ಕನ್ನಡೇತರ ನೆಲೆಯಲ್ಲಿ ದ್ವಿದಶಕ ಕನ್ನಡ ಕಲಿಕೆ ಒಂದು ಐತಿಹಾಸಿಕ ಘಟನೆ
ಪುಣೆ: ಆರಂಭ ಶೂರನಾಗದೆ ಸತತವಾಗಿ 21 ವರ್ಷಗಳವರೆಗೆ ಬೇರೊಂದು ಪ್ರಾಂತ್ಯದಲ್ಲಿ ಅದೂ ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ ಪುಣೆಯಲ್ಲಿ ಮರಾಠಿಗರಿಗಾಗಿ ಕನ್ನಡ ಕಲಿಕಾ ವರ್ಗವನ್ನು ನಡೆಸಿಕೊಂಡು ಬರುತ್ತಿರುವುದು ತಿಳಿದಷ್ಟು ಸುಲಭ ಕಾರ್ಯವಲ್ಲ. ಇಂಥ ಪರಿಶ್ರಮಕ್ಕೆ ಕರ್ನಾಟಕ ಸರ್ಕಾರ, ಕನ್ನಡಪರ ಸಂಸ್ಥೆಗಳು ಕೈ ಜೋಡಿಸಬೇಕೆಂದು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದು ಟಿಳಕ ಮಹಾರಾಷ್ಟ್ರ ವಿದ್ಯಾಪೀಠದ ಮಾಜಿ ಉಪಕುಲಪತಿ ಪೀಠಕ್ಕೆ ಏರಿದ ಶಿಕ್ಷಣತಜ್ಞ ಡಾ. ಹೀರಾ ಅಡ್ಯಂತಾಯ ಹೇಳಿದ್ದಾರೆ.
ಅವರು ಅಂತರರಾಷ್ಟ್ರೀಯ ಭಾಷಾ ದಿನದಂದು ಪುಣೆಯ ಮರಾಠಿ ಕನ್ನಡ ಸ್ನೇಹವರ್ಧನ ಕೇಂದ್ರವು ಕನ್ನಡ ಸಂಘದ ಹಾಲಿನಲ್ಲಿ ಆಯೋಜಿಸಿದ ಕನ್ನಡ ಕಲಿಕಾ ವರ್ಗದ ದ್ವಿದಶಕ ಪೂರ್ತಿ, ಪುಸ್ತಕ ಬಿಡುಗಡೆ ಮತ್ತು ದಿ. ಸರಸ್ವತಿ ಬಾಯಿ ರಾಜವಾಡೆಯವರ ಜನ್ಮಶತಮಾನೋತ್ಸವ ಸಮಾರಂಭದ ಅಧ್ಯಕ್ಷ ಪೀಠದಿಂದ ಮಾತನಾಡುತ್ತಿದ್ದರು. ಕನ್ನಡದಲ್ಲಿ ಸ್ತ್ರೀಪರ ಅಭಿವ್ಯಕ್ತಿಗೊಂದು ಸ್ಪಷ್ಟರೂಪ ಕೊಟ್ಟವರು ಸರಸ್ವತಿಬಾಯಿ ರಾಜವಾಡೆ ಎಂದು ಕನ್ನಡದ ಜ್ಯೇಷ್ಠ ಕವಯಿತ್ರಿ, ಲೇಖಕಿ ಶ್ರೀಮತಿ ವೈದೇಹಿ ನುಡಿದರು. ಸರಸ್ವತಿ ರಾಜವಾಡೆಯವರ ಕುರಿತು ಮುಂತಾದ ಕೆಲ ಪುಟಗಳನ್ನು ಬರೆದು ಅವರ ಬದುಕನ್ನು ಅಜರಾಮರಗೊಳಿಸಿದ ವೈದೇಹಿ ಪುಣೆಯಲ್ಲಿ ಅವರ ಜನ್ಮಶತಮಾನೋತ್ಸವ ನಡೆಯುತ್ತಿರುವುದನ್ನು ಪ್ರಶಂಸಿಸಿದರು.
ಆರಂಭದಲ್ಲಿ ಗಣ್ಯರಿಂದ ಸರಸ್ವತಿ ಬಾಯಿ ರಾಜವಾಡೆ ಪ್ರತಿಮೆಗೆ ಹಾರ ಅರ್ಪಿಸಿ ದ್ವೀಪ ಪ್ರಜ್ವಲನೆ ಮಾಡಲಾಯಿತು. ಕೇಂದ್ರದ ಗೌ. ಪ್ರಧಾನ ಕಾರ್ಯದರ್ಶಿ ಕೆ.ಎಸ್. ಹೆಗಡೆಯವರು ಮಾತನಾಡಿ ಕನ್ನಡ ವರ್ಗ ಸ್ಥಾಪನೆಗೆ ಶ್ರೀನಿವಾಸ ಹಾವನೂರು ನಡೆಸಿದ ಪ್ರಯತ್ನಗಳನ್ನು ಸ್ಮರಿಸಿದರು.
ಡಾ. ಹೀರಾ ಅಡ್ಯಂತಾಯರ ಹಸ್ತದಿಂದ ಪುಣೆಯ ಶ್ರೀಮತಿ ಜ್ಯೋತಿ ಮಧುಭಟ್ಟನವರ ಅವರು ಬರೆದ, ರವಿ ಪ್ರಕಾಶನ ಬೆಂಗಳೂರು ಪ್ರಕಟಿಸಿದ "ಒಲವಿನ ತಂದೆಗೆ ಮಗಳ ಕರೆ" ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಕನ್ನಡ ವರ್ಗದ ಶಿಕ್ಷಕರಾದ ಶ್ರೀಮತಿ ಯಶೋದಾ ಮೋರೆ, ಕೃಷ್ಣ ಎಸ್. ಹೆಗಡೆ, ಸುನೀತಾ ಶಿರಗುಪ್ಪಿ, ಟಿ.ವಿ. ಸದಾನಂದ ಗಣಪತಿ ಮೋರೆಯವರನ್ನು ಕನ್ನಡ ಕಲಿಕಾ ವರ್ಗದ ಮಾಜಿ ವಿದ್ಯಾರ್ಥಿಗಳು ಸತ್ಕರಿಸಿದರು. ಆರಂಭದಲ್ಲಿ ಪ್ರಾರ್ಥನಾ ಗೀತೆ ಹಾಡಿದ ಸಂಪದಾ ಕಾಳೆ ಅಂತ್ಯದಲ್ಲಿ ಜ್ಞಾನೇಶ್ವರಿಯ ಪಸಾಯದಾನ ಹಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

