

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಮತ್ತೆ ರಾಜ್ಯಕ್ಕೆ ಹಿನ್ನಡೆಯುಂಟಾಗಿದ್ದು, ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿಕೊಂಡಿದ್ದಾರೆ.
ಕಾವೇರಿ ನೀರು ವಿವಾದ ಕುರಿತಂತೆ ನಿನ್ನೆಯಷ್ಟೇ ಆದೇಶ ನೀಡಿದ್ದ ಸುಪ್ರೀಂಕೋರ್ಟ್ ಸೆ.27ರ ವರೆಗೆ ಪ್ರತೀನಿತ್ಯ 6 ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸೂಚನೆ ನೀಡಿತ್ತು.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನೀರು ಬಿಡುಗಡೆ ಮಾಡುವ ಕುರಿತಂತೆ ಈ ವರೆಗೂ ನಿರ್ಧಾರ ಕೈಗೊಳ್ಳಲಾಗಿಲ್ಲ. ಇಂದು ಸಂಜೆ ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಸುಪ್ರೀಂ ಆದೇಶದಿಂದಾಗಿ ರಾಜ್ಯದ ಜನತೆ ಆಕ್ರೋಶಕ್ಕೆ ಒಳಗಾಗಬಾರದು. ರಾಜ್ಯದಲ್ಲಿ ಶಾಂತಿ ಕಾಪಾಡಬೇಕಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಆದೇಶ ಮರು ಪರಿಶೀಲನೆ ಕುರಿತಂತೆ ರಾಜ್ಯ ಸರ್ಕಾರವೇನಾದರೂ ಅರ್ಜಿ ಸಲ್ಲಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ.