

ಬೆಂಗಳೂರು: ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನದಿ ನೀರು ಹಂಚಿಕೆ ವಿಚಾರ ತಾರಕಕ್ಕೇರಿದ್ದು, ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆದ ಘಟನೆಗಳು ಸುದ್ದಿಯಾದ ಬೆನ್ನಲ್ಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತಮಿಳುನಾಡಿಗೆ ತೆರಳುತ್ತಿದ್ದ ತನ್ನ ಎಲ್ಲ ಬಸ್ ಸೇವೆಗಳನ್ನು ಸೋಮವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಚೆನ್ನೈ, ರಾಮನಾಥಪುರಂ, ನಾಗಪಟ್ಟಣಂ, ತಿರುಚ್ಚಿ ಮತ್ತು ತಂಜಾವೂರುಗಳಲ್ಲಿ ಕನ್ನಡಿಗರಿಗೆ ಸಂಬಂಧಿಸಿದ ಹೋಟೆಲ್ ಹಾಗೂ ಆಸ್ತಿಪಾಸ್ತಿಗಳ ಮೇಲೆ ದಾಳಿಯಾದ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿರುವಂತೆಯೇ ಚೆನ್ನೈ-ವೆಲ್ಲೂರು, ವೆಲ್ಲೂರಿ-ಕೋಲಾರ, ಕೋಲಾರ- ಹೊಸೂರು ಕಡೆಗೆ ಹೋಗುತ್ತಿದ್ದ ಎಲ್ಲಾ ಕೆಎಸ್ಆರ್ ಟಿಸಿ ಬಸ್ ಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಸ್ಯಾಟಲೈಟ್ ನಿಂದ ತಮಿಳುನಾಡಿಗೆ ತೆರಳುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಗಳನ್ನು ಈಗಾಗಲೇ ತಡೆ ಹಿಡಿಯಲಾಗಿದ್ದು, ನಿಲ್ದಾಣದಲ್ಲಿ ಪ್ರಯಾಣಿಕರು ತಬ್ಬಿಬ್ಬಾಗುವಂತೆ ಮಾಡಿದೆ. ಅಂತೆಯೇ ಈಗಾಗಲೇ ತಮಿಳುನಾಡಿನತ್ತ ತೆರಳಿದ್ದ ರಾಜ್ಯ ಸಾರಿಗೆ ಬಸ್ ಗಳನ್ನು ಕೂಡ ಕರ್ನಾಟಕ-ತಮಿಳುನಾಡು ಗಡಿ ಬೆಂಗಳೂರು ಹೊರವಲಯದ ಅತ್ತಿಬೆಲೆ ಸಮೀಪ ನಿಲುಗಡೆ ಮಾಡಲಾಗಿದ್ದು, ಇಲಾಖೆಯ ಅಧಿಕಾರಿಗಳ ಸೂಚನೆ ಮೇರೆಗೆ ಬಸ್ ಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಮಧ್ಯೆಯೇ ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಮತ್ತೆ ರಾಜ್ಯದ ವಿರುದ್ಧ ಸುಪ್ರೀಂ ತೀರ್ಪು ನೀಡಿದ್ದು, ಸೆ.20 ರವರೆಗೂ ತಮಿಳುನಾಡಿಗೆ ಪ್ರತೀನಿತ್ಯ 12 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿರುವ ಅಧಿಕಾರಿಗಳು, ಕರ್ನಾಟಕ ಹಾಗೂ ತಮಿಳುನಾಡು ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಗಡಿಯಲ್ಲಿ ಸಂಚರಿಸುವ ಎಲ್ಲಾ ವಾಹನಗಳನ್ನು ಸಿಬ್ಬಂದಿಗಳು ಪರಿಶೀಲನೆ ನಡೆಸುತ್ತಿದ್ದಾರೆ.