ಬೆಂಗಳೂರಿನಲ್ಲಿ ನರ್ಸರಿ ಶಿಕ್ಷಣಕ್ಕೆ ಪ್ರವೇಶ ಪಡೆಯಬೇಕೆ? ಅಬ್ಬಾ, ಅದು ಖಂಡಿತ ಮಕ್ಕಳಾಟ ಅಲ್ಲ!

ಶಾಲೆಗೆ ಮೊದಲ ದಿನ ಹೋಗುವಾಗ ಮಕ್ಕಳು ಅಳುವುದು ಸಾಮಾನ್ಯ. ಹೊಸ ಪರಿಸರ, ಹೊಸ...
ಶಾಲೆಗಳ ಹೊರಗೆ ರಾತ್ರಿಯಿಡೀ ನಿದ್ದೆಯಿಲ್ಲದೆ ಪ್ರವೇಶ ಅರ್ಜಿಗೆ ಕಾಯುತ್ತಿರುವ ಪೋಷಕರು
ಶಾಲೆಗಳ ಹೊರಗೆ ರಾತ್ರಿಯಿಡೀ ನಿದ್ದೆಯಿಲ್ಲದೆ ಪ್ರವೇಶ ಅರ್ಜಿಗೆ ಕಾಯುತ್ತಿರುವ ಪೋಷಕರು
Updated on: 
ಬೆಂಗಳೂರು: ಶಾಲೆಗೆ ಮೊದಲ ದಿನ ಹೋಗುವಾಗ ಮಕ್ಕಳು ಅಳುವುದು ಸಾಮಾನ್ಯ. ಹೊಸ ಪರಿಸರ, ಹೊಸ ಮುಖಗಳನ್ನು ನೋಡುವಾಗ ಮಕ್ಕಳಿಗೆ ದಿಗಿಲು ಉಂಟಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಪೂರ್ವ ಪ್ರಾಥಮಿಕ ಮತ್ತು ಪ್ಲೇ ಹೋಂ ಶಿಕ್ಷಣ ಸಂಸ್ಥೆಗಳು ಮಕ್ಕಳ  ಪ್ರವೇಶಾತಿಯಲ್ಲಿ ನಡೆಸುತ್ತಿರುವ ಪ್ರಕ್ರಿಯೆಗಳು ನಿಜಕ್ಕೂ ಪೋಷಕರಲ್ಲಿ ಕಣ್ಣೀರು ಸುರಿಸುವಂತೆ ಮಾಡುತ್ತವೆ. 
ಈ ವರ್ಷ ಮುಗಿಯುವುದರೊಳಗೆ ಅನೇಕ ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ಸಾಲಿನ ಪ್ರವೇಶ ಪ್ರಕ್ರಿಯೆಯನ್ನು ಮುಗಿಸಲು ನೋಡುತ್ತಿದ್ದು, ತಮ್ಮ ಮಕ್ಕಳಿಗೆ ಉತ್ತಮ ಶಾಲೆಯಲ್ಲಿ ಪ್ರವೇಶ ಗಿಟ್ಟಿಸಿಕೊಳ್ಳುವುದು ಪೋಷಕರಿಗೆ ತೀವ್ರ ಒತ್ತಡ ಮತ್ತು ಆಘಾತ ಅನುಭವವನ್ನುಂಟುಮಾಡುತ್ತಿವೆ.
ತಮ್ಮ ಎರಡೂವರೆ ವರ್ಷದ ಮಗನನ್ನು ಪ್ರಿ ನರ್ಸರಿಗೆ ಸೇರಿಸಲು ಮುಂದಾಗಿದ್ದ 32 ವರ್ಷದ ಐಟಿ ಉದ್ಯೋಗಿ ಪ್ರದೀಪ್ ಅವರಿಗೆ ಕೂಡ ಇಂತಹದ್ದೇ ಅನುಭವವಾಗಿದೆ. ನಿಮ್ಮ ಮಗ ಎಲ್ಲ ತಿಳಿದುಕೊಂಡಿದ್ದಾನೆಯೇ? ಅವನಿಗೆ ಇಂಗ್ಲೀಷ್ ಮಾತನಾಡಲು ಬರುತ್ತದೆಯೇ? ಅವನಷ್ಟಕ್ಕೆ ತಿನ್ನಲು ಅವನಿಗೆ ಅಭ್ಯಾಸವಿದೆಯೇ? ಇತ್ಯಾದಿ ಪ್ರಶ್ನೆಗಳನ್ನು ಪ್ರದೀಪ್ ಗೆ ಶಾಲೆಯೊಂದರ ತರಗತಿ ಸಂಯೋಜಕರು ಕೇಳಿದ್ದಾರಂತೆ.ಶಾಲೆಯಲ್ಲಿ ಮಗನ ಪರವಾಗಿ ಸಂದರ್ಶನಕ್ಕೆ ಹೋದ ಪ್ರದೀಪ್ ಗೆ ನಿರಾಶೆಯಾಗಿದೆ.
ಮಕ್ಕಳನ್ನು ದಾಖಲು ಮಾಡಿಕೊಳ್ಳಲು ಪ್ರವೇಶ ಅರ್ಜಿಗಾಗಿ ಪೋಷಕರು ರಾತ್ರಿಯಿಡೀ ಶಾಲೆಯ ಹೊರಗೆ ನಿದ್ದೆಯಿಲ್ಲದೆ ಕಳೆಯುತ್ತಿದ್ದಾರೆ. ತಮ್ಮ ಮಕ್ಕಳನ್ನು ಉತ್ತಮ ಶಾಲೆಯಲ್ಲಿ ಸೇರಿಸಲು 3 ಲಕ್ಷದವರೆಗೂ ಖರ್ಚು ಮಾಡಲು ಪೋಷಕರು ಸಿದ್ದವಾಗಿದ್ದಾರೆ. ಬೆಂಗಳೂರಿನಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದು ಇಂಜಿನಿಯರಿಂಗ್,  ಮೆಡಿಕಲ್ ಓದಿಸುವುದಕ್ಕಿಂತ ಕಷ್ಟ ಎಂದು ಅನೇಕ ಪೋಷಕರ ಅಭಿಪ್ರಾಯವಾಗಿದೆ.
ಪೋಷಕರಿಬ್ಬರು ಉದ್ಯೋಗದಲ್ಲಿದ್ದರೆ ಅನೇಕ ಶಾಲೆಗಳಲ್ಲಿ ಪ್ರವೇಶ ಸಿಗುವುದಿಲ್ಲ ಎನ್ನಲಾಗುತ್ತಿದೆ. ಭಾನುವಾರ ಮಾತ್ರ ನಮಗೆ ರಜೆ ಇದೆ ಎಂದು ಹೇಳಿದ್ದಕ್ಕೆ ವಾರದಲ್ಲಿ 5 ದಿನಗಳು ಮಾತ್ರ ಕೆಲಸ ಮಾಡುವ ಪೋಷಕರ ಮಕ್ಕಳಿಗೆ ನಾವು ಆದ್ಯತೆ ನೀಡುತ್ತೇವೆ. ಇಲ್ಲದಿದ್ದರೆ ಪೋಷಕರಿಗೆ ತಮ್ಮ ಮಕ್ಕಳಿಗೆ ಹೆಚ್ಚಿನ ಗಮನ ಕೊಡಲು ಸಾಧ್ಯವಾಗುವುದಿಲ್ಲ ಎಂದು ಶಾಲೆಯ ಪ್ರವೇಶಾತಿ ಮುಖ್ಯಸ್ಥೆ ಹೇಳಿದರು ಎನ್ನುತ್ತಾರೆ ಮತ್ತೊಬ್ಬ ದಂಪತಿ. ಒಡಹುಟ್ಟಿದವರು ಮತ್ತು ಶಾಲೆಯಿಂದ ಮನೆಗೆ ಇರುವ ದೂರ ನೋಡಿಕೊಂಡು ಕೂಡ ಶಾಲೆಗಳಲ್ಲಿ ಪ್ರವೇಶವಕಾಶ ನೀಡಲಾಗುತ್ತದೆ.
ಶಿಕ್ಷಣ ಇಲಾಖೆಯ ನಿಯಮ ಪ್ರಕಾರ ವರ್ಷದ ಕೊನೆಗೆ ಮುಂಚೆ ಪ್ರವೇಶವಕಾಶ ಪ್ರಕ್ರಿಯೆ ಮುಗಿಸುವುದು ನಿಯಮಬಾಹಿರ. ಈ ನಿಯಮವನ್ನು ಧಿಕ್ಕರಿಸಿ ಅನೇಕ ಶಾಲೆಗಳಲ್ಲಿ ಈಗಾಗಲೇ ಪ್ರವೇಶ ಪ್ರಕ್ರಿಯೆ ಮುಗಿಸಲಾಗಿದೆ. ಸಂಪೂರ್ಣ ಶುಲ್ಕ ತೆಗೆದುಕೊಳ್ಳುತ್ತಾರೆ, ಆದರೆ ಅದಕ್ಕೆ ರಶೀದಿ ನೀಡುವುದಿಲ್ಲ ಎಂದು ಹಲವು ಪೋಷಕರು ಹೇಳುತ್ತಾರೆ.
ಪೋಷಕರ ಈ ತೊಂದರೆಯನ್ನು ಮನಗಂಡಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಇತ್ತೀಚೆಗೆ ಸಭೆ ನಡೆಸಿ ಶಾಲೆಗಳು ಕಾರ್ಯ ಕ್ರಮಗಳ ದಿನಾಂಕಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಆದೇಶ ನೀಡಿದೆ. ಆ ಮೂಲಕವಾದರೂ ಪೋಷಕರಿಗೆ ತಮ್ಮ ಮಕ್ಕಳ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳ ವಿವರ ಗೊತ್ತಾಗಬಹುದು ಎಂಬುದು ಇಲಾಖೆಯ ಉದ್ದೇಶವಾಗಿದೆ.
ಕಾನೂನು ಏನು ಹೇಳುತ್ತದೆ: 2009ರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಯ ಸೆಕ್ಷನ್ 13ರ ಪ್ರಕಾರ, ಶಾಲೆಗಳ ಪ್ರವೇಶ ಪ್ರಕ್ರಿಯೆಯಲ್ಲಿ ಮಕ್ಕಳಿಗೆ ಸಂದರ್ಶನವನ್ನು ನಡೆಸುವಂತಿಲ್ಲ. ಮಕ್ಕಳು ಮತ್ತು ಪೋಷಕರ ಜೊತೆ ಸಂದರ್ಶನ, ಪ್ರವೇಶ ಪರೀಕ್ಷೆ, ಹಿಂದಿನ ತರಗತಿಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮಕ್ಕಳ ಆಯ್ಕೆ ಇವೆಲ್ಲವೂ ಶಿಕ್ಷಣ ಹಕ್ಕು ಕಾಯ್ದೆಗಳಿಗೆ ವಿರುದ್ಧವಾಗಿವೆ.
ಶಾಲೆಗಳ ಮುಂದೆ ಅನಗತ್ಯ ಸರದಿ: ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗಲು ಇನ್ನೂ ಎಂಟು ತಿಂಗಳು ಬಾಕಿ ಇರುವಾಗ ಹಲವು ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆ ಮುಗಿದಿದ್ದು ಶಾಲೆಗಳಿಗೆ ವಿಚಾರಿಸಲೆಂದು ಪೋಷಕರು ಹೋದರೆ ವಾಪಸ್ ಬರಬೇಕಾದ ಪರಿಸ್ಥಿತಿಯಿದೆ.ಹಲವು ಶಾಲೆಗಳಲ್ಲಿ ಎರಡನೇ ಸುತ್ತಿನ ಪ್ರವೇಶ ಅರ್ಜಿಗಳನ್ನು ನೀಡಲಾಗುತ್ತಿದೆ. 
''ನಾನು ಮತ್ತು ನನ್ನ ಪತ್ನಿ ರಾತ್ರಿ 10.30ಕ್ಕೆ ಹೋಗಿ ಮರುದಿನ ಬೆಳಗ್ಗೆ 8.30ರವರೆಗೆ ಸಾಲಿನಲ್ಲಿ ನಿಂತೆವು ಎನ್ನುತ್ತಾರೆ ಪೋಷಕರೊಬ್ಬರು.
 ಶಾಲಾ ಮುಖ್ಯಸ್ಥರನ್ನು ಈ ಬಗ್ಗೆ ಕೇಳಿದಾಗ ಇಡೀ ರಾತ್ರಿ ಸಾಲಿನಲ್ಲಿ ಕಾದು ನಿಲ್ಲಿ ಎಂದು ನಾವು ಹೇಳಿಲ್ಲ. ಎಷ್ಟು ಹೊತ್ತಿಗೆ ಬಂದು ನಿಂತರೂ ನಾವು ಅರ್ಜಿ ನೀಡಲು ಆರಂಭಿಸುವುದು ಬೆಳಗ್ಗೆ 8.30ರ ನಂತರವೇ. ಪೋಷಕರು ಇಂತಹ ವಾತಾವರಣವನ್ನು ಸೃಷ್ಟಿಸುವುದೇ ಹೊರತು ಶಾಲೆಗಳಲ್ಲ ಎನ್ನುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com