ರಾಹುಲ್ ಗಾಂಧಿ ಭೇಟಿಗೆ ಏಳು ಬಂಡಾಯ ಜೆಡಿಎಸ್ ಶಾಸಕರ ತಯಾರಿ

ಶಾಸಕ ಜಮೀರ್ ಅಹ್ಮದ್ ಖಾನ್ ಮತ್ತು ಇತರ ಆರು ಮಂದಿ ಜೆಡಿಎಸ್ ನ ಬಂಡಾಯ ಶಾಸಕರು ಇದೇ....
ಜಮೀರ್ ಅಹ್ಮದ್ ಖಾನ್
ಜಮೀರ್ ಅಹ್ಮದ್ ಖಾನ್
Updated on: 
ತುಮಕೂರು: ಶಾಸಕ ಜಮೀರ್ ಅಹ್ಮದ್ ಖಾನ್ ಮತ್ತು ಇತರ ಆರು ಮಂದಿ ಜೆಡಿಎಸ್ ನ ಬಂಡಾಯ ಶಾಸಕರು ಇದೇ 17ರಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ದೆಹಲಿಯಲ್ಲಿ ಭೇಟಿ ಮಾಡಲಿದ್ದಾರೆ. ಈ ವಿಷಯವನ್ನು ಖುದ್ದು ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ರಾಹುಲ್ ಭೇಟಿ ಸಂದರ್ಭದಲ್ಲಿ ಅವರ ಜೊತೆಗೂಡಲಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್, ಇನ್ನೂ 8 ಮಂದಿ ಶಾಸಕರು ಜೆಡಿಎಸ್ ತೊರೆದು ಮುಂದಿನ ಫೆಬ್ರವರಿಯೊಳಗೆ ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಿದರು.
ನನ್ನನ್ನು ಸೇರಿ ಏಳು ಮಂದಿ ಶಾಸಕರು ಡಿಸೆಂಬರ್ ನಲ್ಲಿ ಕಾಂಗ್ರೆಸ್ ಸೇರಲಿದ್ದೇವೆ ಎಂದ ಜಮೀರ್ ಅಹ್ಮದ್ ಖಾನ್ ಇದೇ ಸಂದರ್ಭದಲ್ಲಿ ಜೆಡಿಎಸ್ ನಾಯಕತ್ವದ ವಿರುದ್ಧ ಆರೋಪದ ಸುರಿಮಳೆಗೈದರು. ಜೆಡಿಎಸ್ ಪಕ್ಷ ಕುಟುಂಬಕ್ಕೆ ಸೀಮಿತವಾಗಿದ್ದು ಶಾಸಕರಿಗೆ ತಮ್ಮ ಅಭಿಪ್ರಾಯ ಹೇಳಲು ಸ್ವಾತಂತ್ರ್ಯ ಇಲ್ಲದಾಗಿದೆ. ನಾನು ಮೂಲತಃ ಕಾಂಗ್ರೆಸಿಗ. ಆದಿಚುಂಚನಗಿರಿಯ ದೈವಾಧೀನ ಮಠಾಧೀಶ ಬಾಲಗಂಗಾಧರನಾಥ ಸ್ವಾಮೀಜಿಯವರ ಮನವಿ ಮೇರೆಗೆ ಜೆಡಿಎಸ್ ಸೇರಿದೆ ಎಂದರು.
ಚಿತ್ರನಟ ಉಪೇಂದ್ರ ಅವರು ತಮ್ಮದೇ ರಾಜಕೀಯ ಪಕ್ಷವನ್ನು ಹುಟ್ಟುಹಾಕುವ ಬಗ್ಗೆ ಟೀಕಿಸಿದ ಜಮೀರ್, ಸಿನಿಮಾ ಮಾತ್ರ ರಾಜಕೀಯದಲ್ಲಿ ಕೆಲಸ ಮಾಡುವುದಿಲ್ಲ. ರಾಜಕೀಯಕ್ಕೆ ಬಂದ ಅನೇಕ ನಟರು ಉದ್ಧಾರವಾಗಿಲ್ಲ. ಶಿವರಾಜ್ ಕುಮಾರ್ ಅವರ ಪತ್ನಿ ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಸೋತರು ಎಂದು ಪ್ರತಿಕ್ರಿಯಿಸಿದರು.
ಇನ್ನೊಂದೆಡೆ ಮದ್ದೂರಿನಲ್ಲಿ ಪ್ರತಿಕ್ರಿಯಿಸಿದ ಜೆಡಿಎಸ್ ನ ಮತ್ತೊಬ್ಬ ಬಂಡಾಯ ಶಾಸಕ ಎನ್. ಚೆಲುವರಾಯಸ್ವಾಮಿ ಕೂಡ ಕಾಂಗ್ರೆಸ್ ಸೇರುತ್ತಿರುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com