

ಕೋಲಾರ: ಅಸ್ಸಾಂ-ತ್ರಿಪುರಾ ಗಡಿಯಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ವೀರಮರಣವನ್ನಪ್ಪಿದ ರಾಜ್ಯದ ವೀರ ಯೋಧ ರಾಜೇಶ್ ಅವರ ಪಾರ್ಥೀವ ಶರೀರದ ಅಂತಿಮ ವಿಧಿವಿಧಾನಗಳನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ರಾಜೇಶ್ ಅವರ ಹುಟ್ಟೂರಾದ ಕೋಲಾರದ ಕಿತ್ತಂಡೂರಿನ ಸರ್ಕಾರಿ ಶಾಲಾ ಆವರಣದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗಿದ್ದು, ಅಂತಿಮ ವಿಧಿವಿಧಾನದಲ್ಲಿ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಕೆ ಆರ್ ರಮೇಶ್ ಕುಮಾರ್, ಕೋಲಾರ ಶಾಸಕ ವರ್ತೂರು ಪ್ರಕಾಶ್ ಅವರು ಸೇರಿದಂತೆ ಹಲವು ಸರ್ಕಾರಿ ಅಧಿಕಾರಿಗಳು ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ವೀರ ಯೋಧ ರಾಜೇಶ್ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಕೋಲಾರದ ಸಾವಿರಾರು ಮಂದಿ ರಾಜೇಶ್ ಅವರ ಅಂತಿಮ ದರ್ಶನ ಪಡೆದರು.
ಅಸ್ಸಾಂ-ತ್ರಿಪುರಾ ಗಡಿಯಲ್ಲಿ ಉಗ್ರರು ಸಿಡಿಸಿದ ಗುಂಡಿನ ದಾಳಿಯಲ್ಲಿ ಯೋಧ ರಾಜೇಶ್ ವೀರಮರಣವನ್ನಪ್ಪಿದ್ದರು. ಮೃತ ರಾಜೇಶ್ ಕಳೆದ ಮೂರು ವರ್ಷಗಳಿಂದ ಗಡಿ ಭದ್ರತಾ ಪಡೆ (ಬಿಎಸ್ ಎಫ್)ಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ರಾತ್ರಿ ಸುಮಾರು 3 ಗಂಟೆ ವೇಳೆಯಲ್ಲಿ ಸೇನಾ ವಾಹನದಲ್ಲಿ ರಾಜೇಶ್ ಅವರ ಪಾರ್ಥೀವ ಶರೀರವನ್ನು ಕಿತ್ತಂಡೂರಿಗೆ ತರಲಾಗಿತ್ತು.