ರಾಜ್ಯ

ಸ್ವಾವಲಂಬನೆಗೆ ದಾರಿಯಾಯ್ತು 'ಗೃಹಲಕ್ಷ್ಮಿ ಯೋಜನೆ' ಹಣ: ಜವಳಿ ಉದ್ಯಮ ಆರಂಭಿಸಿದ ಮಂಗಳೂರು ಮೂಲದ ಮಹಿಳೆ!

ಬಂಟ್ವಾಳದ ಮಾವಿನಕಟ್ಟೆ ನಿವಾಸಿ ಶಕುಂತಳಾ ಜೆ. ಕುಂದರ್ ಅವರು ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ದೊರೆಯುತ್ತಿದ್ದ 2,000 ರೂಪಾಯಿಗಳನ್ನು ಮೂರು ವರ್ಷಗಳಿಂದ ಉಳಿತಾಯ ಮಾಡಿಕೊಂಡು ಬಂದಿದ್ದರು. ಹೀಗೆ ಮೂರು ವರ್ಷಗಳಲ್ಲಿ 72,000 ರೂಪಾಯಿ ಉಳಿತಾಯ ಮಾಡಿಕೊಂಡಿದ್ದರು.

ಸ್ವಾವಲಂಬನೆಗೆ ದಾರಿಯಾಯ್ತು 'ಗೃಹಲಕ್ಷ್ಮಿ ಯೋಜನೆ' ಹಣ: ಜವಳಿ ಉದ್ಯಮ ಆರಂಭಿಸಿದ ಮಂಗಳೂರು ಮೂಲದ ಮಹಿಳೆ!
ಶಕುಂತಲಾ ಜೆ ಕುಂದರ್ ಅವರ ಜವಳಿ ಅಂಗಡಿ
Published On :

ಮಂಗಳೂರು: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಸಿಕ್ಕಿದ ಹಣವನ್ನು ಉಳಿತಾಯ ಮಾಡಿ ಬಂಟ್ವಾಳದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಜವಳಿ ಅಂಗಡಿ ಆರಂಭಿಸಿದ್ದಾರೆ.

ಬಂಟ್ವಾಳದ ಮಾವಿನಕಟ್ಟೆ ನಿವಾಸಿ ಶಕುಂತಳಾ ಜೆ. ಕುಂದರ್ ಅವರು ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ದೊರೆಯುತ್ತಿದ್ದ 2,000 ರೂಪಾಯಿಗಳನ್ನು ಮೂರು ವರ್ಷಗಳಿಂದ ಉಳಿತಾಯ ಮಾಡಿಕೊಂಡು ಬಂದಿದ್ದರು. ಹೀಗೆ ಮೂರು ವರ್ಷಗಳಲ್ಲಿ 72,000 ರೂಪಾಯಿ ಉಳಿತಾಯ ಮಾಡಿಕೊಂಡಿದ್ದರು. ಇದಕ್ಕೆ ತಮ್ಮ ಇತರ ಉಳಿತಾಯದ ಹಣವನ್ನೂ ಸೇರಿಸಿ ಮಾವಿನಕಟ್ಟೆಯಲ್ಲಿ 'ಶ್ರೀ ದುರ್ಗಾ ಗೃಹಲಕ್ಷ್ಮಿ ಟೆಕ್ಸ್‌ಟೈಲ್' ಹೆಸರಿನಲ್ಲಿ ಫ್ಯಾನ್ಸಿ, ಜವಳಿ ಹಾಗೂ ಟೈಲರಿಂಗ್ ಶಾಪ್ ಆರಂಭಿಸಿದ್ದಾರೆ.

ಜವಳಿ ಅಂಗಡಿ ತೆರೆಯಲು ಒಟ್ಟು 2.5 ಲಕ್ಷ ರೂಪಾಯಿ ಖರ್ಚು ಮಾಡಿದ್ದು, ಅಕ್ಟೋಬರ್ 15ರಂದು ಅಂಗಡಿ ಉದ್ಘಾಟನೆಯಾಗಿದೆ. ಅಂಗಡಿಯಲ್ಲಿ ಮಾರಾಟಕ್ಕಿರುವ ಬಹುತೇಕ ಉಡುಪುಗಳನ್ನು ಬೆಂಗಳೂರಿನಿಂದ ಖರೀದಿಸಿ ತಂದಿದ್ದಾರೆ.

ಶಕುಂತಳಾ ಅವರು ಕಳೆದ 23 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆರಂಭದಲ್ಲಿ ಕಕ್ಕೆಪದವು ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಬಳಿಕ ಮಿಯಾರುಪಲ್ಕೆ ಅಂಗನವಾಡಿಗೆ ವರ್ಗಾವಣೆಯಾಗಿದ್ದಾರೆ.

ತಮಗೆ ಸಿಕ್ಕುವ ವೇತನ ಕುಟುಂಬದ ಖರ್ಚುಗಳನ್ನು ನಿಭಾಯಿಸಲು ಸಾಕಾಗುತ್ತಿಲ್ಲ. ಕೆಲವೊಮ್ಮೆ ಮೂರು ತಿಂಗಳವರೆಗೂ ವೇತನ ಸಿಗದೆ ವಿಳಂಬವಾಗುವುದರಿಂದ ಸಾಲದ ಕಂತುಗಳನ್ನು ಪಾವತಿಸುವುದೂ ಕಷ್ಟವಾಗುತ್ತಿದೆ. ಹೆಚ್ಚುವರಿ ಆದಾಯ ಗಳಿಸಿ ಕುಟುಂಬದ ಖರ್ಚುಗಳನ್ನು ನಿಭಾಯಿಸುವ ಉದ್ದೇಶದಿಂದ ಈ ಹಿಂದೆ ಸಾಬೂನು ಮಾರಾಟ, ಟೈಲರಿಂಗ್ ಕೆಲಸ ಹಾಗೂ ಗೋಧಿ ಹಿಟ್ಟು ಮಾರಾಟ ಸೇರಿದಂತೆ ಹಲವು ಸಣ್ಣಪುಟ್ಟ ಉದ್ಯಮಗಳನ್ನು ನಡೆಸುತ್ತಿದ್ದೆ ಎನ್ನುತ್ತಾರೆ ಶಕುಂತಲಾ.

ಅಂಗನವಾಡಿ ಕೆಲಸದ ವೇತನ ಸಾಕಾಗುತ್ತಿರಲಿಲ್ಲ. ಅಲ್ಲದೆ, ಅದು ಸರಿಯಾದ ಸಮಯಕ್ಕೆ ಬರುತ್ತಿರಲಿಲ್ಲ. ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಸಿಗುತ್ತಿದ್ದ 2,000 ರೂಪಾಯಿಗಳನ್ನು ಉಳಿತಾಯ ಮಾಡುವ ಮೂಲಕ ಬಹುಕಾಲದ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಯಿತು. ನನ್ನ ಉದ್ಯಮ ಆರಂಭಿಸಲು ನೆರವಾದ ಯೋಜನೆಯ ನೆನಪಿಗಾಗಿ ಅಂಗಡಿಗೆ 'ಶ್ರೀ ದುರ್ಗಾ ಗೃಹಲಕ್ಷ್ಮಿ ಟೆಕ್ಸ್‌ಟೈಲ್' ಎಂದು ಹೆಸರಿಟ್ಟಿದ್ದೇನೆ ಎಂದು ಹೇಳುತ್ತಾರೆ.

ಶಕುಂತಳಾ ಅವರು ಬೆಳಗ್ಗೆ 7.30ಕ್ಕೆ ಅಂಗಡಿ ತೆರೆಯುತ್ತಾರೆ. ಬಳಿಕ 9.30ಕ್ಕೆ ಅಂಗನವಾಡಿಗೆ ಹೋಗಿ ಕರ್ತವ್ಯ ನಿರ್ವಹಿಸುತ್ತಾರೆ. ಮಧ್ಯಾಹ್ನ 3.30ಕ್ಕೆ ಅಂಗನವಾಡಿ ಕೆಲಸ ಮುಗಿದ ಬಳಿಕ ಮತ್ತೆ ಅಂಗಡಿಯಲ್ಲಿ ವ್ಯಾಪಾರ ಮುಂದುವರಿಸುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.