

ಹುಬ್ಬಳ್ಳಿ: ಐಟಿ ಅಧಿಕಾರಿಗಳ ಸೋಗಿನಲ್ಲಿ ದಾಳಿ ಮಾಡಿಕೊಂಡು ಶ್ರೀಮಂತರಿಂದ ಹಣ ದೋಚುತ್ತಿದ್ದಾತನನ್ನು ಹುಬ್ಬಳ್ಳಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬಂಧಿತರನ್ನು ಶಿವಾನಂದ ಭಜಂತ್ರಿ ಮತ್ತು ರಾಮಚಂದ್ರ ಭಜಂತ್ರಿ ಎಂದು ಗುರುತಿಸಲಾಗಿದ್ದು, ಶ್ರೀಮಂತ ಮನೆಗಳನ್ನು ಗುರುತಿಸಿ ದಾಳಿ ಮಾಡುತ್ತಿದ್ದ ರಾಮಚಂದ್ರ ಹಾಗೂ ಶಿವಾನಂದ ಭಜಂತ್ರಿ ಅವರಿಗೆ ಕೈಗೆ ಸಿಕ್ಕಷ್ಟು ಹಣವನ್ನು ತೆಗೆದುಕೊಂಡು ಪರಾರಿಯಾಗುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ರಾಮಚಂದ್ರ ಭಜಂತ್ರಿ ಇದೇ ರೀತಿ ಹುಬ್ಬಳ್ಳಿಯಲ್ಲಿ ಶ್ರೀಮಂತರೊಬ್ಬರ ಮನೆ ಮೇಲೆ ದಾಳಿ ಮಾಡಿದ್ದ ಸಂದರ್ಭದಲ್ಲೇ ಆತನನ್ನು ಸಾಕ್ಷ್ಯ ಸಮೇತ ಬಂಧಿಸಿದ್ದಾರೆ. ತಾನು ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ಮನೆ ಮೇಲೆ ದಾಳಿ ಮಾಡಿ ಅಲ್ಲಿದ್ದ ಸುಮಾರು 1.5 ಲಕ್ಷ ರು. ಹಣವನ್ನು ದೋಚುತ್ತಿದ್ದಾಗ ಸ್ಥಳಕ್ಕಾಗಮಿಸಿದ ಪೊಲೀಸರು ಕೂಡಲೇ ಆತನನ್ನು ವಶಕ್ಕೆ ಪಡೆದಿದ್ದಾರೆ.
ಬಳಿಕ ಆತನ ಪರೀಕ್ಷಿಸಿದಾಗ ಆತ ನಕಲಿ ಸಿಬಿಐ ಅಧಿಕಾರಿ ಎಂದು ತಿಳಿದುಬಂದಿದೆ. ಇದೇ ವೇಳೆ ಈ ಹಿಂದೆ ಆತ ಮಾಡಿದ್ದ ಹಲವು ಅಕ್ರಮಗಳನ್ನು ಆತ ಹೇಳಿಕೊಂಡಿದ್ದು, ಟ್ರಕ್ ಮಾಲೀಕರೊಬ್ಬರನ್ನು ಬೆದರಿಸಿ ಅವರಿಂದ 60 ಸಾವಿರಕ್ಕೂ ಅಧಿಕ ಹಣವನ್ನು ದೋಚಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ಷಯ್ ಕುಮಾರ್ ನಟನೆಯ ಬಾಲಿವುಡ್ ನ ಸ್ಪೆಷಲ್-26 ಚಿತ್ರಕೂಡ ಇಂತಹುದೇ ಕಥೆ ಹೊಂದಿದ್ದು, ಅದರಲ್ಲಿ ನಟ ಅಕ್ಷಯ್ ಕುಮಾರ್ ಸಿಬಿಐ ಅಧಿಕಾರಿ ಸೋಗಿನಲ್ಲಿ ಕಾಳಧನಿಕರಿಂದ ಹಣ ದೋಚುತ್ತಿರುತ್ತಾರೆ. ಆದರೆ ಆರೋಪಿ ರಾಮಚಂದ್ರ ಭಜಂತ್ರಿ ಮಾತ್ರ ತನ್ನ ಕಥೆಯಲ್ಲಿ ಹಲವು ಪಾತ್ರಗಳನ್ನು ನಿಭಾಯಿಸಿದ್ದು, ಸಿಬಿಐ, ಆದಾಯ ತೆರಿಗೆ ಅಧಿಕಾರಿ, ಗುಪ್ತಚರ ಇಲಾಖೆ ಅಧಿಕಾರಿ, ಸಿಸಿಬಿ ಅಧಿಕಾರಿ ಎಂದು ಹೇಳಿಕೊಂಡು ಹಲವು ಮನೆಗಳಲ್ಲಿ ಹಣ ದೋಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಇಬ್ಬರೂ ವಂಚಕರ ವಿರುದ್ಧ ಬಸವರಾಜ್ ಪೂಜಾರ ಎಂಬುವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಶ್ರೀಮಂತರೊಬ್ಬರ ಮನೆಯಲ್ಲಿ 1.5 ಲಕ್ಷ ಹಣ ದೋಚುತ್ತಿದ್ದಾಗ ಮಫ್ತಿಯಲ್ಲಿದ್ದ ಪೊಲೀಸರು ಇವರನ್ನು ಮಾತನಾಡಿಸಿದ್ದಾರೆ. ಆಗಲೂ ತಾವು ಐಟಿ ಅಧಿಕಾರಿಗಳು ಎಂದು ಹೇಳಿಕೊಂಡಿದ್ದ ಇಬ್ಬರೂ ಆರೋಪಿಗಳು ತಮ್ಮ ಬಳಿ ಇದ್ದ ನಕಲಿ ಗುರುತಿನ ಚೀಟಿಯನ್ನು ತೋರಿಸಿ ಪೊಲೀಸರನ್ನೇ ಮೋಸ ಮಾಡಲು ಯತ್ನಿಸಿದ್ದಾರೆ. ಆದರೆ ಆರೋಪಿ ಮಾತನ್ನು ನಂಬದ ಪೊಲೀಸರು ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಈತನ ಜಾಲ ಬಯಲಾಗಿದೆ.
ಪ್ರಸ್ತುತ ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.