

ಬೆಂಗಳೂರು: ಕರ್ನಾಟಕದ ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಮನೆ ಮೇಲೆ ನಡೆದಿದ್ದ ಆದಾಯ ತೆರಿಗೆ ಅಧಿಕಾರಿಗಳ ದಾಳಿ ಮತ್ತು ಶೋಧ ಕಾರ್ಯಾಚರಣೆ ಸತತ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಮಹತ್ವದ ದಾಖಲೆಗಳನ್ನು ಪರಿಶೀಲನೆಗೊಳಪಡಿಸಿದ್ದಾರೆ.
ಇನ್ನು ಸತತ ಮೂರು ದಿನಗಳ ಶೋಧದಲ್ಲಿ ಸಾಕಷ್ಟು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ವೇಳೆ ಆ ದಾಖಲೆಗಳಲ್ಲಿ ಆಪಾರ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಸದಾಶಿವ ನಗರ ಕೆಂಗೇರಿ ನಿವಾಸದಲ್ಲಿ ಅಧಿಕಾರಿಗಳು ದಾಖಲೆಗಳ ಶೋಧ ನಡೆಸಿದ್ದಾರೆ. ಮೂಲಗಳ ಪ್ರಕಾರ ಐಟಿ ದಾಳಿ ವೇಳೆ ಸುಮಾರು 600 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಪಾಸ್ತಿ ಪತ್ತೆಯಾಗಿದೆ ಎಂದು ವರದಿಯೊಂದು ಹೇಳಿದೆ. ಬೆಂಗಳೂರು, ಮೈಸೂರು, ದೆಹಲಿ ಸೇರಿ ವಿವಿಧೆಡೆ ವಶಪಡಿಸಿಕೊಂಡ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಥೈಲ್ಯಾಂಡ್, ದಕ್ಷಿಣ ಕೊರಿಯಾ, ಸಿಂಗಪೂರ್, ಕತಾರ್ ಹಾಗೂ ಲಂಡನ್‍ನಲ್ಲೂ ಕೂಡ ಡಿಕೆಶಿ ಹೂಡಿಕೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಮಾಧ್ಯಮವೊಂದರ ವರದಿಯಂತೆ ಡಿಕೆಶಿವಕುಮಾರ್ ಅವರು ಬಹುತೇಕ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹಣ ತೊಡಗಿಸಿದ್ದು, ಬೇನಾಮಿ ಹೆಸರಿನಲ್ಲಿ ಹೂಡಿಕೆ ಮಾಡಿರುವ ಸಂಬಂಧ ದಾಖಲೆ ಪತ್ರಗಳು ಐ.ಟಿ ಅಧಿಕಾರಿಗಳಿಗೆ ಲಭ್ಯವಾಗಿದೆ ಎಂದು ಹೇಳಲಾಗಿದೆ. ಹೀಗಾಗಿಯೇ ರಾತ್ರಿಯಿಡೀ ಡಿಕೆ ಶಿವಕುಮಾರ್ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.
ಅನುಮಾನಾಸ್ಪದ ಉದ್ಯಮ, ಬ್ಯಾಂಕ್ ಖಾತೆ ಸ್ಥಗಿತ!
ಇದೇ ವೇಳೆ ಡಿಕೆ ಶಿವಕುಮಾರ್ ಮತ್ತು ಅವರ ಆಪ್ತರು, ಸಂಬಂಧಿಗಳ ಅನುಮಾನಾಸ್ಪದ ಉದ್ಯಮಗಳು ಮತ್ತು ಬ್ಯಾಂಕ್ ಖಾತೆಗಳ ಸ್ಥಗಿತಕ್ಕೆ ಐಟಿ ಇಲಾಖೆ ಸೂಚನೆ ನೀಡುವ ಸಾಧ್ಯತೆಯಿದೆ. ಡಿಕೆಶಿ ಪ್ರಕರಣವನ್ನು ಶೀಘ್ರವೇ ಜಾರಿ ನಿರ್ದೇಶನಾಲಯಕ್ಕೆ ವರ್ಗಾಯಿಸಲು ಐಟಿ ಅಧಿಕಾರಿಗಳು ತಯಾರಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ಜಾರಿ ನಿರ್ದೇಶನಾಲಯ ಕೂಡ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡುವ ಪ್ರಕ್ರಿಯೆ ಆರಂಭಿಸಿದ್ದು, ಈಗಾಗಲೇ ಬೆಂಗಳೂರಿನ ಕೆಲವು ಹಿರಿಯ ವಕೀಲರನ್ನು ಜಾರಿ ನಿರ್ದೇಶನಾಲಯ ಸಂಪರ್ಕಿಸಿದೆ ಎನ್ನಲಾಗುತ್ತಿದೆ. ಜಾರಿ ನಿರ್ದೇಶನಾಲಯಕ್ಕೆ ಪ್ರಕರಣ ವರ್ಗಾವಣೆಗೊಂಡರೆ ಯಾವುದೇ ಕ್ಷಣದಲ್ಲಿ ಡಿಕೆಶಿ ಬಂಧನವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.