

ನವದೆಹಲಿ: ಸರ್ಕಾರಿ ಆಸ್ಪತ್ರೆಗಳಿಗಿಂತ ಖಾಸಗಿ ಆಸ್ಪತ್ರೆಗಳಲ್ಲಿ ಹೆಣ್ಣು ಮಕ್ಕಳ ಶಸ್ತ್ರಚಿಕಿತ್ಸೆ ಹೆರಿಗೆಗಳು(ಸಿಸೇರಿಯನ್) ಎರಡು ಪಟ್ಟು ಜಾಸ್ತಿಯಾಗಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ವರದಿ ತಿಳಿಸಿದೆ.
2015-16ರಲ್ಲಿ ರಾಷ್ಟ್ರೀಯ ಕುಟುಂಬ ಆರೋಗ್ಯ ಕೇಂದ್ರ 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಕಂಡುಬಂದಿದ್ದು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಶಸ್ತ್ರಚಿಕಿತ್ಸೆ ಹೆರಿಗೆಗಳ ಅಂತರ ತುಂಬಾ ಜಾಸ್ತಿಯಾಗಿದೆ ಎಂದು ಗೊತ್ತಾಗಿದೆ.
ತ್ರಿಪುರಾ ನಗರದಲ್ಲಿ ಶೇಕಡಾ 87.1ರಷ್ಟು ಶಸ್ತ್ರಚಿಕಿತ್ಸೆ ಹೆರಿಗೆಗಳು ಖಾಸಗಿ ಆಸ್ಪತ್ರೆಗಳಲ್ಲಿ ಮತ್ತು ಶೇಕಡಾ 36.4 ರಷ್ಟು ಹೆರಿಗೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಆಗಿವೆ. ಬಿಹಾರ ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಶೇಕಡಾ 5 ರಷ್ಟು ಮಾತ್ರ ಶಸ್ತ್ರಚಿಕಿತ್ಸೆ ಹೆರಿಗೆಯಾಗಿದ್ದರೆ ಅದೇ ಖಾಸಗಿ ಆಸ್ಪತ್ರೆಗಳಲ್ಲಿ ಈ ಪ್ರಮಾಣ ಶೇಕಡಾ 37.1.ಪಶ್ಚಿಮ ಬಂಗಾಳದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಹೆರಿಗೆಗಳು ಶೇಕಡಾ 74.7 ರಷ್ಟು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಶೇಕಡಾ 28.1 ರಷ್ಟಾಗಿದೆ.
ಆಂಧ್ರಪ್ರದೇಶದ ನಗರ ಭಾಗಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ 60.9 ಶೇಕಡಾದಷ್ಟಿದ್ದರೆ ಸರ್ಕಾರಿ ಆಸ್ಪತ್ರೆಗಳಲ್ಲಿ 31 ಶೇಕಡಾದಷ್ಟಿದೆ. ತೆಲಂಗಾಣದಲ್ಲಿ ಶೇಕಡಾ 74.8ರಷ್ಟಿದ್ದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇಕಡಾ 42.2ರಷ್ಟಿದೆ.
ಇತ್ತೀಚಿನ ವರ್ಷಗಳಲ್ಲಿ ಶಸ್ತ್ರಚಿಕಿತ್ಸೆ ಹೆರಿಗೆಗಳು ಎಲ್ಲೆಡೆ ಜಾಸ್ತಿಯಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ ಪ್ರಕಾರ, ನಮ್ಮ ದೇಶದಲ್ಲಿ ವರ್ಷವೊಂದಕ್ಕೆ ಸರಾಸರಿ ಶೇಕಡಾ 10ರಿಂದ 15ರಷ್ಟು ಶಸ್ತ್ರಚಿಕಿತ್ಸೆ ಹೆರಿಗೆಗಳಾಗಬಹುದು. ಆದರೆ ಗರ್ಭಧಾರಣೆಯಲ್ಲಿ ಹಲವು ತೊಡಕುಗಳುಂಟಾಗುವುದರಿಂದ ವೈದ್ಯರು ಸಹಜ ಹೆರಿಗೆಗಳಿಗಿಂತ ಸಿಸೇರಿಯನ್ ಹೆರಿಗೆಗೆ ಆದ್ಯತೆ ನೀಡುತ್ತಾರೆ ಎಂದು ಸ್ತ್ರೀ ರೋಗ ತಜ್ಞರು ಹೇಳುತ್ತಾರೆ.