

ಮಂಡ್ಯ: ಮದುವೆಗೂ ಮುನ್ನವೇ ಭಾವಿ ಪತಿಯೊಬ್ಬ ವರದಕ್ಷಿಣೆ ಕಿರುಕುಳ ನೀಡಿದ ಕಾರಣಕ್ಕೆ 26 ವರ್ಷದ ಉಪನ್ಯಾಸಕಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ಕೆ.ಆರ್. ಪೇಟೆ ತಾಲೂಕಿನಲ್ಲಿ ನಡೆದಿದೆ.
ಶ್ರುತಿ (26) ಆತ್ಮಹತ್ಯೆಗೆ ಶರಣಾದ ಯುವತಿ. ಬಿಜಿಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. ಚೆನ್ನರಾಯಪಟ್ಟಣದಲ್ಲಿ ಸಾಫ್ಟ್ ಇಂಜಿನಿಯರ್ ಆಗಿರುವ ಕೆ.ಟಿ. ಹುತೇಶ್ ಎಂಬುವವರೊಂದಿಗೆ ಕಳೆದ ನವೆಂಬರ್ 6 ರಂದು ನಿಶ್ಚಿತಾರ್ಯಮಾಡಿಕೊಂಡಿದ್ದರು. ಅದೇ ಮಾರ್ಚ್ 27 ರಂದು ವಿವಾಹವೂ ನಿಶ್ಚಯವಾಗಿತ್ತು.
ನಿಶ್ಚಿತಾರ್ಥದ ವೇಳೆಯಲ್ಲಿ ಹುತೇಶ್ ಕುಟುಂಬಸ್ಥರು ಕೇಳಿದ್ದಂತೆ ಶ್ರುತಿ ಪೋಷಕರು 150 ಗ್ರಾಂ ಚಿನ್ನದ ಆಭರಣಗಳನ್ನು ನೀಡಿದ್ದಾರೆ. ಆದರೆ, ಇದಕ್ಕೆ ಸಮಾಧಾನಪಟ್ಟುಕೊಳ್ಳದ ಹುತೇಶ್ ನಿಶ್ಚಿತಾರ್ಥದ ನಂತರ ಮತ್ತೆ ಶ್ರುತಿಯನ್ನು ಕರೆದು ಮತ್ತಷ್ಟು ಚಿನ್ನ, ಕಾರು ಹಾಗೂ ಬೆಂಗಳೂರಿನಲ್ಲಿ ಸೈಟ್ ಒಂದು ಕೊಡುವಂತೆ ಕೇಳಿದ್ದಾನೆ. ಈ ಬಗ್ಗೆ ಶ್ರುತಿ ಪೋಷಕರು ತಮ್ಮ ಕುಟುಂಬಸ್ಥರೊಂದಿಗೆ ಮಾತನಾಡಿದ್ದಾರೆ. ಆದರೆ, ಮಾತುಕತೆ ವ್ಯರ್ಥವಾಗಿದೆ.
ಇದರಿಂದ ಬೇಸತ್ತಿದ್ದ ಶ್ರುತಿ ಮಾರ್ಚ್ 17 ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಶ್ರುತಿ ಪೋಷಕರು ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 21 ರಂದು ಕೊನೆಯುಸಿರೆಳೆದಿದ್ದಾಳೆ.
ಇದೀಗ ತಮ್ಮ ಮಗಳ ಸಾವಿಗೆ ಆಕ್ರೋಶ ವ್ಯಕ್ತಪಡಿಸುತ್ತಿರುವ ಶ್ರುತಿ ತಂದೆ ವೆಂಕಟರಾಮಗೌಡ ಅವರು, ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕೆಂದು ಹೇಳಿದ್ದಾರೆ.
ಆತ್ಮಹತ್ಯೆಗೂ ಮುನ್ನ ಶ್ರುತಿ 13 ಪುಟಗಳ ಸುಧೀರ್ಘ ಡೆತ್ ನೋಟ್'ನ್ನು ಬರೆದಿದ್ದಾಳೆ. ಪ್ರಸ್ತುತ ಕೆ.ಆರ್. ಪೇಟೆ ತಾಲೂಕಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.