ಬೆಂಗಳೂರು: ಮದುವೆಯಾಗಿಲ್ಲವೆಂದು ಮನನೊಂದು ಯುವಕ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಎಚ್ ಎಎಲ್ ಬಳಿ ಗುರುವಾರ ನಡೆದಿದೆ.
ಎಚ್ ಎಎಲ್ ನಿವಾಸಿ ಪರಮೇಶ(28) ಮೃತಪಟ್ಟ ಯುವಕ. ಮಾರತಹಳ್ಳಿಯಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು.
ಪರಮೇಶ ಪೋಷಕರೊಂದಿಗೆ ತನ್ನ ಮದುವೆ ಮಾಡುವಂತೆ ಕೇಳಿದ್ದಾನೆ. ಅದಕ್ಕೆ ಪೋಷಕರು ಇನ್ನೆರಡು ವರ್ಷ ಮದುವೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ, ಸೆಕ್ಯೂರಿಟಿ ಗಾರ್ಡ್ ಹುದ್ದೆ ಎಂದು ಕೇಳಿ ಕೆಲವರು ಹೆಣ್ಣು ಕೊಡಲು ನಿರಾಕರಿಸುತ್ತಿದ್ದರು.
ಇದರಿಂದಾಗಿ ಮನನೊಂದ ಪರಮೇಶ ಯಮಲುರು ಕೆರೆ ಬಳಿ ಹೋಗಿ ವಿಷ ಸೇವಿಸಿದ್ದಾನೆ. ಪ್ರಜ್ಞೆ ತಪ್ಪಿ ಬಿದ್ದಿದ್ದ ಆತನನ್ನು ಆಸ್ಪತ್ರೆಗೆ ದಾಖಲಾಯಿಸಿತಾದರೂ, ವೈದ್ಯರು ಪರಮೇಶ ಸಾವನ್ನಪ್ಪಿರುವುದಾಗಿ ದೃಢಪಡಿಸಿದ್ದಾರೆ.