ಮಂಡ್ಯ: ತಮಿಳುನಾಡಿಗೆ ಕಾವೇರಿ ನದಿಯಿಂದ ನೀರು ಬಿಡುವುದನ್ನು ವಿರೋಧಿಸಿ ಮಂಡ್ಯದಲ್ಲಿ ರೈತರ ಮತ್ತು ಕನ್ನಡ ಪರ ಹೋರಾಟಗಾರರ ಪ್ರತಿಭಟನೆ ಮುಂದುವರಿಯುವ ಶನಿವಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೆಆರ್ ಎಸ್ ಅಣೆಕಟ್ಟು ಬಳಿ ಅಹೋರಾತ್ರಿ ಧರಣಿ ನಡೆಸಲು ರೈತರು ನಿರ್ಧರಿಸಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುತ್ತಿರುವುದನ್ನು ವಿರೋಧಿಸಿ ಕಾವೇರಿ ಕೊಳ್ಳದಲ್ಲಿ ಪ್ರತಿಭಟನೆ ಮುಂದುವರಿದಿದ್ದು. ಬೃಹತ್ ಗಾತ್ರದ ಮರದ ದಿಮ್ಮಿಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಣಕನಹಳ್ಳಿ ಗ್ರಾಮಸ್ಥರು ಎತ್ತಿನಗಾಡಿಯಲ್ಲಿ ಮೆರವಣಿಗೆ ನಡೆಸಿದರೆ, ರೈತರ ಹೋರಾಟಕ್ಕೆ ಇಂದು ಮಕ್ಕಳು ಕೂಡ ಸೇರಿದ್ದರು. ಕನ್ನಡ ಪರ ಸಂಘಟನೆಗಳು ಬೆಂಗಳೂರು ಮೈಸೂರು ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿವೆ. ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆದಿದೆ.
ರೈಲು ಬಂದ್ : ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಶನಿವಾರ ಸೆಪ್ಟೆಂಬರ್ 19ರಂದು ಬೆಂಗಳೂರಿನಿಂದ ಮಂಡ್ಯದವರೆಗೆ ಬೃಹತ್ ಕಾರ್ ಜಾಥಾ ನಡೆಯಿತು. ಸೆಪ್ಟೆಂಬರ್ 19ರಂದು ಮಂಡ್ಯದಲ್ಲಿ ರೈಲು ಬಂದ್ ಗೆ ವಾಟಾಳ್ ಪಕ್ಷ ಕರೆ ನೀಡಿದೆ.