

ಕಲಬುರಗಿ: ಅತಿವೃಷ್ಟಿಯಿಂದ ತೀವ್ರ ಹಾನಿಗೊಳಗಾದ ಹೈದ್ರಾಬಾದ್ ಕರ್ನಾಟಕದ ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ ನಡೆಸಿದರು. ಈ 2 ಜಿಲ್ಲೆಗಳಿಗೆ ಸೇರಿ ತುರ್ತು ಪರಿಹಾರಕ್ಕೆ 25 ಕೋಟಿ ರೂ.ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಬೀದರ್, ಭಾಲ್ಕಿ ಹಾಗೂ ಬಸವಕಲ್ಯಾಣ ತಾಲೂಕುಗಳಲ್ಲಿ ಸಮೀಕ್ಷೆ ನಡೆಸಿದರು. ಅಲ್ಲಿಂದ ಕಲಬುರಗಿ ಜಿಲ್ಲೆಗೆ ತೆರಳಿದ ಸಿದ್ದರಾಮಯ್ಯ, ಬೆಣ್ಣೆತೋರಾ, ಮುಲ್ಲಾಮಾರಿ ಜಲಾಶಯ, ಗಂಡೋರಿ ನಾಲೆಯಿಂದ ಆಗಿರುವ ಹಾನಿಯನ್ನು ಪರಿಶೀಲಿಸಿದರು.ಕಲಬುರಗಿಯಲ್ಲಿ ಸುಮಾರು 340 ಕೋಟಿ ರು ಹಾನಿಯಾಗಿದೆ ಎಂದು ತಿಳಿಸಿದರು. ಮುಂದಿನ 10 ದಿನಗಳಲ್ಲಿ ಎರಡು ಜಿಲ್ಲೆಗಳಲ್ಲಿ ಉಂಟಾಗಿರುವ ನಷ್ಟದ ಬಗ್ಗೆ ವರದಿ ಸಲ್ಲಿಸಬೇಕೆಂದು ಸೂಚಿಸಿದ್ದಾರೆ. ಹೆಚ್ಚಿನ ಪರಿಹಾರಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಿದ್ದರಾಮಯ್ಯ ಈ ವೇಳೆ ಭರವಸೆ ನೀಡಿದರು.
ಬುಧವಾರದಿಂದಲೇ ಹಾನಿಗೀಡಾದ ರೈತರಿಗೆ ಪರಿಹಾರ ವಿತರಣೆ ಆರಂಭಿಸಲಾಗುವುದು ಎಂದರು. ಈಗ ಬಿಡುಗಡೆ ಮಾಡುತ್ತಿರುವುದು ಬರೀ ತುರ್ತು ಪರಿಹಾರಕ್ಕೆ ಮಾತ್ರ. ಬೆಳೆಹಾನಿಗೆ ಸಂಬಂಧಪಟ್ಟಂತೆ ಸಮೀಕ್ಷೆ ನಡೆಸಿ 10-12 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಪೂರ್ಣಪ್ರಮಾಣ ಪರಿಹಾರ ನೀಡಲಾಗುವುದು. ಜತೆಗೆ ಪರಿಹಾರಕ್ಕೆ ಕೇಂದ್ರದ ನೆರವು ಕೋರಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಸಚಿವರಾದ ಕಾಗೋಡು ತಿಮ್ಮಪ್ಪ, ಈಶ್ವರ ಖಂಡ್ರೆ, ಶರಣಪ್ರಕಾಶ ಪಾಟೀಲ ಸೇರಿದಂತೆ ಈ ವೇಳೆ ಹಲವರಿದ್ದರು.
ವೈಮಾನಿಕ ಸಮೀಕ್ಷೆಗಷ್ಟೇ ಸೀಮಿತ: ವೈಮಾನಿಕ ಸಮೀಕ್ಷೆ ವೇಳೆಯೇ ಕಾವೇರಿ ವಿಷಯವಾಗಿ ಸುಪ್ರೀಂಕೋರ್ಟ್ ಆದೇಶ ಹೊರಬಿದ್ದಿತ್ತು. ತೀರ್ಪಿನ ನಂತರ ಸಿಎಂ ಸಿದ್ದರಾಮಯ್ಯ ಕೊಂಚ ವಿಚಲಿತರಾದಂತೆ ಕಂಡರು. ನಂತರ ಜಗದೀಶ್ ಶೆಟ್ಟರ್ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.