ವಿಜಯಪುರ ಬಾಲಕಿ ಅತ್ಯಾಚಾರ ಪ್ರಕರಣ: ಸಿಐಡಿ ತನಿಖೆಗೆ ವಹಿಸಿದ ಸಿಎಂ ಸಿದ್ದರಾಮಯ್ಯ

ಶಾಲಾ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
Updated on: 
ವಿಜಯಪುರ: ಶಾಲಾ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. 
ಮಗಳ ಸಾವಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಪೋಷಕರು ನಡು ರಸ್ತೆಯಲ್ಲಿ ಶವವಿಟ್ಟುಕೊಂಡು ಆಹೋರಾತ್ರಿ ಪ್ರತಿಭಟನೆಗಳನ್ನು ನಡೆಸಿದ್ದರು. ಪ್ರತಿಭಟನೆಗೆ ಹಲವು ಸಂಘಟನೆಗಳು ಬೆಂಬಲವನ್ನು ನೀಡಿತ್ತು. ಸಂತ್ರಸ್ತೆ ಕುಟುಂಬಸ್ಥರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಿದರೂ ಕುಟುಂಬಸ್ಥರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಂಡಿರಲಿಲ್ಲ. 
ಈ ಹಿನ್ನಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ. 
9ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯೊಬ್ಬಳನ್ನು ಕಾಮುಕರು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ್ದರು. 
ತನ್ನ ಸಹೋದರಿಯೊಂದಿಗೆ ಬಾಲಕಿ ಶಾಲೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾಮುಕರ ಗುಂಪು ಬಾಲಕಿಯನ್ನು ಹೊತ್ತೊಯ್ದಿತ್ತು. ಕಾಮುಕರಿಂದ ಬಾಲಕಿಯ ಸಹೋದರಿ ತಪ್ಪಿಸಿಕೊಂಡು ಶಾಲಾ ಶಿಕ್ಷಕರಿಗೆ ಮಾಹಿತಿ ನೀಡಿದ್ದಳು. ಶಿಕ್ಷಕರು ಬಾಲಕಿಯನ್ನು ಹುಡುಕುತ್ತಿದ್ದ ವೇಳೆ ಬಾಲಕಿ ಮೃತದೇಹ ದೊರಕಿತ್ತು. 
ಪ್ರಕರಣ ಸಂಬಂಧ ವಿಜಯಪುರ ಪೊಲೀಸರು ಐವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ. ಐವರ ಪೈಕಿ ಇಬ್ಬರು ಅಪ್ರಾಪ್ತರಾಗಿದ್ದಾರೆಂದು ತಿಳಿದುಬಂದಿದೆ. 
ಡಿ.23ರಂದು ವಿಜಯಪುರ ಬಂದ್
ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ದಲಿತ ಸಂಘಟನೆಗಳು ಹಾಗೂ ಎನ್'ಜಿಒ ಸಂಸ್ಥೆಗಳು ಶನಿವಾರ ವಿಜಯಪುರದಲ್ಲಿ ಬಂದ್ ಆಚರಣೆ ಮಾಡಲು ಕರೆ ನೀಡಿವೆ. 
ಈ ಕುರಿತಂತೆ ಮಾತನಾಡಿರುವ ದಲಿತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಶ್ರೀಕಾಂತ್ ಪೂಜಾರಿಯವರು, ಪ್ರಕರಣದಿಂದ ರಾಜಕೀಯ ಪಕ್ಷಗಳು ಲಾಭ ಪಡೆದುಕೊಳ್ಳಲು ಯತ್ನಿಸುತ್ತಿವೆ. ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡಬೇಕೆಂಬುದು ನಮ್ಮ ಆಗ್ರಹವಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ತಂಡದಲ್ಲಿ ಉನ್ನತಾಧಿಕಾರಿಗಳು ಹಾಗೂ ಅಲ್ಪಸಂಖ್ಯಾತ ಆಯೋಗದ ಸದಸ್ಯರನ್ನು ನೇಮಿಸುವಂತೆ ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮಾಡಿಕೊಂಡಿದ್ದೇವೆಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com