

ಬೆಂಗಳೂರು: ಮಾರುತಿ ಒಮ್ನಿ ಮತ್ತು ಇನ್ನೋವಾ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿ ಐವರು ಗಾಯಗೊಂಡಿರುವ ಘಟನೆ ಬೆಂಗಳೂರಿನ ಮಾಗಡಿ ತಾಲೂಕಿನ ತಾಲಕೆರೆ ಹ್ಯಾಂಡ್ ಪೊಸ್ಟ್ ಬಳಿ ಸಂಭವಿಸಿದೆ.
ಸಾವನ ದುರ್ಗದಲ್ಲಿ ಬ್ರಹ್ಮೋಪದೇಶ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಬರುವಾಗ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಉಪನಯನ ಮಾಡಿಸಿಕೊಂಡ ಬಾಲಕ ಕೂಡ ಸಾವನ್ನಪ್ಪಿದ್ದಾನೆ. ಪ್ರೇಮಬಾಯಿ, ಸುಹಾಸ್, ಮತ್ತು ಸನ್ನಿಧಿ ಮೃತ ದುರ್ದೈವಿಗಳು.
ಶಿವಮೊಗ್ಗದ ಭದ್ರಾವತಿ ಜಿಲ್ಲೆಯವರಾದ ಉಮೇಶ್ವರ್ ಮತ್ತು ಸುಜಾತಾಬಾಯಿ ಅವರ ಪುತ್ರ ಸುಹಾಸ್, ಪರಮೇಶ್ವರ್ ಮತ್ತು ಮಧುರಾಬಾಯಿ ದಂಪತಿ ಮಗಳಾದ ಸನ್ನಿಧಿ ಸಾವನ್ನಪ್ಪಿದ್ದಾರೆ.
ಸಾವನದುರ್ಗದ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದಲ್ಲಿ ಉಪನಯನ ಕಾರ್ಯಕ್ರಮಕ್ಕಾಗಿ ತೆರಳುವ ವೇಳೆ ನಿನ್ನೆ ಸಂಜೆ ಸುಮಾರು 6.30 ರ ವೇಳೆಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ರಾತ್ರಿ ಮಾರುತಿ ಒಮ್ನಿ ಕಾರಿನಲ್ಲಿ ಶಿವಮೊಗ್ಗದಿಂದ ಈ ಕುಟುಂಬ ಹೊರಟಿತ್ತು. ಪರಮೇಶ್ವರ್ ಕಾರು ಡ್ರೈವಿಂಗ್ ಮಾಡುತ್ತಿದ್ದರು. ಈ ವೇಳೆ ಅತಿ ವೇಗವಾಗಿ ಬಂದ ಇನ್ನೋವಾ ಕಾರಿಗೆ ಡಿಕ್ಕಿ ಮಾರುತಿ ಓಮ್ನಿ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಮೂವರು ಸಾವನ್ನಪ್ಪಿ, ಗಾಯಗೊಂಡವರನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.