಾಚರಣೆ (ವೃಷಣ ಮತ್ತು ಅಂಡಾಶಯಗಳ ಕಾರ್ಯಾಚರಣೆ)ಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಮತ್ತು ಅವರಲ್ಲಿ ಬಹುಪಾಲು ಮಂದಿ ತಮ್ಮ ಉಳಿದ ಜೀವಿತ ಕಾಲಕ್ಕೆ ತಮ್ಮ ಸಂತಾನೋತ್ಪತ್ತಿಯ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ.
2.ರಕ್ತದ ಕ್ಯಾನ್ಸರ್ (Leukaemia), ದುಗ್ದ ಗ್ರಂಥಿಯ (Lymphoma) ಮತ್ತು ಮೂಳೆ ಕ್ಯಾನ್ಸರ್ (Bone Cance)ನಂತಹ ಕೆಲವು ಕ್ಯಾನ್ಸರ್ ರೋಗಗಳು ಹದಿಹರೆಯ ವಯಸ್ಕರು, ಪ್ರಾಯ ಪೂರ್ವ ತರುಣಿಯರು ಮತ್ತು ಬಾಲ್ಯದಲ್ಲೂ ಸಹ ಕಂಡುಬರುತ್ತವೆ.
3.ಚಿಕ್ಕ ವಯಸ್ಸಿನ ಅಂದರೆ 18 ರಿಂದ 40 ವರ್ಷಗಳೊಳಗಿನ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬರುವ ಸಂಭವವು ಇದೆ. ಅವರಿನ್ನೂ ಮದುವೆಯಾಗದೇ ಇರಬಹುದು ಅಥವಾ ಮದುವೆಯಾಗಿ ಸಂತಾನ ಪಡೆಯಲು ನಿಧಾನಿಸುತ್ತಿರಬಹುದು. ಅಂತಹ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬಂದಲ್ಲಿ ಅದರ ಚಿಕಿತ್ಸೆಯ ನಂತರ ಸಂತಾನೋತ್ಪತ್ತಿ ಶಕ್ತಿಯನ್ನೇ ಕಳೆದುಕೊಳ್ಳಬಹುದು.
4.ಶಸ್ತ್ರಚಿಕಿತ್ಸೆ, ಎಕ್ಸ್-ರೇ ಕಿರಣಗಳು, ಗ್ಯಾಮಾ ಕಿರಣಗಳು ಮೊದಲಾದವುಗಳಿಂದ (Radiation) ನೀಡುವ ಚಿಕಿತ್ಸೆ, ಮತ್ತು ಕಿಮೋಥೆರಪಿಯ ಪ್ರಯೋಗ, ಈ ಎಲ್ಲವು ಸಂತಾನೋತ್ಪತ್ತಿ ಕಾರ್ಯಾಚರಣೆ ಸಾಮರ್ಥ್ಯಕ್ಕೆ ಧಕ್ಕೆತರಬಲ್ಲವು. ಕೆಳಕಿಬ್ಬೊಟ್ಟೆಯ ಭಾಗದಲ್ಲಿನ ಜನನಾಂಗಗಳಲ್ಲಿ ತಲೆದೋರುವ ಕ್ಯಾನ್ಸರ್ ರೋಗದ ಸಲುವಾಗಿ ಪದೇ ಪದೇ ಶಸ್ತ್ರಚಿಕಿತ್ಸೆಗಳನ್ನು ನಡೆಸಬೇಕಾಗುವ ಅಗತ್ಯ ಉಂಟಾಗುವುದರಿಂದ ಜನನಗ್ರಂಥಿ (ವೃಷಣ, ಅಂಡಾಶಯಗಳು)ಯನ್ನು ತೆಗೆದುಹಾಕಬೇಕಾಗುವ ಅನಿವಾರ್ಯತೆ ಉಂಟಾಗುವುದು, ಈ ತರಹದ ದುಸ್ಥಿತಿ ಬಂದರೆ ಜನನಗ್ರಂಥಿಯನ್ನು ಪೂರ್ವಸ್ಥಿತಿಗೆ ತರಲಾಗುವುದೇ ಇಲ್ಲ.
5. ರೇಡಿಯೇಷನ್ ಚಿಕಿತ್ಸೆಯು, ಆಂಶಿಕವಾಗಿ ಅಥವಾ ಸಂಪೂರ್ಣವಾಗಿ ಅಂಡಾಶಯದ ಅಕಾಲಿಕ ವೈಫಲ್ಯಕ್ಕೆ ಕಾರಣವಾಗುತ್ತದೆ. ಮಹಿಳೆಯರಲ್ಲಿನ ಗರ್ಭಕೋಶಕ್ಕೆ ರೇಡಿಯೇಷನ್ ಚಿಕಿತ್ಸೆಯಿಂದ ಧಕ್ಕೆ ಉಂಟಾಗುವ ಸಂಭವವಿದ್ದು, ಅದರಿಂದಾಗಿ ಗರ್ಭಾಶಯದ ಗಾತ್ರ ಸಂಕುಚಿತಗೊಂಡು ಅಕಾಲ ಪ್ರಸವ, ಅಕಾಲಿಕ ಹೆರಿಗೆ-ನೋವು ಮತ್ತು ಗರ್ಭಾಶಯದ ಹೊರಗೆ ಗರ್ಭಧಾರಣೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ರೋಗಿಯ ವಯಸ್ಸು, ಅವರಿಗೆ ನೀಡಲ್ಪಟ್ಟ ಔಷಧಗಳು ಮತ್ತು ಅವುಗಳ ಪ್ರಮಾಣವನ್ನು ಅನುಸರಿಸಿ ಕಿಮೋಥೆರಪಿ ಚಿಕಿತ್ಸೆಯು ಸಂತಾನೋತ್ಪತ್ತಿ ಕಾರ್ಯಾಚರಣೆಗೆ ಧಕ್ಕೆ ತರುತ್ತದೆ. ಕಿಮೋಥೆರಪಿ ಚಿಕಿತ್ಸೆಯ ನಂತರ, ವಯಸ್ಸು ಹೆಚ್ಚಾದಂತೆ ಫಲವಂತಿಕೆಯ ಪ್ರಮಾಣ ಕುಸಿಯತೊಡಗುತ್ತದೆ.
6.ಚಿಕಿತ್ಸೆ ಮಾಡುವ ಭರಾಟೆಯಲ್ಲಿ ಯಾವ ನ್ಯೂನ್ಯತೆಯು ಇರದ ಕೆಲವು ಮುಖ್ಯವಾದ ಅಂಗಗಳ ಮೇಲೆ ಈ ಔಷದವು ಬೇರೆ ತೆರನಾದ ದುಷ್ಪರಿಣಾಮ ಬೀರಬಹುದು. ಅಂದರೆ ಬೋನ್‌ಮ್ಯಾರೊ ನಶಿಸಿ ಹೋಗಿ ರಕ್ತಕಣಗಳನ್ನು ಸೃಷ್ಟಿಸುವ ಮೂಳೆಯ ಶಕ್ತಿ ಕುಂದಬಹುದು, ತಲೆಗೂದಲು ಉದುರುವಿಕೆ, ಅಶಕ್ತತೆ, ಚರ್ಮ ಕಾಯಿಲೆಗಳು ಮೇಲಾಗಿ ಸಂತಾನೋತ್ಪತ್ತಿಯ ಶಕ್ತಿಯನ್ನೇ ಕಳೆದುಕೊಳ್ಳಬಹುದು.
7. ಹಲವಾರು ರೋಗಿಗಳಲ್ಲಿ ಋತುಸ್ರಾವ ಶಾಶ್ವತವಾಗಿ ನಿಂತುಹೋಗಬಹುದು ಇಲ್ಲವೆ ತಾತ್ಕಾಲಿಕವಾಗಿರಬಹುದು.  ಋತುಸ್ರಾವ ಪ್ರಕ್ರಿಯೆ ಮತ್ತೆ ಆರಂಭವಾದ ಕ್ಷಣ ಶಿಶುವಿನ ಸೃಷ್ಟಿಗೆ ಅಗತ್ಯವಾಗುವ ಜೀವಾಂಕುರ ಜೀವಕೋಶಗಳು (ಅಂಡಾಣು ಮತ್ತು ವೀರ್ಯಾಣು) ಮತ್ತೆ ವಾಪಸ್ಸು ಬರುತ್ತವೆಂದು ಯಾವಾಗಲೂ ಹೇಳಲಾಗುವುದಿಲ್ಲ.
ಏನು ಮಾಡಬೇಕು?

ರೋಗವನ್ನು ಪ್ರಾರಂಭಾವಸ್ಥೆಯಲ್ಲೇ ಪತ್ತೆಹಚ್ಚಿದರೆ, ಕಾನ್ಸರ್‌ನ್ನು ಸಂಪೂರ್ಣವಾಗಿ ವಾಸಿಮಾಡುವುದಕ್ಕೆ ಮಾತ್ರವಲ್ಲದೆ, ಫಲವಂತಿಕೆಯನ್ನು ಸಂರಕ್ಷಿಸುವಂತಹ ಗುಣಮಟ್ಟದ ಜೀವನದ ಅವಶ್ಯಕತೆಗಳನ್ನು ಉಳಿಸಿಕೊಳ್ಳಲೂ ಸಹಾಯಕವಾಗುತ್ತದೆ. ರೋಗಿಗಳು ಮತ್ತು ಅವರ ಪಾಲಕರು ರೋಗಿಗಳನ್ನು ಉಪಚಾರಕ್ಕೆ ಒಳಪಡಿಸುವ ಮೊದಲು ಅವರು ವೈದ್ಯರೊಂದಿಗೆ ಯಾವ ಯಾವ ವಿಷಯಗಳನ್ನು ಸಮಾಲೋಚಿಸಬೇಕೆಂಬುದನ್ನು ಅರಿತಿರಬೇಕು.

ಈಗ ಕ್ಯಾನ್ಸರ್ ಚಿಕಿತ್ಸೆ ಕೊಡಲು ಎಷ್ಟೋ ಹೊಸ ಹೊಸ ತರಹದ ಉಪಕರಣಗಳು ಸೃಷ್ಟಿಯಾಗಿವೆ. ಶಸ್ತ್ರ ಚಿಕಿತ್ಸೆಯ ಸ್ವರೂಪವನ್ನು ಸೈಬರ್ ಲೈಫ್ ಎಂಬ ಉಪಕರಣದಿಂದ ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಬಹುದಾದ ಅಂಗದ ವಿಸ್ತರಣೆಯನ್ನು ಕಡಿಮೆ ಮಾಡಬಹುದು. ಇಂತಹ ಶಸ್ತ್ರಚಿಕಿತ್ಸೆಯಿಂದ ಅಂಗವಿಕಲತೆ ಬಾರದಂತೆ ಮತ್ತು ಅಂಗದ ಕಾರ್ಯಾಚರಣೆಯ ಶಕ್ತಿ ಕುಂದದಂತೆ ಕಾಪಾಡಬಹುದು.

ಪಾಸಿಟ್ರಾನ್ ಎಮಿಶನ್ ಎಂಬ ಶಕ್ತಿಯುತವಾದ ಕಿರಣಗಳನ್ನು ದೇಹದಲ್ಲಿ ಹರಿಸುವ ಮೂಲಕ ಕ್ಯಾನ್ಸರ್ ತುತ್ತಾಗಿರುವ ಅಂಗವಲ್ಲದೆ ಬೇರೆ ಜಾಗದಲ್ಲಿ ಹರಡಿರುವ ಚಿಕ್ಕಪುಟ್ಟ ಸೋಂಕುಗಳನ್ನು ಪತ್ತೆಹಚ್ಚಬಹುದು.

ಇವುಗಳಲ್ಲಿ ನಾನಾ ವಿಧವಾದ ಚಿಕಿತ್ಸೆಗಳಿವೆ. ದೂರ ದೂರದಲ್ಲಿ ಹರಡಿರುವ ಸೋಂಕುಗಳನ್ನು ಗುಣಪಡಿಸಬೇಕೆಂದರೆ ರಕ್ತದ ಮೂಲಕ ಮದ್ದುಗಳನ್ನು ಇಂಜೆಕ್ಷನ್ ಅಥವಾ ಮಾತ್ರೆಗಳನ್ನು ಕೊಟ್ಟು ಚಿಕಿತ್ಸೆ ಮಾಡಬೇಕಾಗುತ್ತದೆ.

(ಮುಂದಿನ ಸಂಚಿಕೆಯಲ್ಲಿ: 'ಕ್ಯಾನ್ಸರ್ ಚಿಕಿತ್ಸೆಗೆ ಮುನ್ನವೇ ಭ್ರೂಣ ಸೃಷ್ಟಿ, ಭ್ರೂಣ ಮತ್ತು ಅಂಡಾಣು ಸಂರಕ್ಷಣೆ ಹೇಗೆ?')

-ಡಾ. ದೇವಿಕಾ ಗುಣಶೀಲ
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ
gunasheelaivf@gmail.com
080-26673585

(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/40022ಗೆ ಭೇಟಿನೀಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com