

ಹಾಸನ/ ದೇವಿಹಳ್ಳಿ: ನನಗೆ ಮಿಲಿಟರಿಗೆ ಸೇರಬೇಕೆಂಬ ಆಸೆ ಇತ್ತು. ಆದರೆ, ನನ್ನ ಮಗ ನನ್ನ ಆಸೆಯನ್ನು ಈಡೇರಿಸಿದ್ದ, ಆದರೆ ಆತ ದೇಶಕ್ಕಾಗಿ ಪ್ರಾಣಬಿಟ್ಟ ಎಂದು ಜಮ್ಮು ಕಾಶ್ಮೀರದ ಹಿಮಪಾತದಲ್ಲಿ ಸಾವನ್ನಪ್ಪಿದ ಹಾಸನದ ದೇವಿಹಳ್ಳಿ ಗ್ರಾಮದ ಯೋಧ ಸಂದೀಪ್ ಕುಮಾರ್ ಅವರ ತಂದೆಯ ಮಾತುಗಳು.
ಸಂದೀಪ್ ಕುಮಾರ್ ಗೆ ಗುರೇಜ್ ಗೆ ವರ್ಗಾಯಿಸಲಾಗಿತ್ತು, ಆತ ತನ್ನ ಲಗ್ಗೇಜ್ ಪ್ಯಾಕ್ ಮಾಡಿ ಹೆಲಿಕಾಪ್ಟರ್ ಗಾಗಿ ಕಾಯುತ್ತಿದ್ದ, ಆತನನ್ನು ಗುರೇಜ್ ಬದಲು ಬೇರೆಡೆ ವರ್ಗಾಯಿಸಿದ್ದರೇ ನನ್ನ ಮಗ ಸಾಯುತ್ತಿರಲಿಲ್ಲ ಎಂದು ಅವರ ತಂದೆ ಪುಟ್ಟರಾಜು ಶೆಟ್ಟಿ ನೊಂದು ನುಡಿದಿದ್ದಾರೆ.
ಗುರೆಜ್ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಪಾರ್ಥಿವ ಶರೀರವನ್ನು ಸೇನಾ ಶಿಬಿರಕ್ಕೆ ತರಲು ಆಗುತ್ತಿಲ್ಲ. ಹೆಲಿಕಾಪ್ಟರ್ ಬಂದು ವಾಪಸ್ ಹೋಗುತ್ತಿದೆ. ಶ್ರೀನಗರಕ್ಕೆ ತಂದು ಶವಪರೀಕ್ಷೆ ನಂತರ ಕುಟುಂಬದವರಿಗೆ ಹಸ್ತಾಂತರ ಮಾಡಲಾಗುವುದೆಂದು ಸೇನಾ ಅಧಿಕಾರಿಗಳು ದೂರವಾಣಿ ಮೂಲಕ ಹೇಳಿದ್ದಾರೆ.
ಸೇನೆ ಸೇರಿ ದೇಶಸೇವೆ ಮಾಡಬೇಕೆಂಬ ಹೆಬ್ಬಯಕೆ ಹೊಂದಿದ್ದ. ಅದಕ್ಕಾಗಿ ಪ್ರತಿದಿನ ಕಠಿಣ ತಯಾರಿ ನಡೆಸಿ, ಮಂಗಳೂರಿನಲ್ಲಿ ನಡೆದ ನೇಮಕಾತಿ ರ್ಯಾಲಿಯಲ್ಲಿ ಸೇನೆಗೂ ಸೇರಿದ ಎಂದು ಸಂದೀಪ್ ಕುಮಾರ್ ಸಹೋದರಿ ಸುಮಾ ಹೇಳಿದ್ದಾರೆ. ಸಂದೀಪ್ ಅವರಿಗೆ ಅತ್ತೆ ಮಗಳೊಂದಿಗೆ ಮದುವೆ ನಿಶ್ಚಯವಾಗಿತ್ತು.
ಯೋಧನ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ಭೇಟಿ ಮಾಡಿ ಸಾಂತ್ವನ ಹೇಳಿಲ್ಲ. ಗ್ರಾಮ ದಲ್ಲಿ ಚಂದಾ ಎತ್ತಿ ಅಂತ್ಯಸಂಸ್ಕಾರ ಮಾಡುವ ಸ್ಥಳವನ್ನು ಮಟ್ಟ ಮಾಡಿದ್ದೇವೆ. ಜಿಲ್ಲಾಧಿಕಾರಿ ಕಚೇರಿ ಎದುರೇ ಶವ ಇಟ್ಟು ಪ್ರತಿಭಟನೆ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಪ್ರತಿಕೂಲ ಹವಮಾನದಿಂದಾಗಿ ಇದುವರೆಗೂ ಶವವನ್ನು ಸಂದೀಪ್ ಹುಟ್ಟೂರಿಗೆ ತರಲಾಗಿಲ್ಲ, ಇಂದು ಡಿ.ಪಿ.ಸಂದೀಪ್‌ಕುಮಾರ್ ಅವರ ಪಾರ್ಥಿವ ಶರೀರವನ್ನು ವಾಯುಪಡೆಯ ವಿಮಾನದಲ್ಲಿ ದೆಹಲಿಯಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ತರಲಾಗುವುದು.