ಬೆಂಗಳೂರು: ಉಪನಗರ ರೈಲು ಯೋಜನೆಯಡಿ ಡಿಸೆಂಬರ್ ಅಂತ್ಯದೊಳಗೆ ನಾಲ್ಕು ಮೆಮು (ಮೇನ್ ಲೈನ್ ಎಲೆಕ್ಟ್ರಿಕಲ್ ಮಲ್ಟಿಪಲ್ ಯೂನಿಟ್) ರೈಲುಗಳು ಸಂಚಾರ ಆರಂಭಿಸಲಿವೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಮಾತನಾಡಿದ ಅವರು, ಡಿಸೆಂಬರ್ ನಲ್ಲಿ ಉಪನಗರ ಮೆಮು ರೈಲು ಸಂಚಾರ ಆರಂಭವಾಗಲಿದ್ದು, ಹಂತ ಹಂತವಾಗಿ ರೈಲುಗಳ ಸಂಖ್ಯೆ ಏರಿಸಲಾಗುವುದು.
ಸಾಂಪ್ರಾದಾಯಿಕ ಪ್ಯಾಸೆಂಜರ್ ರೈಲುಗಳ ಬದಲಿಗೆ ಹೊಸ ಮೆಮು ರೈಲುಗಳನ್ನು ಕಾರ್ಯಾಚರಣೆಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಮೆಟ್ರೋ 1 ನೇ ಹಂತದ ಕಾಮಗಾರಿ ಪೂರ್ಣಗೊಂಡಿರುವುದು ನಗರದಲ್ಲಿ ಸ್ವಲ್ಪ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡಿದೆ. ಉಪನಗರ ರೈಲು ಯೋಜನೆ ಜಾರಿಯಾದರೇ ಶೇ.30 ರಿಂದ 40 ರಷ್ಟು ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ ಎಂದು ವಿವರಿಸಿದ್ದಾರೆ.
ಉಪನಗರ ರೈಲು ಯೋಜನೆಗೆ 10,500 ಕೋಟಿ ವೆಚ್ಚವಾಗಲಿದ್ದು, ಶೇ. 20 ರಷ್ಟು ರಾಜ್ಯಮತ್ತು ಶೇ. 20 ರಷ್ಟು ಯೋಜನಾ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದು ಹೇಳಿದ್ದಾರೆ. ರೈಲ್ವೆ ಸಚಿವ ಸುರೇಶ್ ಪ್ರಭು ಅವರ ಜೊತೆ ಮಾತನಾಡಿ ತಿಂಗಳಾಂತ್ಯದೊಳಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಉಪನಗರ ರೈಲು ಯೋಜನೆಗೆ ರಾಜ್ಯ ಸರ್ಕಾರವು 327 ಕೋಟಿ ರು ನೀಡಲು ಸಿದ್ಧವಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ,ಜೆ ಜಾರ್ಜ್ ಹೇಳಿದ್ದಾರೆ.